
ಬೆಂಗಳೂರು: ದೋಷಪೂರಿತ ನಂಬರ್ ಪ್ಲೇಟ್ ಅಳವಡಿಸಿಕೊಂಡು ಸಂಚರಿಸುತ್ತಿದ್ದ ಆಟೊ ಚಾಲಕರೊಬ್ಬರ ವಿರುದ್ಧ ಮಾಗಡಿ ರಸ್ತೆ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮಾಗಡಿ ರಸ್ತೆ ಠಾಣೆ ಎಎಸ್‌ಐ ಕೆ.ಆರ್.ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಕೆ.ಜಿ.ಹಳ್ಳಿ ನಿವಾಸಿ, ಆಟೊ ಚಾಲಕ ಶಫೀಕ್ ಪಾಷಾ ಎಂಬುವವರ ವಿರುದ್ಧ ಬಿಎನ್ಎಸ್ 318(4) (ವಂಚನೆ) ಆರೋಪದ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆಟೊ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಸೆ.29ರಂದು ರಾತ್ರಿ 9.30ರ ಸುಮಾರಿಗೆ ಎಎಸ್‌ಐ ಕುಮಾರ್ ಮತ್ತು ಸಿಬ್ಬಂದಿ ರಾತ್ರಿ ಗಸ್ತು ನಡೆಸುತ್ತಿದ್ದರು. ಆಗ ಬಾತ್ಮೀದಾರರ ಮಾಹಿತಿ ಮೇರೆಗೆ ರಾಜಾಜಿನಗರದ ಆರನೇ ಬ್ಲಾಕ್‌ನ ರಾಜಕುಮಾರ್ ರಸ್ತೆ ಬದಿಯಲ್ಲಿ ನಿಲುಗಡೆ ಮಾಡಲಾಗಿದ್ದ ಆಟೊ ಗಮನಿಸಿದಾಗ, ನಂಬರ್ ಪ್ಲೇಟ್ ವಿರೂಪಗೊಳಿಸಿರುವುದು ಪತ್ತೆಯಾಗಿತ್ತು. ಆಗ ಆಟೊ ಚಾಲಕನನ್ನು ವಿಚಾರಣೆ ನಡೆಸಿದಾಗ, ಗೊಂದಲದ ಹೇಳಿಕೆ ನೀಡಿದ್ದರು. ನಂತರ, ಆಟೊ ಪರಿಶೀಲಿಸಿದಾಗ ಎರಡೂ ನಂಬರ್ ಪ್ಲೇಟ್‌ಗಳು ಬೇರೆ ಬೇರೆ ರೀತಿಯಲ್ಲಿದ್ದವು. ನಂಬರ್ ಪ್ಲೇಟ್ ತಿದ್ದಿರುವುದು ಪತ್ತೆಯಾಗಿತ್ತು.
‘ಚಾಲಕನನ್ನು ಪ್ರಶ್ನಿಸಿದಾಗ ಮಕ್ಕಳು ಸ್ಕೆಚ್ ಪೆನ್‌ನಿಂದ ಈ ರೀತಿ ಮಾಡಿದ್ದಾರೆ’ ಎಂದು ಸುಳ್ಳು ಹೇಳಿದ್ದರು. ಹೀಗಾಗಿ ಆಟೊವನ್ನು ಜಪ್ತಿ ಮಾಡಲಾಗಿದೆ. ಚಾಲಕನಿಗೆ ನೋಟಿಸ್ ಕೊಟ್ಟು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.