ಬೆಂಗಳೂರು: ರೈತರಿಗೆ ನೀಡುವ ಸಾಲದ ಪ್ರಮಾಣ ಕಡಿತ ಮಾಡಿರುವ ನಬಾರ್ಡ್ ನೀತಿ ಖಂಡಿಸಿ ಹಾಗೂ ಮೈಕ್ರೊ ಫೈನಾನ್ಸ್ ಕಂಪನಿಗಳ ಹಾವಳಿ ತಡೆಗಟ್ಟುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಕರ್ನಾಟಕ ರಾಜ್ಯ ರೈತರ ಸಂಘದ ಸದಸ್ಯರು, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ರೈತ ಸಂಘದ ಸದಸ್ಯರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
‘ರೈತರಿಗೆ ಮಾರಕವಾಗಿರುವ ನೂತನ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ತಕ್ಷಣ ಹಿಂಪಡೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಮೈಕ್ರೊ ಫೈನ್ಸಾನ್ ಕಂಪನಿಗಳ ಸಿಬ್ಬಂದಿ ರೈತ ಮಹಿಳೆಯರಿಗೆ ನೀಡುತ್ತಿರುವ ಕಿರುಕುಳಕ್ಕೆ ಕಡಿವಾಣ ಹಾಕಬೇಕು’ ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ‘ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ಉದ್ದೇಶದಿಂದ ಆರ್ಥಿಕ ನೆರವು ನೀಡಲು ನಬಾರ್ಡ್ ಸ್ಥಾಪನೆ ಮಾಡಲಾಗಿದೆ. ಆದರೆ, ಕೃಷಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತವನ್ನು ಕಡಿತಗೊಳಿಸಲಾಗಿದೆ. ಇದರಿಂದ, ರೈತರಿಗೆ ಆರ್ಥಿಕ ತೊಂದರೆ ಆಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ನಬಾರ್ಡ್‌ಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು’ ಎಂದು ಒತ್ತಾಯಿಸಿದರು.
‘ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಸಂಸ್ಥೆಗಳ ಹಾವಳಿ ಮತ್ತು ಕಿರುಕುಳದಿಂದ ಗ್ರಾಮೀಣ ಪ್ರದೇಶದ ಮಹಿಳೆಯರು, ದುಡಿಯುವ ವರ್ಗದ ಜನ ಸಂಕಷ್ಟಕ್ಕಿಡಾಗಿದ್ದಾರೆ. ಮೈಕ್ರೊ ಫೈನಾನ್ಸ್ ಸಂಸ್ಥೆಗಳು ನಡೆಸುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು’ ಎಂದರು.
ಸ್ಥಳಕ್ಕೆ ಬಂದ ಸಮಾಜ ಕಲ್ಯಾಣ ಸಚಿವ ಎಚ್.ಸಿ. ಮಹದೇವಪ್ಪ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ, ಕಾರ್ಯಾಧ್ಯಕ್ಷರಾದ ಜೆ.ಎಂ. ವೀರಸಂಗಯ್ಯ, ಎ.ಎಂ. ಮಹೇಶ್‌ಪ್ರಭು, ಪ್ರಧಾನ ಕಾರ್ಯದರ್ಶಿ ಎನ್. ವಸಂತಕುಮಾರ್, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಉಪಸ್ಥಿತರಿದ್ದರು.
ಪ್ರತಿಭಟನೆಯಲ್ಲಿ ಕೈಗೊಂಡ ನಿರ್ಣಯಗಳು
ರೈತರಿಗೆ ಸಾಲ ಮಂಜೂರಾತಿಗೆ ಸಿಬಿಲ್ ಅಂಕಗಳನ್ನು ಮಾನದಂಡವಾಗಿ ಪರಿಗಣಿಸುವುದನ್ನು ಕೈಬಿಡಬೇಕು.
ಕೇಂದ್ರ ಸಚಿವರು ಹಾಗೂ ಸಂಸದರು ನಬಾರ್ಡ್ ಮೂಲಕ ನೀಡುತ್ತಿದ್ದ ಸಾಲದ ಮೊತ್ತವನ್ನು ಕಡಿತಗೊಳಿಸಿರುವ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು.
ಮೈಕ್ರೊ ಫೈನಾನ್ಸ್ ಕಂಪನಿಗಳ ಹಾವಳಿ ಕಿರುಕುಳ ನಿಯಂತ್ರಿಸಲು ಕಾನೂನು ರೂಪಿಸಿದರೆ ಸಾಲದು. ರಾಜ್ಯ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಾಲ ವಸೂಲಿ ಹೆಸರಿನಲ್ಲಿ ನೀಡುವ ಕಿರುಕುಳ ತಪ್ಪಿಸಲು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಪ್ರಾರಂಭಿಸಬೇಕು.
ಋಣಮುಕ್ತ ಕಾಯ್ದೆಗೆ ಜೀವತುಂಬಿ ಕೇರಳ ಮಾದರಿಯಲ್ಲಿ ಜನಸ್ನೇಹಿ ಸರಳ ಸಾಲದ ನೀತಿಯನ್ನು ರೂಪಿಸಬೇಕು.
ನಬಾರ್ಡ್ ಅನುದಾನ ಕಡಿತ ಮಾಡಿರುವ ಕೇಂದ್ರ ಸರ್ಕಾರ ನಡೆಯನ್ನು ಖಂಡಿಸಿ ಎಲ್ಲ ಸಚಿವರು ಹಾಗೂ ಶಾಸಕರು ದೆಹಲಿಗೆ ತೆರಳಿ ಸಂಸತ್ತು ಭವನಕ್ಕೆ ಮುತ್ತಿಗೆ ಹಾಕೋಣ.ಬಿ.ಆರ್. ಪಾಟೀಲ, ಮುಖ್ಯಮಂತ್ರಿಯವರ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.