ADVERTISEMENT

ಸಾರ್ವಜನಿಕರ ಮೇಲೆ ದರ್ಪದ ವರ್ತನೆ ಸಲ್ಲದು: ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಸಲೀಂ

ಸುತ್ತೋಲೆ ಮೂಲಕ ಪೊಲೀಸ್ ಸಿಬ್ಬಂದಿಗೆ ಡಿಜಿಪಿ ಸಲೀಂ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2025, 6:13 IST
Last Updated 25 ಅಕ್ಟೋಬರ್ 2025, 6:13 IST
ಎಂ.ಎ. ಸಲೀಂ
ಎಂ.ಎ. ಸಲೀಂ   

ಬೆಂಗಳೂರು: ಅಧಿಕಾರ ದುರುಪಯೋಗಪಡಿಸಿಕೊಂಡು ಸಾರ್ವಜನಿಕರ ಮೇಲೆ ಅನಗತ್ಯ ಬಲ ಪ್ರಯೋಗ ಮಾಡುವುದು ಅಥವಾ ದರ್ಪದಿಂದ ವರ್ತಿಸುವುದು ಇಲಾಖೆಯ ಘನತೆಗೆ ತಕ್ಕುದಾದ ನಡವಳಿಕೆಯಲ್ಲ. ನಾಗರಿಕರ ಹಕ್ಕುಗಳಿಗೆ ಗೌರವ ನೀಡುವ ಮೂಲಕ ಸಂಯಮದಿಂದ ವರ್ತಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೂಚಿಸಿದ್ದಾರೆ. 

ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಅವರು, ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ ನೀಡಿದ್ದಾರೆ.

ಇಲಾಖೆಯ ಮೇಲಿನ ಗೌರವ ಮತ್ತು ನಂಬಿಕೆಗಳು ಪ್ರತಿ ಅಧಿಕಾರಿಯು ಯಾವ ರೀತಿ ನಡೆದುಕೊಳ್ಳುತ್ತಾನೆ ಎಂಬುದರ ಮೇಲೆ ಅವಲಂಬಿತವಾಗಿದೆ ಎಂಬುದನ್ನು ಮರೆಯಬಾರದು. ಇಲಾಖೆಯ ಎಲ್ಲಾ ಅಧಿಕೃತ ವ್ಯವಹಾರಗಳು ಮತ್ತು ಕಾರ್ಯವಿಧಾನದಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಠಾಣೆಗೆ ಭೇಟಿ ನೀಡುವ ಯಾವುದೇ ವ್ಯಕ್ತಿಯ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆ ಗಮನಿಸದೇ ಸಮಾನವಾಗಿ ಪರಿಗಣಿಸಬೇಕು ಎಂದು ಹೇಳಿದ್ದಾರೆ.

ADVERTISEMENT

ವ್ಯಕ್ತಿ ಮತ್ತು ಸಂಸ್ಥೆಗಳಿಂದ ಯಾವುದೇ ಬೇಡಿಕೆ ಇಡುವುದು, ಅಕ್ರಮ ಸಹಾಯ, ಲಾಭ ಪಡೆಯಬಾರದು. ತನಿಖಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಂಡು, ಪ್ರತಿ ಹಂತದಲ್ಲೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ಸಂತ್ರಸ್ತರು, ಮಹಿಳೆಯರು, ಹಿರಿಯರು ಮತ್ತು ಮಕ್ಕಳೊಂದಿಗೆ ವಿಶೇಷ ಕಾಳಜಿಯಿಂದ ವರ್ತಿಸಬೇಕು ಎಂದು ತಿಳಿಸಿದ್ದಾರೆ.

ದೂರುಗಳ ಸ್ಥಿತಿ ಮತ್ತು ಬಾಕಿ ಇರುವ ಪ್ರಕರಣಗಳ ಕುರಿತು ನಾಗರಿಕರಿಗೆ ಮಾಹಿತಿ ನೀಡಬೇಕು. ನ್ಯಾಯಾಂಗ ಮತ್ತು ಆಡಳಿತಾತ್ಮಕ ಅಧಿಕಾರಿಗಳಿಗೆ ಪೂರ್ಣ ಸಹಕಾರ ನೀಡಿ, ಶೋಧ, ಬಂಧನ ಅಥವಾ ವಿಚಾರಣೆ ವೇಳೆ ಸಾರ್ವಜನಿಕರ ಖಾಸಗಿತನ ಮತ್ತು ಘನತೆಯನ್ನು ಗೌರವಿಸಬೇಕು. ಬೇರೆ ಠಾಣಾ ವ್ಯಾಪ್ತಿಯ ದೂರು ಬಂದಲ್ಲಿ ದೂರುದಾರರನ್ನು ಸಂಬಂಧಿಸಿದ ಠಾಣೆಗೆ ಹೋಗಿ ದೂರು ನೀಡುವಂತೆ ಹೇಳದೇ, ಠಾಣೆಯಲ್ಲಿ ಶೂನ್ಯ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿ, ಬಳಿಕ ವ್ಯಾಪ್ತಿಯ ಸಂಬಂಧಪಟ್ಟ ಠಾಣೆಗೆ ದೂರು ವರ್ಗಾಯಿಸುವಂತೆ ಸ್ಪಷ್ಟವಾಗಿ ಹೇಳಿದ್ದಾರೆ.

ಮಹಿಳೆಯರನ್ನು ಸಂಜೆ 6 ಗಂಟೆಯ ಬಳಿಕ ಠಾಣೆಗೆ ವಿಚಾರಣೆಗೆ ಅಥವಾ ಹೇಳಿಕೆ ಪಡೆಯಲು ಕರೆತರಬಾರದು. ಒಂದು ವೇಳೆ ಆಕೆ ಆರೋಪಿಯಾಗಿದ್ದಲ್ಲಿ ಅಥವಾ ಸಂತ್ರಸ್ತೆಯಾಗಿದ್ದಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯ ನೆರವಿನೊಂದಿಗೆ ಮಹಿಳೆಯ ವಾಸದ ಸ್ಥಳ/ ಮನೆಯಲ್ಲಿಯೇ ವಿಚಾರಣೆ ಮಾಡಬೇಕು. ಕ್ರಿಮಿನಲ್ ಪ್ರಕರಣಗಳಲ್ಲಿ ಅವರನ್ನು ಬಂಧಿಸಿ, ವಿಚಾರಣೆ ನಡೆಸಿದಾಗ, ಅವಮಾನಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು ಮತ್ತು ಅವರನ್ನು ಠಾಣೆಯಲ್ಲಿ ಇರಿಸದೇ, ಗೃಹ ಆಶ್ರಯ ತಾಣಗಳಲ್ಲಿ ಇರಿಸಬೇಕು ಎಂದಿದ್ದಾರೆ.