ADVERTISEMENT

ದೀಪಾವಳಿ | ಊರುಗಳತ್ತ ಜನ: ಬೆಂಗಳೂರಿನ ಹಲವೆಡೆ ಸಂಚಾರ ದಟ್ಟಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:21 IST
Last Updated 17 ಅಕ್ಟೋಬರ್ 2025, 23:21 IST
<div class="paragraphs"><p>ದೀಪಾವಳಿ ಹಬ್ಬಕ್ಕೆಂದು ಜನರು ಊರಿನತ್ತ ಪ್ರಯಾಣ ಬೆಳೆಸಿದ್ದು ಬೆಂಗಳೂರಿನ ಹೊಸೂರು ರಸ್ತೆಯ ಬೊಮ್ಮನಹಳ್ಳಿ ಬಳಿ ಶುಕ್ರವಾರ ವಾಹನ ದಟ್ಟಣೆ ಕಂಡುಬಂತು. </p></div>

ದೀಪಾವಳಿ ಹಬ್ಬಕ್ಕೆಂದು ಜನರು ಊರಿನತ್ತ ಪ್ರಯಾಣ ಬೆಳೆಸಿದ್ದು ಬೆಂಗಳೂರಿನ ಹೊಸೂರು ರಸ್ತೆಯ ಬೊಮ್ಮನಹಳ್ಳಿ ಬಳಿ ಶುಕ್ರವಾರ ವಾಹನ ದಟ್ಟಣೆ ಕಂಡುಬಂತು.

   

ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ. 

ಬೆಂಗಳೂರು: ಉದ್ಯೋಗ, ವ್ಯಾಸಂಗ ಸೇರಿ ವಿವಿಧ ಕಾರಣಗಳಿಂದ ನಗರದಲ್ಲಿ ನೆಲಸಿರುವ ಲಕ್ಷಾಂತರ ಮಂದಿ ದೀಪಾವಳಿ ಹಬ್ಬದ ಅಂಗವಾಗಿ ಶುಕ್ರವಾರ ರಾತ್ರಿ ತಮ್ಮ ಊರುಗಳಿಗೆ ಹೊರಟರು. ಇದರಿಂದಾಗಿ ನಗರದ ಹಲವೆಡೆ ಸಂಚಾರ ದಟ್ಟಣೆ ಉಂಟಾಯಿತು.

ADVERTISEMENT

ಭಾನುವಾರ ರಜಾ ದಿನ. ಹಬ್ಬದ ಕಾರಣ ಸೋಮವಾರ, ಬುಧವಾರ ಸರ್ಕಾರಿ ರಜೆ ಇರಲಿದೆ. ಖಾಸಗಿ ಕಂಪನಿಗಳ ಬಹುತೇಕ ಮಂದಿಗೆ ಶನಿವಾರವೂ ರಜೆ ಇದೆ. ಹೀಗಾಗಿ ಶುಕ್ರವಾರ ರಾತ್ರಿಯೇ ಕುಟುಂಬ ಸಮೇತ ಊರುಗಳತ್ತ ಮುಖ ಮಾಡಿದ್ದರು. ಮೆಜೆಸ್ಟಿಕ್​​ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಕಂಡು ಬಂತು. ರೈಲು ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಯಶವಂತಪುರ ರೈಲು ನಿಲ್ದಾಣ ಸೇರಿ ವಿವಿಧೆಡೆ ಭಾರಿ ಜನಜಂಗುಳಿ ಇತ್ತು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಕರು ತುಂಬಿ ತುಳುಕುತ್ತಿದ್ದರು.  

ಹೊಸೂರು ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆೆ, ಬಳ್ಳಾರಿ ರಸ್ತೆಯುದ್ದಕ್ಕೂ ಸಾಲು-ಸಾಲಾಗಿ ಸಾಗುತ್ತಿದ್ದ ಖಾಸಗಿ ವಾಹನಗಳಿಂದ ಅಧಿಕ ದಟ್ಟಣೆ ಉಂಟಾಯಿತು. ಸ್ವಂತ ವಾಹನಗಳಾದ ಕಾರು, ದ್ವಿಚಕ್ರ ವಾಹನಗಳಲ್ಲೇ ಲಕ್ಷಾಂತರ ಮಂದಿ ರಾತ್ರಿ ಊರಿನತ್ತ ತೆರಳಿದ ಪರಿಣಾಮ, ವಾಹನಗಳು ತಾಸುಗಟ್ಟಲೆ ಟ್ರಾಫಿಕ್‌ನಲ್ಲಿ ಸಾಲುಗಟ್ಟಿ ನಿಂತಿದ್ದವು.  

ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸರು ಹರಸಾಹಸಪಟ್ಟರು. ರೈಲು ಹಾಗೂ ಬಸ್‌ ನಿಲ್ದಾಣಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. 

ಭಾಗಮತಿ ಸೂಪರ್‌ಫಾಸ್ಟ್‌ ರೈಲಿನಲ್ಲಿ ಬಿಹಾರಕ್ಕೆ ತೆರಳಲು ಭಾರಿ ಪ್ರಮಾಣದಲ್ಲಿ ಕಾರ್ಮಿಕರು ಬಂದಿದ್ದರಿಂದ ಶುಕ್ರವಾರ ಮೆಜೆಸ್ಟಿಕ್‌ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ದಟ್ಟಣೆ ಉಂಟಾಯಿತು

ದೀಪಾವಳಿ ಹಬ್ಬದ ಕಾರಣ ಊರುಗಳಿಗೆ ಹೋಗುವವರ ಸಂಖ್ಯೆ ಹೆಚ್ಚಾಗಿದ್ದು ಬೆಂಗಳೂರಿನ ಮೆಜಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಶುಕ್ರವಾರ ರಾತ್ರಿ ಹೆಚ್ಚಿನ ದಟ್ಟಣೆ ಕಂಡು ಬಂತು       

ಬಿಹಾರಕ್ಕೆ ಹೊರಟ ಕಾರ್ಮಿಕರು

ಹಬ್ಬ ಮತ್ತು ಬಿಹಾರದಲ್ಲಿ ವಿಧಾನಸಭಾ ಚುನಾವಣೆ ಇರುವುದರಿಂದ ಕರ್ನಾಟಕದಲ್ಲಿ ಇರುವ ಬಿಹಾರಿ ಕಾರ್ಮಿಕರು ತಮ್ಮ ರಾಜ್ಯಕ್ಕೆ ಹೊರಟಿದ್ದಾರೆ. ಇದರಿಂದ ರೈಲು ನಿಲ್ದಾಣಗಳಲ್ಲಿ ನೂಕುನುಗ್ಗಲು ಉಂಟಾಯಿತು. ನವೆಂಬರ್‌ 6 ಮತ್ತು 11ರಂದು ಬಿಹಾರದಲ್ಲಿ ಚುನಾವಣೆ ನಡೆಯಲಿದೆ. ಹಾಗಾಗಿ ಕಾರ್ಮಿಕರು ದೀರ್ಘ ರಜೆಯೊಂದಿಗೆ ತೆರಳುತ್ತಿದ್ದಾರೆ. ಭಾಗಮತಿ ಸೂಪರ್‌ಫಾಸ್ಟ್‌ ಪ್ರತಿ ಶುಕ್ರವಾರ ಬೆಳಿಗ್ಗೆ 10.30ಕ್ಕೆ ಮೈಸೂರಿನಿಂದ ಹೊರಡುತ್ತದೆ. ಬಿಹಾರದ ದರ್ಭಾಂಗಕ್ಕೆ ಪ್ರತಿ ಭಾನುವಾರ ಸಂಜೆ 4ಕ್ಕೆ ತಲುಪುತ್ತದೆ. ಈ ರೈಲು ಪ್ರತಿ ಶುಕ್ರವಾರ ಮಧ್ಯಾಹ್ನ 1.35ಕ್ಕೆ ಬೆಂಗಳೂರಿಗೆ ಬಂದು 1.50ಕ್ಕೆ ಹೊರಡುತ್ತದೆ. ಈ ಬಾರಿ ತಮ್ಮ ಪಾತ್ರೆ ಸರಕು–ಸರಂಜಾಮುಗಳೊಂದಿಗೆ ಜನರು ಗುಳೇ ಹೊರಟಂತೆ ನಿಲ್ದಾಣಕ್ಕೆ ಬಂದಿದ್ದರಿಂದ ಮಧ್ಯಾಹ್ನ ನಿಲ್ದಾಣದಲ್ಲಿ ಒಮ್ಮೆಲೇ ಜನಸಂದಣಿ ಉಂಟಾಯಿತು.