ADVERTISEMENT

ವೈದ್ಯೆ ಕೃತಿಕಾರೆಡ್ಡಿ ಕೊಲೆ: ಆರೋಪಿ ವೈದ್ಯನಿಂದಲೇ ಅನಸ್ತೇಶಿಯಾ ಖರೀದಿ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 15:47 IST
Last Updated 21 ಅಕ್ಟೋಬರ್ 2025, 15:47 IST
ಕೊಲೆಯಾದ ಡಾ.ಕೃತಿಕಾ ರೆಡ್ಡಿ ಹಾಗೂ ಆರೋಪಿ ಜಿ.ಎಸ್‌.ಮಹೇಂದ್ರ ರೆಡ್ಡಿ 
ಕೊಲೆಯಾದ ಡಾ.ಕೃತಿಕಾ ರೆಡ್ಡಿ ಹಾಗೂ ಆರೋಪಿ ಜಿ.ಎಸ್‌.ಮಹೇಂದ್ರ ರೆಡ್ಡಿ    

ಬೆಂಗಳೂರು: ವೈದ್ಯೆ ಕೃತಿಕಾರೆಡ್ಡಿ(28) ಅವರ ಕೊಲೆ ಪ್ರಕರಣದ ಆರೋಪಿ ಡಾ. ಜಿ.ಎಸ್. ಮಹೇಂದ್ರ ರೆಡ್ಡಿ ಅವರ ವಿಚಾರಣೆ ತೀವ್ರಗೊಳಿಸಿರುವ ಹೆಬ್ಬಗೋಡಿ ಠಾಣೆಯ ಪೊಲೀಸರು, ಆರೋಪಿಯ ಮನೆಯಲ್ಲಿ ಸ್ಥಳ ಮಹಜರು ನಡೆಸಿದ್ದಾರೆ.

ಮಹಜರು ಪ್ರಕ್ರಿಯೆ ವೇಳೆ ಕೃತಿಕಾ ರೆಡ್ಡಿ ಅವರಿದ್ದ ಕೊಠಡಿಯಲ್ಲಿ ರಾಶಿ ರಾಶಿ ಔಷಧಗಳು ಪತ್ತೆಯಾಗಿವೆ. ಅವುಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ. 

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ‘ಸಹಜ ಸಾವು’ ಎಂಬುದಾಗಿ ಮಹೇಂದ್ರ ರೆಡ್ಡಿ ಅವರು ಬಿಂಬಿಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್ಎಲ್‌) ಪರೀಕ್ಷೆಯ ವೇಳೆ ಕೃತಿಕಾ ರೆಡ್ಡಿ ಅವರ ದೇಹದಲ್ಲಿ ಅನಸ್ತೇಶಿಯಾ ಮಾದರಿ ಇರುವುದು ಪತ್ತೆಯಾಗಿತ್ತು. ಬಳಿಕ, ಕೃತಿಕಾ ಅವರ ತಂದೆ ಪೊಲೀಸರಿಗೆ ದೂರು ನೀಡಿದ್ದರು. ದೂರು ಆಧರಿಸಿ ಪತಿಯನ್ನು ಬಂಧಿಸಿ, ತಮ್ಮ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ADVERTISEMENT

‘ಕೃತಿಕಾ ಅವರಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾರೆ. ತಾನೇ  ಮೆಡಿಕಲ್ ಶಾಪ್‌ಗೆ ತೆರಳಿ ಔಷಧ ತಂದಿರುವುದಾಗಿಯೂ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಅನಸ್ತೇಶಿಯಾ ಕೇಳಿದಾಗ ಮೆಡಿಕಲ್ ಶಾಪ್‌ನವರು ಕೊಡಲು ನಿರಾಕರಿಸಿದ್ದರು. ‘ನಾನು ಸರ್ಜನ್‌’ ಎಂದು ಗುರುತಿನ ಚೀಟಿ ತೋರಿಸಿದ್ದರು. ‘ಚಿಕಿತ್ಸೆಗೆ ಅನಸ್ತೇಶಿಯಾ ಬೇಕಾಗಿದೆ’ ಎಂಬುದಾಗಿಯೂ ಮೆಡಿಕಲ್‌ ಶಾಪ್‌ನವರ ಬಳಿ ನಂಬಿಸಿದ್ದರು. ಅದನ್ನು ನಂಬಿದ್ದ ಮೆಡಿಕಲ್‌ ಶಾಪ್‌ವೊಂದರ ಸಿಬ್ಬಂದಿ, ಮಹೇಂದ್ರ ರೆಡ್ಡಿ ಕೇಳಿದ್ದ ಔಷಧವನ್ನು ನೀಡಿದ್ದರು’ ಎಂಬುದು ಗೊತ್ತಾಗಿದೆ.

‘ಮೆಡಿಕಲ್‌ ಶಾಪ್‌ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಔಷಧವನ್ನು ಮನೆಗೆ ತಂದು ಐ.ವಿ ಮೂಲಕ ಅನಸ್ತೇಶಿಯಾ ನೀಡಿದ್ದರು. ಅನಸ್ತೇಶಿಯಾ ನೀಡಿದ ಬಳಿಕ ಕೃತಿಕಾ ಅವರು ನಿದ್ರೆಗೆ ಜಾರಿದ್ದರು. ಬಳಿಕ ಕೋಮಾಸ್ಥಿತಿಗೆ ತಲುಪಿ, ಕೃತಿಕಾ ಅವರು ಮೃತಪಟ್ಟಿದ್ದರು. ಅಂದು ರಾತ್ರಿ ಅದೇ ಕೊಠಡಿಯಲ್ಲೇ ಆರೋಪಿ ಸಹ ಮಲಗಿದ್ದರು’ ಎಂದು ಮೂಲಗಳು ತಿಳಿಸಿವೆ.

‘ಕೃತಿಕಾ ಅವರ ಕೊಠಡಿಯನ್ನು ಆರೋಪಿ ಕ್ಲಿನಿಕ್ ರೀತಿ ಬದಲಾಯಿಸಿಕೊಂಡಿದ್ದರು. ಋತುಚಕ್ರದ ಸಮಯದಲ್ಲೂ ಕೃತಿಕಾ ಅವರಿಗೆ ಡ್ರಿಪ್ ಹಾಕಿಕೊಳ್ಳಲು ಮಹೇಂದ್ರ ರೆಡ್ಡಿ ಒತ್ತಾಯಿಸುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.