ADVERTISEMENT

‘ಇಂಡಿಯಾ’ ಗೆದ್ದರಷ್ಟೇ ಪ್ರಜಾಪ್ರಭುತ್ವದ ಉಳಿವು: ಸುಧೀಂದ್ರ ಕುಲಕರ್ಣಿ

‘ಹೆಣವಾಗುತ್ತಿರುವ ಗಣರಾಜ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸುಧೀಂದ್ರ ಕುಲಕರ್ಣಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 16:24 IST
Last Updated 11 ಏಪ್ರಿಲ್ 2024, 16:24 IST
<div class="paragraphs"><p>ಪರಕಾಲ ಪ್ರಭಾಕರ್‌ ಅವರ ‘ದಿ ಕ್ರೂಕ್‌ಡ್‌ ಟಿಂಬರ್‌ ಆಫ್‌ ನ್ಯೂ ಇಂಡಿಯಾ’ ಕೃತಿಯ ಕನ್ನಡ ಅನುವಾದ ‘ಹೆಣವಾಗುತ್ತಿರುವ ಗಣರಾಜ್ಯ’ ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.</p></div>

ಪರಕಾಲ ಪ್ರಭಾಕರ್‌ ಅವರ ‘ದಿ ಕ್ರೂಕ್‌ಡ್‌ ಟಿಂಬರ್‌ ಆಫ್‌ ನ್ಯೂ ಇಂಡಿಯಾ’ ಕೃತಿಯ ಕನ್ನಡ ಅನುವಾದ ‘ಹೆಣವಾಗುತ್ತಿರುವ ಗಣರಾಜ್ಯ’ ಕೃತಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದರು.

   

ಬೆಂಗಳೂರು: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಿಜೆಪಿ ನಾಶ ಮಾಡುತ್ತಿದೆ. ಪ್ರಜಾತಂತ್ರ ವ್ಯವಸ್ಥೆ ಉಳಿಯಬೇಕಾದರೆ ಈ ಬಾರಿ ಚುನಾವಣೆಯಲ್ಲಿ ‘ಇಂಡಿಯಾ’ ಗೆಲ್ಲಬೇಕು ಎಂದು ರಾಜಕೀಯ ವಿಶ್ಲೇಷಕ ಸುಧೀಂದ್ರ ಕುಲಕರ್ಣಿ ಪ್ರತಿಪಾದಿಸಿದರು.

ಪರಕಾಲ ಪ್ರಭಾಕರ್‌ ಅವರ ‘ದಿ ಕ್ರೂಕ್‌ಡ್‌ ಟಿಂಬರ್‌ ಆಫ್‌ ನ್ಯೂ ಇಂಡಿಯಾ’ ಕೃತಿಯ ಕನ್ನಡ ಅನುವಾದ ‘ಹೆಣವಾಗುತ್ತಿರುವ ಗಣರಾಜ್ಯ’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಗುರುವಾರ ಅವರು ಮಾತನಾಡಿದರು.

ADVERTISEMENT

ಈವರೆಗೆ 17 ಲೋಕಸಭಾ ಚುನಾವಣೆಗಳು ನಡೆದಿವೆ. ತುರ್ತು ಪರಿಸ್ಥಿತಿಯನ್ನು ಹೊರತುಪಡಿಸಿದರೆ ಉಳಿದ ಯಾವ ಸಂದರ್ಭದಲ್ಲಿಯೂ ಗಣತಂತ್ರ ವ್ಯವಸ್ಥೆ ಅಪಾಯಕಾರಿ ಸ್ಥಿತಿಯಲ್ಲಿ ಇರಲಿಲ್ಲ. ಈಗ ಅಘೋಷಿತ ತುರ್ತು ಪರಿಸ್ಥಿತಿಯನ್ನು ಮೋದಿ ತಂದಿಟ್ಟಿದ್ದಾರೆ ಎಂದು ಆರೋಪಿಸಿದರು.

ಮೋದಿ ಮತ್ತು ಬಿಜೆಪಿ ವಿಕಸಿತ ಭಾರತ್ ಎನ್ನುತ್ತಲೇ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿದ್ದಾರೆ. ಸಂಸತ್ತಿಗೆ ಯಾವುದೇ ಮೌಲ್ಯ ಇಲ್ಲವಾಗಿದೆ. ಅಲ್ಲಿ ಯಾವುದೇ ಚರ್ಚೆಯಾಗುತ್ತಿಲ್ಲ. ಧ್ವನಿ ಎತ್ತಿದ ಸಂಸದರನ್ನು ಅಮಾನತು ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕೃತಿಯ ಅನುವಾದಕ ರಾಹು (ಆರ್‌.ಕೆ. ಹುಡುಗಿ) ಮಾತನಾಡಿ, ‘ನೀರಿಗೆ, ಅನ್ನಕ್ಕೆ, ಮೇವಿಗೆ ಬರಗಾಲ ಬಂದಾಗ ಜನಪರ ಸರ್ಕಾರವಿದ್ದರೆ ಹೇಗಾದರೂ ಒದಗಿಸಬಹುದು. ಆದರೆ, ಮಾನವೀಯತೆ ಇಲ್ಲದವರು ದೇಶ ಆಳುತ್ತಿದ್ದಾರೆ. ಮನುಷ್ಯತ್ವಕ್ಕೇ ಬರಗಾಲ ಬಂದಿರುವ ಕಾಲದಲ್ಲಿ ಬದುಕುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ರೈತರು ತಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿರುವಾಗ 754 ಮಂದಿ ಮೃತಪಟ್ಟರು. ಅವರಿಗೆ ಅರ್ಧ ನಿಮಿಷ ಮೌನಾಚರಣೆ, ಕಂಬನಿ ಮಿಡಿಯಲು ಸರ್ಕಾರಕ್ಕೆ ಸಮಯ ಸಿಗಲಿಲ್ಲ. ಮಣಿಪುರದಲ್ಲಿ ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರ, ಕೊಲೆ ಮಾಡಿದಾಗಲೂ ಭೇಟಿ ನೀಡಲು ಸಮಯ ಸಿಗಲಿಲ್ಲ. ಇಂಥ ಮನುಷ್ಯತ್ವ ಇಲ್ಲದ ಕಾಲದಲ್ಲಿ ಈ ಕೃತಿ ಮಾನವೀಯತೆಯ ಅಂಶವನ್ನು ಬಿತ್ತಬಲ್ಲದು ಎಂಬ ಆಶಯದಿಂದ ಅನುವಾದ ಮಾಡಿದ್ದೇನೆ’ ಎಂದು ತಿಳಿಸಿದರು.

ಕೃತಿ ಬಗ್ಗೆ ಲೇಖಕ ರಾಜಪ್ಪ ದಳವಾಯಿ ಮಾತನಾಡಿ, ‘ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಬಳಸಿಕೊಂಡು ಅಧಿಕಾರ ಹಿಡಿದವರೇ ಪ್ರಜಾಸತ್ತೆಯನ್ನು ಹೇಗೆ ನಾಶ ಮಾಡುತ್ತಿದ್ದಾರೆ ಎಂಬುದನ್ನು ಹೆಣವಾಗುತ್ತಿರುವ ಗಣರಾಜ್ಯ ಕೃತಿಯಲ್ಲಿ ವಿವರಿಸಲಾಗಿದೆ. 2014ರಿಂದ 2023ರವರೆಗಿನ ಪ್ರಮುಖ ಘಟನೆಗಳನ್ನು ಇಟ್ಟುಕೊಂಡು ವಿಶ್ಲೇಷಿಸಲಾಗಿದೆ’ ಎಂದು ವಿವರಿಸಿದರು.

‘ನರೇಂದ್ರ ಮೋದಿ ಪ್ರಧಾನಿಯಾದಾಗ ಮೊದಲ ಭಾಷಣದಲ್ಲಿ ಪೂರ್ವಸೂರಿಗಳನ್ನು ನೆನಪಿಸಿಕೊಂಡು ಈ ಸಾಲಿನಲ್ಲಿ ಮುಂದುವರಿದ ಭಾಗ ಎಂದು ಹೇಳಿಕೊಂಡಿದ್ದರು. ಮುಂದೆ ‘ನನ್ನಿಂದಲೇ ಎಲ್ಲ’ ಎನ್ನುವ ಮಟ್ಟಕ್ಕೆ ಸರ್ವಾಧಿಕಾರಿಯಾಗಿ ಬದಲಾದರು. ಮೋದಿಯವರ ಪ್ರಮುಖ ಎಲ್ಲ ಭಾಷಣಗಳನ್ನು ಈ ಕೃತಿಯಲ್ಲಿ ವಿಮರ್ಶೆ ಮಾಡಲಾಗಿದೆ. ಅದೇ ರೀತಿ ಆರ್‌ಎಸ್‌ಎಸ್‌, ಹಿಜಾಬ್‌ ಘಟನೆ, ರೈತರ ಹೋರಾಟ, ವಿಶ್ವವಿದ್ಯಾಲಯಗಳ ಸ್ಥಿತಿಗತಿ ಹೀಗೆ ಅನೇಕ ಸತ್ಯ ವಿಚಾರಗಳನ್ನು ನಮ್ಮ ಮುಂದಿಡುತ್ತದೆ’ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಿ ಬಿಡುಗಡೆ ಮಾಡಿದರು. ಮುಖ್ಯಮಂತ್ರಿಯವರ ಸಲಹೆಗಾರ ಬಿ.ಆರ್. ಪಾಟೀಲ, ಪ್ರಕಾಶಕ ಸೃಷ್ಟಿ ನಾಗೇಶ್‌ ಉಪಸ್ಥಿತರಿದ್ದರು.

ಕೃತಿ ಪರಿಚಯ

ಮೂಲಕೃತಿ: ದಿ ಕ್ರೂಕ್‌ಡ್‌ ಟಿಂಬರ್‌ ಆಫ್‌ ನ್ಯೂ ಇಂಡಿಯಾ 

ಲೇಖಕ: ಪರಕಾಲ ಪ್ರಭಾಕರ್‌

ಪ್ರಕಾರ: ರಾಜಕೀಯ ವಿಶ್ಲೇಷಣೆ

ಅನುವಾದ ಕೃತಿ: ಹೆಣವಾಗುತ್ತಿರುವ ಗಣರಾಜ್ಯ

ಅನುವಾದಕ: ರಾಹು (ಆರ್‌.ಕೆ. ಹುಡುಗಿ)

ಪ್ರಕಾಶನ: ಸೃಷ್ಟಿ ಪಬ್ಲಿಕೇಶನ್‌

ಪುಟ: 244 ದರ: ₹ 300

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.