
ಬೆಂಗಳೂರು: ಅಪಾರ್ಟ್‌ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ಸರ್ಕಾರ ನಿಲ್ಲುತ್ತದೆ. ಅದಕ್ಕಾಗಿ ‘ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ಮಸೂದೆ– 2025’ ಸಿದ್ಧಪಡಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಮಸೂದೆ ಬಗ್ಗೆ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳೊಂದಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಅವರು ಸಂವಾದ ನಡೆಸಿದರು.
‘ಈ ಸಂವಾದ ಕಾರ್ಯಕ್ರಮದಲ್ಲಿ ಸಲಹೆ ನೀಡಲು ಸಾಧ್ಯವಾಗದವರು gbasuggesion@gmail.com ಗೆ ಮೇಲ್ ಮಾಡಬಹುದು. 10 ದಿನಗಳಲ್ಲಿ ಸಲಹೆ ಕಳುಹಿಸಿ. ನಾನು ಎಲ್ಲವನ್ನು ಪರಿಶೀಲಿಸುತ್ತೇನೆ. ಇಲ್ಲೂ ಸಲಹೆ, ಸಮಸ್ಯೆಗಳನ್ನು ಆಲಿಸಿದ್ದೇನೆ. ನಿಮ್ಮ ಸಲಹೆಗಳು ಅತ್ಯುತ್ತಮವಾಗಿವೆ. ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ. ನಾನೂ ಅಪಾರ್ಟ್‌ಮೆಂಟ್‌ಗಳನ್ನು ಹೊಂದಿದ್ದೇನೆ. ನಿಮ್ಮ ಜೊತೆ ನಿಂತು, ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ. ಈ ಸರ್ಕಾರ ನನ್ನದಲ್ಲ, ನಿಮ್ಮದು’ ಎಂದು ತಿಳಿಸಿದರು.
‘ಬೆಂಗಳೂರು ಬಹಳ ದೊಡ್ಡದಾಗಿ ಬೆಳೆದಿದ್ದು, ಉತ್ತಮ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಜಿಬಿಎ ರಚನೆ ಮಾಡಿದ್ದೇವೆ. 25 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. ನಿತ್ಯ ಮೂರು ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ನಗರದಲ್ಲಿ ವಾಹನಗಳ ಸಂಖ್ಯೆ 1.30 ಕೋಟಿ ಇದೆ’ ಎಂದು ಹೇಳಿದರು.
‘ನಗರದ ಜನಸಂಖ್ಯೆಯಲ್ಲಿ ಶೇ 19ರಷ್ಟು ಜನ ಅಪಾರ್ಟ್‌ಮೆಂಟ್ ನಿವಾಸಿಗಳಾಗಿದ್ದಾರೆ. ನಗರದಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇದ್ದಾರೆ. ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಐ.ಟಿ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಐ.ಟಿ ವೃತ್ತಿಪರರು ಇದ್ದಾರೆ. ಇದರಲ್ಲಿ ಬಹುತೇಕರು ನಿಮ್ಮ ಅಪಾರ್ಟ್‌ಮೆಂಟ್‌ಗಳಲ್ಲಿದ್ದಾರೆ. ಆದರೂ, 1972ರಲ್ಲಿ ಅಪಾರ್ಟ್‌ಮೆಂಟ್ ಕಾಯ್ದೆ ಬಂದ ನಂತರ ಮತ್ತೆ ಯಾವುದೇ ಸರ್ಕಾರಗಳು ಅಪಾರ್ಟ್‌ಮೆಂಟ್‌ಗಳಿಗೆ ಶಕ್ತಿ ತುಂಬಲಿಲ್ಲ’ ಎಂದರು.
‘ಸಂವಾದದಲ್ಲಿ ಡಿ.ಕೆ. ಶಿವಕುಮಾರ್ ಅವರು ನಮ್ಮ ಸಲಹೆಗಳನ್ನು ಆಲಿಸಿದ್ದು, ಅದನ್ನು ಅಳವಡಿಸಿಕೊಂಡು, ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸಬೇಕು’ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ ಅಧ್ಯಕ್ಷ ಸತೀಶ್ ಮಲ್ಯ ಹೇಳಿದರು.
‘ಸಮಗ್ರ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆಯಲ್ಲಿ (ಕೆಎಒಎಂಎ) ಉತ್ತಮ ಅಂಶಗಳನ್ನು ಅಳವಡಿಸಲಾಗಿದೆ. ಈ ಕಾಯ್ದೆ ಅನುಷ್ಠಾನ ಇಂದಿನ ತುರ್ತು ಅಗತ್ಯವಾಗಿದೆ’ ಎಂದರು.
ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಕೆ. ಅರುಣ್ ಕುಮಾರ್, ಖಜಾಂಚಿ ಕಿರಣ್ ಹೆಬ್ಬಾರ್ ಸೇರಿದಂತೆ ವಿವಿಧ ಭಾಗಗಳ ಅಪಾರ್ಟ್‌ಮೆಂಟ್ ಮಾಲೀಕರು, ಫೆಡರೇಷನ್ ಪ್ರತಿನಿಧಿಗಳು ಭಾಗವಹಿಸಿದ್ದರು.
‘ಯಾರತ್ತರ ಡೀಲ್ ಮಾಡುತ್ತಿದ್ಯಾ ಗೊತ್ತಾ?’
‘ಈ ದೇಶದ ಪ್ರಧಾನ ಮಂತ್ರಿ ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿರುವವನು ನಾನು. ಅವನ್ಯಾರೋ ಹೆಬ್ಬಾರ್ ಎಂಬುವವನಿಗೆ ಹೆದರುತ್ತೇನೆಯೇ? ಯಾರತ್ತರ ಡೀಲ್ ಮಾಡುತ್ತಿದ್ಯಾ ಗೊತ್ತಾ? ಯಾರಿಗೂ ಹೆದರುವ ಜಗ್ಗುವ ಮಾತೇ ಇಲ್ಲ. ಯಾರೇ ಆಗಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಕನಿಷ್ಠ ಪರಿಜ್ಞಾನ ಇಟ್ಟುಕೊಳ್ಳಬೇಕು’ ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದರು. ‘ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್‌ಮೆಂಟ್ ಮಾಲೀಕ ಎಂದು ಪತ್ರ ಬರೆದಿದ್ದು ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದ್ದು ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ. ಎಲ್ಲರನ್ನೂ ಆಟ ಆಡಿಸಿದ ಹಾಗೆ ನನ್ನನ್ನು ಆಡಿಸಲು ಸಾಧ್ಯ ಇಲ್ಲ’ ಎಂದರು.
‘ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ’
‘ನಾನು ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ. ಅಪಾರ್ಟ್‌ಮೆಂಟ್‌ಗಳಿಗೆ ಜಾಗ ಕೊಟ್ಟಿದ್ದೇನೆ. ನಾವು ಇರುವುದೇ ನಿಮ್ಮ ಸೇವೆ ಮಾಡಲು. ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ. ಪ್ರತಿ ಅಪಾರ್ಟ್‌ಮೆಂಟ್‌ನಲ್ಲಿ ಯಾರಿಗೆ ಎಷ್ಟು ಮತ ಬೀಳುತ್ತದೆ ಎಂದೂ ನನಗೆ ಗೊತ್ತಿದೆ. ಆದರೂ ನಾವು ನಿಮ್ಮ ಸೇವೆ ಮಾಡಿ ನಿಮ್ಮ ವಿಶ್ವಾಸ ಗೆಲ್ಲಲು ಬಯಸುತ್ತೇನೆ. ನೀವು ಬಲಿಷ್ಠವಾಗಿದ್ದರೆ ನಾವು ಬಲಿಷ್ಠ ನೀವು ದುರ್ಬಲರಾದರೆ ನಾವು ದುರ್ಬಲ ಎಂದು ಭಾವಿಸಿದ್ದೇನೆ. ನಾನು ನೇರವಾಗಿ ಕಟುವಾಗಿ ಹಾಗೂ ದಿಟ್ಟವಾಗಿ ಮಾತನಾಡಿದ್ದೇನೆ. ಇದಕ್ಕೆ ಯಾರೂ ಬೇಸರ ಮಾಡಿಕೊಳ್ಳಬೇಡಿ. ಬೆದರಿಸಿದರೆ ನಡೆಯುತ್ತದೆ ಎಂಬ ಭ್ರಮೆ ಬೇಡ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
‘ಸಹಾಯ ಮಾಡಿದರೂ ನನ್ನ ತಮ್ಮನನ್ನು ಸೋಲಿಸಿದಿರಿ’
‘ಲೋಕಸಭೆ ಚುನಾವಣೆ ಸಮಯದಲ್ಲಿ 100 ಅಪಾರ್ಟ್‌ಮೆಂಟ್‌ಗಳಿಗೆ ಭೇಟಿ ನೀಡಿ ನಮಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದೆ. ಸುಮಾರು ಆರು ಸಾವಿರ ಕೊಳವೆ ಬಾವಿ ಬತ್ತಿದ್ದಾಗ ಎಷ್ಟೇ ಕಷ್ಟ ಆದರೂ ನಿಮಗೆ ತೊಂದರೆ ಆಗಬಾರದು ಎಂದು ಸಹಾಯ ಮಾಡಿದ್ದೆ. ಆದರೆ ಚುನಾವಣೆ ಫಲಿತಾಂಶ ಬಂದಾಗ ನೀವು ನಮಗೆ ಬೆಂಬಲ ನೀಡಲಿಲ್ಲ. ನನ್ನ ತಮ್ಮನನ್ನು ಒಂದೇ ಕ್ಷೇತ್ರದಲ್ಲಿ ಒಂದು ಲಕ್ಷ ಮತಗಳಿಂದ ಸೋಲಿಸಿದಿರಿ. ನೀವು ನಮಗೆ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ನಾವು ಕಷ್ಟಪಟ್ಟು ಸಹಾಯ ಮಾಡಿದರೂ ನೀವು ನಮಗೆ ಕರುಣೆ ತೋರಲಿಲ್ಲ. ಆಗ ನಾವು ಯಾಕೆ ಸಹಾಯ ಮಾಡಬೇಕು ಎಂದು ಅನಿಸಿದ್ದು ನಿಜ’ ಎಂದು ಡಿ.ಕೆ. ಶಿವಕುಮಾರ್ ಬೇಸರ ವ್ಯಕ್ತಪಡಿಸಿದರು. ‘ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಕೋರುತ್ತೇನೆ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನನಗೆ ನಿರಾಸೆ ಮಾಡಬೇಡಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.