ಲಾಲ್‌ಬಾಗ್ ಆವರಣದಲ್ಲಿರುವ ಡಾ.ಎಂ.ಎಚ್. ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಜೋಡಿಸುತ್ತಿರುವ ಸಿಬ್ಬಂದಿ
–ಪ್ರಜಾವಾಣಿ ಚಿತ್ರ: ರಂಜು ಪಿ.
ಡಾ.ಎಂ.ಎಚ್. ಮರಿಗೌಡ ಬದುಕಿಗೆ ಕನ್ನಡಿ ಹಿಡಿಯುವ ಫೋಟೊಗಳ ಸಂಗ್ರಹ | ಏಕಕಾಲಕ್ಕೆ 70 ಮಂದಿಗೆ ಆಸನ ವ್ಯವಸ್ಥೆ | ಪುಸ್ತಕ ಸಂಗ್ರಹಾಲಯ ನವೀಕರಣ, ಡಿಜಿಟಲೀಕರಣಕ್ಕೆ ₹16 ಲಕ್ಷ ವೆಚ್ಚ
ಬೆಂಗಳೂರು: ನಗರದ ಹಳೆಯ ಗ್ರಂಥಾಲಯಗಳಲ್ಲಿ ಒಂದಾಗಿರುವ ಲಾಲ್‌ಬಾಗ್‌ನ ಡಾ.ಎಂ.ಎಚ್.ಮರಿಗೌಡ ರಾಷ್ಟ್ರೀಯ ತೋಟಗಾರಿಕೆ ಗ್ರಂಥಾಲಯವು ಈಗ ಹೈಟೆಕ್ ಸ್ಪರ್ಶ ಪಡೆದುಕೊಳ್ಳುತ್ತಿದೆ.
ಓದುವ ಕೊಠಡಿ, ಸುಸಜ್ಜಿತ ಸಭಾಂಗಣ, ಅತ್ಯಾಧುನಿಕ ಬೆಳಕಿನ ವ್ಯವಸ್ಥೆ ಸೇರಿ ಹಲವು ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಉದ್ಯಾನದಲ್ಲಿ ಸಸ್ಯಗಳ ಮಾಹಿತಿ ನೀಡುವ ಅಂದಾಜು 12 ಸಾವಿರ ಪುಸ್ತಕಗಳನ್ನು ಡಿಜಿಟಲೀಕರಣ ಮಾಡಲಾಗುತ್ತಿದೆ. ಅಲ್ಲದೇ ಡಾ.ಎಂ.ಎಚ್. ಮರಿಗೌಡ ಅವರ ಜೀವನ ಚರಿತ್ರೆ ತಿಳಿಸುವ ವಸ್ತುಸಂಗ್ರಹಾಲಯಕ್ಕೆ ಬೇಕಾದ ಫೋಟೊಗಳನ್ನು ಸಂಗ್ರಹಿಸಲಾಗುತ್ತಿದೆ.
ಲಾಲ್‌ಬಾಗ್‌ನ ಹೂವಿನ ಗಡಿಯಾರದ ಬಳಿ ಇರುವ ಗ್ರಂಥಾಲಯಕ್ಕೆ ಸುಮಾರು 140 ವರ್ಷದ ಇತಿಹಾಸವಿದೆ. ಹಿಂದೆ ತೋಟಗಾರಿಕೆ ಇಲಾಖೆಯ ನಿರ್ದೇಶಕರ ನಿವಾಸವಾಗಿತ್ತು. ಗ್ರಂಥಾಲಯದ ಕಟ್ಟಡವು 10,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು, ತೋಟಗಾರಿಕೆ, ಸಸ್ಯವಿಜ್ಞಾನ ಸಂಬಂಧಿತ ವಿಷಯಗಳ ಪುಸ್ತಕಗಳು ಇವೆ.
ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ಕಾರ್ಯ ಭರದಿಂದ ಸಾಗಿದ್ದು, ಶೇಕಡ 80ರಷ್ಟು ಕೆಲಸ ಪೂರ್ಣಗೊಂಡಿದೆ. ಪಾರಂಪರಿಕ ಕಟ್ಟಡವಾಗಿರುವ ಕಾರಣ ಕಟ್ಟಡದ ಮೂಲ ಸ್ವರೂಪ, ವಿನ್ಯಾಸಗಳಿಗೆ ಧಕ್ಕೆಯಾಗದಂತೆ ನವೀಕರಣ ಮಾಡುತ್ತಿರುವುದು ವಿಶೇಷ.
ಮಳೆ ಬಿದ್ದಾಗ ಗೋಡೆಗಳು ಪೂರ್ತಿ ಒದ್ದೆಯಾಗಿ ನೀರಿಳಿಯುತ್ತಿತ್ತು. ಕಟ್ಟಡದ ಚಾವಣಿಯಲ್ಲಿ ನೀರು ಸೋರಿಕೆಯಾಗುತ್ತಿತ್ತು. ಇದರಿಂದ ಗ್ರಂಥಾಲಯದ ಕೃತಿಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತು. ಹಾಗಾಗಿ ನವೀಕರಣ ಕಾರ್ಯ ಕೈಗೊಳ್ಳಲಾಗಿದೆ.
ಕಟ್ಟಡಕ್ಕೆ ಚಾವಣಿ ಹೊದಿಸುವುದು, ಮರದ ಕೆಲಸ ಹಾಗೂ ನೆಲ ಹಾಸು ಕಾರ್ಯ ನಡೆದಿದೆ. ಹೊಸ ಟೇಬಲ್, ಕುರ್ಚಿಗಳನ್ನು ಹಾಕಲಾಗಿದೆ. ಕಪಾಟುಗಳನ್ನು ನಿರ್ಮಿಸಲಾಗಿದೆ. ವಸ್ತುಸಂಗ್ರಹಾಲಯ ಹಾಗೂ ಪುಸ್ತಕಗಳ ಡಿಜಿಟಲೀಕರಣಕ್ಕೆ ಸುಮಾರು ₹16 ಲಕ್ಷ ಖರ್ಚು ಮಾಡಲಾಗುತ್ತಿದೆ.
‘ಗ್ರಂಥಾಲಯ ಕಟ್ಟಡವು ಪುರಾತತ್ವ ಇಲಾಖೆಗೆ ಒಳಪಡುವುದರಿಂದ ಮೂಲ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಇಂಟ್ಯಾಕ್ ನೇತೃತ್ವದಲ್ಲಿ ನವೀಕರಣಗೊಳಿಸಲಾಗಿದೆ. ಇಲ್ಲಿನ ಪುಸ್ತಕಗಳನ್ನು ಸ್ಕ್ಯಾನ್ ಮಾಡಿಸಿ, ಡಿಜಿಟಲೀಕರಣ ಮಾಡಲಾಗುತ್ತಿದೆ. ಏಕಕಾಲಕ್ಕೆ 70 ಮಂದಿ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಗ್ರಂಥಾಲಯವು ಸಸ್ಯವಿಜ್ಞಾನ ಲೋಕದ ಮಾಹಿತಿಯ ಆಗರವಾಗಿದೆ. ಪ್ರತಿಯೊಂದು ಸಸ್ಯಪ್ರಭೇದಕ್ಕೂ ಪ್ರತ್ಯೇಕ ಮಾಹಿತಿ ಗ್ರಂಥ ಲಭಿಸಬೇಕೆಂಬ ಉದ್ದೇಶದಿಂದ ಸ್ಥಾಪಕರು ಕಲೆಹಾಕಿದ ಮಾಹಿತಿ ಸಂಪತ್ತು ಇದೆ. ಉದ್ಯಾನ ವಿನ್ಯಾಸ, ಸಸ್ಯ ಪ್ರಭೇದ, ವಿಶ್ವಕೋಶ, ಪರಾಮರ್ಶನ ಗ್ರಂಥಗಳು, ಉದ್ಯಾನ ವಿನ್ಯಾಸ ಕೋಶಗಳು, ಕೆಲವು ಪ್ರಭೇದಗಳಿಗೆ ಸಂಬಂಧಿಸಿದ ಗೆಜೆಟಿಯರ್ ಒಳಗೊಂಡ ಮಾಹಿತಿ ಇದೆ’ ಎಂದು ತೋಟಗಾರಿಕೆ ಇಲಾಖೆ ನಿರ್ದೇಶಕ (ಲಾಲ್‌ಬಾಗ್) ಬಾಲಕೃಷ್ಣ ‘ಪ್ರಜಾವಾಣಿ‘ಗೆ ತಿಳಿಸಿದರು.
‘ನಿತ್ಯ ನೂರಾರು ಜನರು ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ವಿವಿಧ ಇಲಾಖೆಗಳ ಸಿಬ್ಬಂದಿ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಸಾಹಿತಿಗಳು, ಸಂಶೋಧಕರು ಸದುಪಯೋಗ ಪಡೆದುಕೊಂಡಿದ್ದಾರೆ. ಆಗಸ್ಟ್ 7ರಿಂದ 18ರವರೆಗೆ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಅವಧಿಯಲ್ಲಿಯೇ ನವೀಕೃತ ಗ್ರಂಥಾಲಯ ಉದ್ಘಾಟನೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಕೆಲವೊಂದು ಕೆಲಸಗಳು ಬಾಕಿ ಇರುವ ಕಾರಣ ಉದ್ಘಾಟನೆ ಸ್ವಲ್ಪ ದಿನ ತಡವಾಗಲಿದೆ’ ಎಂದು ಹೇಳಿದರು.
‘ಭವಿಷ್ಯದಲ್ಲಿ ಗ್ರಂಥಾಲಯ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆ ಉಂಟಾಗದಿರಲಿ, ಮಳೆ ನೀರು ತಾಗದಿರಲಿ ಎಂಬ ಉದ್ದೇಶದಿಂದ ಗ್ರಂಥಾಲಯ ಕಟ್ಟಡ ಪಕ್ಕದಲ್ಲಿ ಎಡ ಮತ್ತು ಬಲ ಬದಿಗೆ ಮೋರಿ ನಿರ್ಮಿಸಲಾಗಿದೆ. ಮೂಲ ಕಟ್ಟಡಕ್ಕೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಮಾಡಲಾಗುತ್ತಿದೆ’ ಎಂದು ವಿವರಿಸಿದರು.
ತೈಲ ಚಿತ್ರ ಆಕರ್ಷಣೆ
19ನೇ ಶತಮಾನದ ಚಿತ್ರಗಳು ಸುಮಾರು 750 ತೈಲಚಿತ್ರ ಹಾಗೂ ಪೆನ್ಸಿಲ್ ಸ್ಕೆಚ್‌ಗಳು ಪ್ರಮುಖ ಆರ್ಕಷಣೆಯಾಗಿವೆ. ಗ್ರಂಥಾಲಯದಲ್ಲಿ ಅತ್ಯಮೂಲ್ಯ ಪೇಂಟಿಂಗ್‌ಗಳನ್ನು ಸಂಗ್ರಹಿಸಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.