ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡಿ: ಎಐಎಸ್‌ಇಸಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಜುಲೈ 2021, 17:33 IST
Last Updated 10 ಜುಲೈ 2021, 17:33 IST

ಬೆಂಗಳೂರು: ‘ರಾಜ್ಯ ಸರ್ಕಾರ ಹಠಕ್ಕೆ ಬಿದ್ದು ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಖಂಡನೀಯ. ಸರ್ಕಾರ ಪರೀಕ್ಷೆಗಳನ್ನುಕೂಡಲೇ ರದ್ದು ಮಾಡಬೇಕು’ ಎಂದುಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿಯ (ಎಐಎಸ್‌ಇಸಿ) ರಾಜ್ಯ ಘಟಕದ ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು ಆಗ್ರಹಿಸಿದ್ದಾರೆ.

‘ಕೋವಿಡ್‌ ಕರಿನೆರಳಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಆರೋಗ್ಯವನ್ನು ಗಣನೆಗೆ ತೆಗೆದುಕೊಂಡಿರುವ ಬಹುತೇಕ ರಾಜ್ಯಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಇದರಿಂದ ಪಾಠ ಕಲಿತುಕೊಳ್ಳದ ರಾಜ್ಯ ಸರ್ಕಾರ, ಇದೇ19 ಹಾಗೂ 22ರಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಮುಂದಾಗಿದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.

‘ಬಹು ಆಯ್ಕೆ ಪ್ರಶ್ನೆ ಮಾದರಿಯ ಪರೀಕ್ಷೆಗಳ ಬಗ್ಗೆ ಯಾವುದೇ ಮುನ್ಸೂಚನೆ ನೀಡದೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸದೆ, ಏಕಾಏಕಿ ಹೊಸ ಪರೀಕ್ಷಾ ವಿಧಾನ ಕ್ರಮ ಜಾರಿಗೊಳಿಸುವುದು ಜನವಿರೋಧಿ ನಿರ್ಧಾರ. ಕಲಿಕಾ ಸೌಲಭ್ಯಗಳಿಂದ ವಂಚನೆಗೆ ಒಳಗಾಗಿರುವ ಗ್ರಾಮೀಣ ಭಾಗದ ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಇದು ಮಾರಕವಾಗಿ ಪರಿಣಮಿಸಲಿದೆ’ ಎಂದರು.

ADVERTISEMENT

‘ಈ ಪರೀಕ್ಷಾ ವಿಧಾನದಲ್ಲಿ ಪ್ರಶ್ನೆಗಳು ಸುಲಭವಾಗಿರುತ್ತವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಮರ್ಥಿಸಿಕೊಂಡಿದ್ದರು. ಆದರೆ, ಪರೀಕ್ಷಾ ಮಂಡಳಿ ಬಿಡುಗಡೆ ಮಾಡಿರುವ ಮಾದರಿ ಪ್ರಶ್ನೆ ಪತ್ರಿಕೆಗಳು ಸುಲಭವಾಗಿಲ್ಲ. ಇದಕ್ಕೆ ಅಲ್ಪಾವಧಿಯಲ್ಲಿ ವಿದ್ಯಾರ್ಥಿಗಳು ತಯಾರಾಗುವುದು ಅಸಾಧ್ಯ.’

‘ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೀವ ಪಣಕ್ಕಿಟ್ಟು ಪರೀಕ್ಷೆ ನಡೆಸಬೇಕೆಂಬ ಹಠಮಾರಿ ನಿಲುವಿನ ಹಿಂದೆ ಖಾಸಗಿ ಶಾಲಾ ಆಡಳಿತ ಮಂಡಳಿಗಳೊಂದಿಗೆ ಲಾಬಿ ನಡೆಸಿರುವ ಅನುಮಾನ ಮೂಡುತ್ತಿದೆ. ಈ ಎಲ್ಲ ಕಾರಣಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಗಳನ್ನು ಕೂಡಲೇ ರದ್ದು ಮಾಡಬೇಕು’ ಎಂದೂ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.