ADVERTISEMENT

ಮಕ್ಕಳನ್ನು ಕೊಂದ ತಂದೆಗೆ ಮರಣ ದಂಡನೆ

ತನ್ನ ಇಬ್ಬರು ಪುತ್ರರನ್ನು ಕೊಲೆ ಮಾಡಿದ್ದ ಅಪರಾಧಿ ಸತೀಶ್‌ ಕುಮಾರ್‌ಗೆ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2020, 7:47 IST
Last Updated 22 ಮಾರ್ಚ್ 2020, 7:47 IST
   

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳನ್ನು ಕಬ್ಬಿಣದ ಉಳಿಯಿಂದ ಚುಚ್ಚಿ ಕೊಲೆ ಮಾಡಿದ್ದ ತಂದೆಗೆ 46ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮರಣದಂಡನೆ ವಿಧಿಸಿದೆ.

ಸುಬ್ರಹ್ಮಣ್ಯಪುರ ನಿವಾಸಿ ಸತೀಶ್ ಕುಮಾರ್ ಅಪರಾಧಿ. ತನ್ನ ಮಕ್ಕಳಾದ ಶಿವಶಂಕರ್ (5) ಮತ್ತು ಆದಿತ್ಯ (4) ಎಂಬುವರನ್ನು ಸತೀಶ್ ಕುಮಾರ್‌ ಕೊಲೆ ಮಾಡಿದ್ದ.

ಸತೀಶ್‌ಕುಮಾರ್– ಜ್ಯೋತಿ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು. ಚುಂಚಘಟ್ಟ ಮುಖ್ಯ ರಸ್ತೆಯ ಬೀರೇಶ್ವರ ನಗರದಲ್ಲಿ ದಂಪತಿ ನೆಲೆಸಿದ್ದರು. ಸತೀಶ್ ಕೂಲಿ ಕೆಲಸ ಮಾಡುತ್ತಿದ್ದರೆ, ಜ್ಯೋತಿ ಮನೆ ಕೆಲಸ ಮಾಡುತ್ತಿದ್ದರು. ಇಬ್ಬರು ಮಕ್ಕಳು ಅಂಗನವಾಡಿಗೆ ಹೋಗುತ್ತಿದ್ದರು. ಸತೀಶ್ ಮದ್ಯವ್ಯಸನಿಯಾಗಿದ್ದ. ಜ್ಯೋತಿ ದುಡಿದ ಹಣದಲ್ಲಿ ಕುಟುಂಬ ನಡೆಯುತ್ತಿತ್ತು.

ADVERTISEMENT

2016 ನ.15ರಂದು ಬೆಳಿಗ್ಗೆ ಮನೆ ಕೆಲಸಕ್ಕೆ ಹೋಗುವ ಮೊದಲು, ‘ಒಲೆಯ ಮೇಲೆ ಸಾಂಬಾರು ಮಾಡಲು ಇಟ್ಟಿದ್ದೇನೆ. ಅದು ಬೆಂದ ಬಳಿಕ ತೆಗೆದು ಮಕ್ಕಳಿಗೆ ಊಟ ಬಡಿಸಿ’ ಎಂದು ಸತೀಶ್‌ಗೆ ಜ್ಯೋತಿ ತಿಳಿಸಿದ್ದರು. ಆದರೆ, ಕೆಲಸ ಮುಗಿಸಿ ಜ್ಯೋತಿ ಮನೆಗೆ ಹಿಂದಿರುಗಿದಾಗ ಒಲೆಯಲ್ಲಿದ್ದ ಸಾಂಬಾರು ಪಾತ್ರೆ ಸುಟ್ಟು ಕರಕಲಾಗಿತ್ತು. ಈ ಬಗ್ಗೆ ಪತಿಯನ್ನು ಜ್ಯೋತಿ ಪ್ರಶ್ನಿಸಿದ್ದರು. ಈ ವಿಚಾರವಾಗಿ ದಂಪತಿ ನಡುವೆ ಜಗಳ ಉಂಟಾಗಿತ್ತು. ಇದರಿಂದ ನೊಂದ ಜ್ಯೋತಿ, ಮಕ್ಕಳನ್ನು ಕರೆದುಕೊಂಡು ತವರು ಮನೆಗೆ ತೆರಳಿದ್ದರು.

ಮರುದಿನ ಬೆಳಿಗ್ಗೆ ಜ್ಯೋತಿ ಅವರ ಸಹೋದರಿ, ಮಕ್ಕಳನ್ನು ಅಂಗನವಾಡಿಗೆ ಬಿಟ್ಟು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಅಂಗನವಾಡಿಗೆ ಬಂದಿದ್ದ ಸತೀಶ್, ಮಕ್ಕಳನ್ನು ಮನೆಗೆ ಕರೆತಂದಿದ್ದ. ಮಧ್ಯಾಹ್ನ 1 ಗಂಟೆಗೆ ಕೆಲಸ ಮುಗಿಸಿಕೊಂಡು ಜ್ಯೋತಿ, ಪತಿಯ ಮನೆಗೆ ಬಂದು ನೋಡಿದಾಗ, ಇಬ್ಬರು ಮಕ್ಕಳ ತಲೆ, ಮುಖಕ್ಕೆ ಹಲ್ಲೆ ನಡೆಸಿ ಹತ್ಯೆ ನಡೆಸಿರುವುದು ಬಯಲಿಗೆ ಬಂದಿತ್ತು. ಜ್ಯೋತಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.