ADVERTISEMENT

49 ಬಿಬಿಎಂಪಿ ಶಾಲೆಗಳ ದುಃಸ್ಥಿತಿ: ಪರಿಶೀಲನಾ ತಂಡ ರಚನೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ನಡೆಸಲಾಗುತ್ತಿರುವ 49 ಶಾಲೆಗಳಲ್ಲಿನ ವಿದ್ಯಾರ್ಥಿಗಳ ಮೂಲಸೌಕರ್ಯ ಲಭ್ಯತೆಗೆ ಸಂಬಂಧಿಸಿದಂತೆ ಪರಿಶೀಲನಾ ತಂಡವೊಂದನ್ನು ರಚನೆ ಮಾಡಬೇಕು’ ಎಂದು ಹೈಕೋರ್ಟ್‌, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳನ್ನು ‍ಮರಳಿ ಕರೆತರುವುದು ಹಾಗೂ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯಗಳ ಕೊರತೆಯ ಕುರಿತಂತೆ ಮಾಧ್ಯಮ ವರದಿ ಆಧರಿಸಿ ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್​.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಕುರಿತಂತೆ ಆದೇಶಿಸಿದೆ.

ನಿರ್ದೇಶನದ ಅಂಶಗಳು:

ADVERTISEMENT

* ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ತಕ್ಷಣವೇ ಮೂವರು ಸದಸ್ಯರ ಸಮಿತಿ ರಚನೆ ಮಾಡಬೇಕು. ಇದರಲ್ಲಿ ಒಬ್ಬರು ಕಾರ್ಯದರ್ಶಿ ಶ್ರೇಣಿಯ ನ್ಯಾಯಾಂಗ ಅಧಿಕಾರಿ, ಇಬ್ಬರು ಕಾನೂನು ವಿದ್ಯಾರ್ಥಿಗಳು ಇರಬೇಕು.

* ಬಿಬಿಎಂಪಿ ಗಮನಕ್ಕೆ ಬಾರದಂತೆ ಈ ಸಮಿತಿ  49 ಶಾಲೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಬೇಕಿರುವ ಶಾಲೆಗಳ ಸಂಪೂರ್ಣ ವಿವರಗಳನ್ನು ಕಾರ್ಯದರ್ಶಿ ಒದಗಿಸಬೇಕು ಮತ್ತು ಈ ನಿಟ್ಟಿನಲ್ಲಿ ಸಮಿತಿಗೆ ಕಾನೂನು ಸೇವಾ ಪ್ರಾಧಿಕಾರ ವ್ಯವಸ್ಥೆ ಮಾಡಬೇಕು.

* ಸಮಿತಿಯು, ಶೌಚಾಲಯ ಸಮರ್ಪಕತೆ–ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ, ಶಾಲಾ ಆವರಣದಲ್ಲಿ ಸ್ವಚ್ಛತೆ ಮತ್ತು ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಆರೋಗ್ಯಕರ ವಾತಾವರಣಕ್ಕೆ ಅಗತ್ಯವಿರುವ ಇತರೆ ಮೂಲಸೌಕರ್ಯಗಳ ಕುರಿತಂತೆ ಪರಿಶೀಲಿಸಬೇಕು.

* ಈ ಪ್ರಕ್ರಿಯೆಯನ್ನು ಮುಂದಿನ ಒಂದು ತಿಂಗಳಲ್ಲಿ ಪೂರ್ಣಗೊಳಿಸಿ ಪ್ರತಿಯೊಂದು ಶಾಲೆಗಳ ಬಗ್ಗೆ ವಿವರವಾದ ದಾಖಲೆಗಳೊಂದಿಗೆ ವರದಿ ಸಿದ್ಧಪಡಿಸಿ ಕೋರ್ಟ್‌ಗೆ ಸಲ್ಲಿಸಬೇಕು.

ವಿಚಾರಣೆ ವೇಳೆ ಅಮಿಕಸ್ ಕ್ಯೂರಿಯಾದ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ಪದಾಂಕಿತ ಹಿರಿಯ ವಕೀಲ ಕೆ.ಎನ್.ಫಣೀಂದ್ರ ಹಾಜರಿದ್ದರು.

ಹಾಲಿನ ಮಳಿಗೆ ತಕರಾರು: ಡಿಸಿಪಿಗೆ ನೋಟಿಸ್‌

ಬೆಂಗಳೂರು: ನಗರದ ಸಿಎಆರ್‌ ಕೇಂದ್ರ ಸ್ಥಾನದ ಸಿರ್ಸಿ ವೃತ್ತದಲ್ಲಿನ ನಂದಿನಿ ಹಾಲಿನ ಮಳಿಗೆಯ ಬಾಡಿಗೆ ಕರಾರು ನವೀಕರಣ ನಿರಾಕರಿಸಿ ಸಿಎಆರ್‌ ಕೇಂದ್ರ ಸ್ಥಾನದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ಡಿ.ಎಲ್‌.ನಾಗೇಶ್‌ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್‌ ತಡೆ ನೀಡಿದೆ.

ಈ ಸಂಬಂಧ ಸದ್ಯ ನಂದಿನಿ ಹಾಲಿನ ಮಳಿಗೆ ನಡೆಸಿಕೊಂಡು ಹೋಗುತ್ತಿರುವ ಎಸ್‌.ಕಾರ್ತಿಕ್ ಕುಮಾರ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿ, ಡಿಸಿಪಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಎಂ.ಎ.ಇಂದ್ರಧನುಷ್‌, ‘ಪೊಲೀಸ್‌ ಸಿಬ್ಬಂದಿಯ ನಿರುದ್ಯೋಗಿ ಮಕ್ಕಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಂದಿನಿ ಹಾಲಿನ ಬೂತ್‌ ಆರಂಭಿಸಲು ಕಾರ್ತಿಕ್‌ ಕುಮಾರ್ ಅವರಿಗೆ ಅವಕಾಶ ನೀಡಲಾಗಿದೆ. ಮಳಿಗೆಯನ್ನು ಕಾರ್ತಿಕ್‌ ಅವರೇ ಕಟ್ಟಿಸಿಕೊಂಡು ಕಾನೂನಬದ್ಧವಾಗಿ ಬಾಡಿಗೆ ಸಂದಾಯ ಮಾಡುತ್ತಿದ್ದರೂ ಮೇಲಧಿಕಾರಿಗಳು ಬಾಡಿಗೆ ಕರಾರು ನವೀಕರಿಸಲು ನಿರಾಕರಿಸಿದ್ದಾರೆ. ಮಳಿಗೆಯ ಮುಂದೆ ಪೊಲೀಸ್ ವಾಹನಗಳನ್ನು ಬ್ಯಾರಿಕೇಡ್‌ ರೂಪದಲ್ಲಿ ನಿಲ್ಲಿಸಿ ದೈನಂದಿನ ವ್ಯಾಪಾರ ವಹಿವಾಟಿಗೆ ಅಡ್ಡಿಪಡಿಸಿ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆಕ್ಷೇಪಿಸಿದರು. ವಾದ ಪುರಸ್ಕರಿಸಿದ ನ್ಯಾಯಪೀಠ ಮಧ್ಯಂತರ ಮನವಿಯನ್ನು ಮಾನ್ಯ ಮಾಡಿ ವಿಚಾರಣೆ ಮುಂದೂಡಿತು.

ಅಂಗವಿಕಲ ದಂಪತಿಗೆ ಅಂತಃಕರಣದ ಆದೇಶ

ದೇವನಹಳ್ಳಿ ತಾಲ್ಲೂಕು ಕಚೇರಿ ಆವರಣದಲ್ಲಿ ಅಂಗವಿಕಲ ದಂಪತಿ ನಡೆಸುತ್ತಿದ್ದ ಜೆರಾಕ್ಸ್‌ ಅಂಗಡಿಯನ್ನು ಬಲವಂತವಾಗಿ ಎತ್ತಂಗಡಿ ಮಾಡಿಸಿದ್ದ ಅಧಿಕಾರಿಗಳ ಕ್ರಮಕ್ಕೆ ಚಾಟಿ ಬೀಸಿರುವ ಹೈಕೋರ್ಟ್‌ ‘ಜೆರಾಕ್ಸ್ ಮಳಿಗೆಯನ್ನು ಪುನರ್‌ ಸ್ಥಾಪಿಸಲು ಅಂಗವಿಕಲ ಅರ್ಜಿದಾರರಿಗೆ ಅನುಮತಿ ನೀಡಬೇಕು’ ಎಂದು ಖಡಕ್‌ ತಾಕೀತು ಮಾಡಿದೆ.

‘ಅಂಗಡಿಯ ಪುನರ್‌ ಸ್ಥಾಪನೆ ಮನವಿಯನ್ನು ಪುರಸ್ಕರಿಸಲು ಪ್ರತಿವಾದಿ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ದೇವನಹಳ್ಳಿಯ ಜಿ.ಕೆ.ಸುರೇಶ್‌ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಾನ್ಯ ಮಾಡಿದೆ.

‘ತಾಲ್ಲೂಕು ಕಚೇರಿ ಆವರಣದಲ್ಲಿ ಜೆರಾಕ್ಸ್‌ ಮತ್ತು ಕಂಪ್ಯೂಟರ್‌ ಅಂಗಡಿಯನ್ನು ‍ಪುನರ್‌ ಆರಂಭಿಸಲು ಸ್ಥಳಾವಕಾಶ ಕಲ್ಪಿಸಬೇಕೆಂಬ ಅರ್ಜಿದಾರರ ಮನವಿಯನ್ನು ಪರಿಗಣಿಸಿ’ ಎಂದು ‘ಅಂಗವಿಕಲ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ’ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.

ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ಡಿ.ಮೋಹನ್‌ ಕುಮಾರ್ ಮತ್ತು ಕೆ.ರಾಘವೇಂದ್ರ ಗೌಡ ಅವರ ವಾದಕ್ಕೆ ಪ್ರತಿಯಾಗಿ ಸರ್ಕಾರದ ಪರ ಹಾಜರಿದ್ದ ಮೊಹಮದ್ ಜಾಫರ್‌ ಷಾ ಅವರು ‘ದೇವನಹಳ್ಳಿ ತಾಲ್ಲೂಕು ಕಚೇರಿ ಆವರಣದಲ್ಲಿದ್ದ ಸುಮಾರು 50 ಅಂಗಡಿಗಳಿಂದ ತೊಂದರೆ ಉಂಟಾಗುತ್ತಿತ್ತು. ಇದರಿಂದ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ನ್ಯಾಯಾಲಯ ಒಂದಷ್ಟು ಕಾಲಾವಕಾಶ ನೀಡಿದರೆ ಅರ್ಜಿದಾರರ ಮನವಿ ಪತ್ರವನ್ನು ಮೆರಿಟ್‌ ಆಧಾರದಲ್ಲಿ ಪರಿಗಣಿಸಿ ಸೂಕ್ತ ಆದೇಶ ಹೊರಡಿಸಲಾಗುವುದು’ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಈ ಭರವಸೆಯನ್ನು ಪರಿಗಣಿಸಿದ ನ್ಯಾಯಪೀಠ ‘ಸರ್ಕಾರಿ ಸುತ್ತೋಲೆಯಲ್ಲಿ ಉಲ್ಲೇಖಿಸಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಎಂಟು ವಾರಗಳಲ್ಲಿ ಸೂಕ್ತ ಆದೇಶ ಹೊರಡಿಸಬೇಕು’ ಎಂದು ನಿರ್ದೇಶಿಸಿ ಅರ್ಜಿ ವಿಲೇವಾರಿ ಮಾಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.