ADVERTISEMENT

ಅನರ್ಹರಿಗೆ ಗುತ್ತಿಗೆ: ಬಿಬಿಎಂಪಿ ನಡೆಗೆ ಆಕ್ಷೇಪ

ಮಿಟ್ಟಗಾನಹಳ್ಳಿ ಕಸ ಭೂಭರ್ತಿ ಕೇಂದ್ರದ ವೈಜ್ಞಾನಿಕ ನಿರ್ವಹಣಾ ಘಟಕದ ಟೆಂಡರ್ ರದ್ದು l ಮರು ಟೆಂಡರ್‌ಗೆ ಸೂಚನೆ

ಪ್ರವೀಣ ಕುಮಾರ್ ಪಿ.ವಿ.
Published 28 ಡಿಸೆಂಬರ್ 2019, 4:57 IST
Last Updated 28 ಡಿಸೆಂಬರ್ 2019, 4:57 IST
   

ಬೆಂಗಳೂರು: ಮಿಟ್ಟಗಾನಹಳ್ಳಿ ಕ್ವಾರಿಯ ಕಸ ಭೂ ಭರ್ತಿ ಕೇಂದ್ರದಲ್ಲಿ ವೈಜ್ಞಾನಿಕ ನಿರ್ವಹಣಾ ಘಟಕ ಸ್ಥಾಪನೆ ಸಲುವಾಗಿ ಬಿಬಿಎಂಪಿ ಕರೆದಿದ್ದ ಟೆಂಡರ್‌ನಲ್ಲಿ ಅನರ್ಹ ಗುತ್ತಿಗೆದಾರರನ್ನು ಆಯ್ಕೆ ಮಾಡಿರುವುದಕ್ಕೆ ನಗರಾಭಿವೃದ್ಧಿ ಇಲಾಖೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕಾಮಗಾರಿಯ ಟೆಂಡರ್‌ ಪ್ರಕ್ರಿಯೆಯನ್ನೇ ರದ್ದುಪಡಿಸಿರುವ ಇಲಾಖೆ ಮರು ಟೆಂಡರ್‌ ಕರೆಯುವಂತೆ ಬಿಬಿಎಂಪಿಗೆ ಸೂಚಿಸಿದೆ.

ಈ ಕಾಮಗಾರಿಗೆ ಬಿಬಿಎಂಪಿ 2019ರ ಜುಲೈ 19ರಂದೇ ಇಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನಲ್ಲಿ ಟೆಂಡರ್‌ಗೆ ಆಹ್ವಾನಿಸಿತ್ತು. ಇದರ ಬಿಡ್‌ಗಳನ್ನು ಅ. 5ರಂದು ತೆರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಇಬ್ಬರು ಗುತ್ತಿಗೆದಾರರು ತಾಂತ್ರಿಕ ಅರ್ಹತೆ ಗಳಿಸಿದ್ದಾರೆ ಎಂದು ಬಿಬಿಎಂಪಿಯ ಟೆಂಡರ್‌ ಪರಿಶೀಲನಾ ಸಮಿತಿ ತಿಳಿಸಿತ್ತು. ಅ.14ರಂದು ಹಣಕಾಸು ಬಿಡ್‌ ತೆರೆಯಲಾಗಿತ್ತು. ಗೊರಾಂಟ್ಲಾ ಜಿಯೊಸಿಂಥೆಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಜಿ.ಪ್ರವೀಣ್‌ ಕುಮಾರ್ ಅತಿ ಕಡಿಮೆ ಮೊತ್ತ ನಮೂದಿಸಿದ ಗುತ್ತಿಗೆದಾರರಾಗಿದ್ದರು. ಅವರು ಮೂಲ ಮೊತ್ತಕ್ಕಿಂತ ಶೇ 18.7ರಷ್ಟು ಹೆಚ್ಚು ಮೊತ್ತವನ್ನು ನಮೂದಿಸಿದ್ದರು. ಅವರ ಜೊತೆ ದರ ಸಂಧಾನ ನಡೆಸಿದ ಬಳಿಕ ಮೂಲ ಮೊತ್ತಕ್ಕಿಂತ ಶೇ 4.99ರಷ್ಟು ಹೆಚ್ಚುವರಿ ಮೊತ್ತಕ್ಕೆ ಕಾಮಗಾರಿ ನಡೆಸಲು ಒಪ್ಪಿದ್ದರು. ಅವರಿಗೆ ಕಾಮಗಾರಿಯ ಗುತ್ತಿಗೆ ನೀಡುವ ಕುರಿತು ಟೆಂಡರ್‌ ಅಂಗೀಕಾರ ಸಮಿತಿ ಮುಂದೆ ಬಿಬಿಎಂಪಿ ಪ್ರಸ್ತಾವ ಮಂಡಿಸಿತ್ತು. ಈ ವೇಳೆ ಗುತ್ತಿಗೆದಾರರ ಅರ್ಹತೆ ಬಗ್ಗೆ ಪಾಲಿಕೆ ಆಯುಕ್ತರು ಮಾಹಿತಿ ನೀಡಿರಲಿಲ್ಲ.

ಗುತ್ತಿಗೆದಾರರು ಅಥವಾ ಸಂಸ್ಥೆ ಕಾಮಗಾರಿಯ ಗುತ್ತಿಗೆ ಪಡೆಯಲು ಅರ್ಹತೆ ಪಡೆಯಬೇಕಾದರೆ ಐದು ವರ್ಷಗಳಲ್ಲಿ ಟೆಂಡರ್‌ ಕರೆದ ಮಾದರಿಯದ್ದೇಯಾವುದಾದರೂ ಒಂದು ಕಾಮಗಾರಿಯನ್ನು ಪ್ರಮುಖ ಗುತ್ತಿಗೆದಾರರಾಗಿ ಪೂರ್ಣಗೊಳಿಸಿರಬೇಕು. ಅದರ ಮೊತ್ತ ಟೆಂಡರ್‌ನ ಅಂದಾಜು ಮೊತ್ತದ ಶೇ 50ಕ್ಕಿಂತ ಹೆಚ್ಚು ಇರಬೇಕು ಎಂಬ ನಿಯಮವಿದೆ. ಈ ಕಾಮಗಾರಿಗೆ ಅರ್ಹತೆ ಪಡೆಯಲು ಗುತ್ತಿಗೆದಾರರು ಕಸ ನಿರ್ವಹಣೆಯ ಭೂಭರ್ತಿ ಕೇಂದ್ರಗಳನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಕಾಮಗಾರಿ (₹ 32.25 ಕೋಟಿಗಿಂತ ಹೆಚ್ಚು ಮೊತ್ತದ್ದು) ನಿರ್ವಹಿಸಿದ ಅನು ಭವ ಹೊಂದಿರಬೇಕಿತ್ತು. ಬಿಬಿಎಂಪಿ ಆಯ್ಕೆ ಮಾಡಿದ್ದ ಗುತ್ತಿಗೆದಾರ ಪ್ರವೀಣ್‌ ಕುಮಾರ್‌ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್‌) ಪಡೆದಿರುವ ಪೂರ್ವಾ ನುಭವ ಪ್ರಮಾಣಪತ್ರವನ್ನು ಲಗತ್ತಿಸಿರುತ್ತಾರೆ. ಸಲ್ಲಿಸಿದ ಪ್ರಮಾಣ ಪತ್ರಗಳನ್ನು ಪರಿಶೀಲಿಸಿದಾಗ ಅವರು ಆ ಅರ್ಹತೆ ಹೊಂದಿರಲಿಲ್ಲ.

ADVERTISEMENT

‘ಪ್ರವೀಣ್‌ ಕುಮಾರ್‌ ಅವರು ಕೆಆರ್‌ಐಡಿಎಲ್‌ನಿಂದ ಉಪಗುತ್ತಿಗೆ ಪಡೆದು ಕಾಮಗಾರಿಗಳನ್ನು ನಡೆಸಿದ ಅನುಭವ ಮಾತ್ರ ಹೊಂದಿದ್ದರು. ಅವರು ಯಾವುದೇ ಕಾಮಗಾರಿಯ ಪ್ರಮುಖ ಗುತ್ತಿಗೆದಾರರಾಗಿಲ್ಲ. ಹಾಗಾಗಿ ಅವರು ತಾಂತ್ರಿಕವಾಗಿ ಅರ್ಹತೆ ಗಳಿಸಿಲ್ಲ’ ಎಂದು ಟೆಂಡರ್‌ ಅಂಗೀಕಾರ ಸಮಿತಿ ಅಭಿಪ್ರಾಯಪಟ್ಟಿದೆ.

2016ರ ಕಸ ನಿರ್ವಹಣೆ ನಿಯಮಗಳನ್ವಯ ನಗರದ ಕಸವನ್ನು ವೈಜ್ಞಾನಿಕವಾಗಿ ಕಸ ನಿರ್ವಹಣೆ ಮಾಡುವ ಸಲುವಾಗಿ 2019–20, 2020–21 ಹಾಗೂ 2021–22ನೇ ಸಾಲಿನಲ್ಲಿ ಕೈಗೊಳ್ಳುವ ಕ್ರಿಯಾಯೋಜನೆಗಳಿಗೆ ನಗರಾಭಿವೃದ್ಧಿ ಇಲಾಖೆ ಅನುಮೋದನೆ ನೀಡಿತ್ತು. ಈ ಕಾಮಗಾರಿಗಳನ್ನು ‘ಶುಭ್ರ ಬೆಂಗಳೂರು’ ಯೋಜನೆಯಡಿ ಕೈಗೆತ್ತಿಕೊಳ್ಳುವಂತೆ ಸೂಚಿಸಿತ್ತು.

ಅದರನ್ವಯ ಬೆಂಗಳೂರು ಪೂರ್ವ ತಾಲ್ಲೂಕಿನ ಮಿಟ್ಟಗಾನಹಳ್ಳಿ ಕ್ವಾರಿಯಲ್ಲಿ ₹ 65.50 ಕೋಟಿ ವೆಚ್ಚದಲ್ಲಿ ಕಸ ಭೂಭರ್ತಿ ಕೇಂದ್ರದಲ್ಲಿ ವೈಜ್ಞಾನಿಕ ಕಾರ್ಯಾಚರಣೆ ಮತ್ತು ನಿರ್ವಹಣಾ ಘಟಕ ಸ್ಥಾಪಿಸಲು ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಯಿಂದ ಆಡಳಿತಾತ್ಮಕ ಅನುಮೋದನೆ ಕೋರಿತ್ತು. ಪರಿಷ್ಕೃತ ಅಂದಾಜು ವೆಚ್ಚಕ್ಕೆ (₹ 65 ಕೋಟಿ) ಇಲಾಖೆ ಒಪ್ಪಿಗೆ ನೀಡಿತ್ತು.‌

ಅಂಕಿ ಅಂಶ

₹ 64.50 ಕೋಟಿ

ಕಾಮಗಾರಿಯ ಅ೦ದಾಜು ಮೊತ್ತ

₹ 76.59 ಕೋಟಿ

ಗುತ್ತಿಗೆದಾರರು ನಮೂದಿಸಿರುವ ಮೂಲ ಮೊತ್ತ

₹ 71.65 ಕೋಟಿ

ದರ ಸಂಧಾನದ ಬಳಿಕ ಗುತ್ತಿಗೆದಾರರು ಒಪ್ಪಿದ ಮೊತ್ತ

‘ಕೆಎಸ್‌ಪಿಸಿಬಿಯಿಂದ ಪಡೆದ ಅನುಮತಿ ಪತ್ರ ತೋರಿಸಿ’

ಕಸ ನಿರ್ವಹಣೆಗೆ ಸಂಬಂಧಿಸಿದ ಎಲ್ಲ ಕಾಮಗಾರಿಗಳನ್ನು 2016ರ ಕಸ ನಿರ್ವಹಣೆ ನಿಯಮಗಳ ಪ್ರಕಾರ ಹಾಗೂ ಇದಕ್ಕೆ ಅನ್ವಯವಾಗುವ ಪರಿಸರ ಸಂರಕ್ಷಣಾ ನಿಯಮಗಳ ಪ್ರಕಾರ ಅನುಷ್ಠಾನಗೊಳಿಸುವ ಹೊಣೆ ಪಾಲಿಕೆ ಆಯುಕ್ತರ ಮೇಲಿದೆ. ಹಾಗಾಗಿ ಇಂತಹ ಕಾಮಗಾರಿಗಳ ವಿಸ್ತೃತ ಯೋಜನಾ ವರದಿಗಳಿಗೆ (ಡಿಪಿಆರ್‌) ಸಂಬಂಧಪಟ್ಟ ಶಾಸನಬದ್ಧ ಸಂಸ್ಥೆಯ ಅನುಮತಿ ಪಡೆಯಬೇಕು. ಹಾಗಾಗಿ ಈ ಕಾಮಗಾರಿಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (ಕೆಎಸ್‌ಪಿಸಿಬಿ) ಅನುಮತಿ ಪಡೆದ ದಾಖಲೆಯನ್ನೂ ಸಲ್ಲಿಸಬೇಕು ಎಂದು ನಗರಾಭಿವೃದ್ಧಿ ಇಲಾಖೆ ಆಯುಕ್ತರಿಗೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.