ADVERTISEMENT

ಬೆಂಗಳೂರು | ವೈದ್ಯೆಗೆ ಕಿರುಕುಳ: ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 14:39 IST
Last Updated 3 ಜನವರಿ 2026, 14:39 IST
ರಾಕೇಶ್ 
ರಾಕೇಶ್    

ಬೆಂಗಳೂರು: ವೈದ್ಯೆಗೆ ಕಿರುಕುಳ ನೀಡಿದ್ದ ಆರೋಪಿಯನ್ನು ಸೋಲದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಕೂರಿನ ರಾಕೇಶ್ (21) ಬಂಧಿತ ಆರೋಪಿ.

‘ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ಹೇಳಿದರು.‌

ADVERTISEMENT

ಡಿ.17ರಂದು ಬೆಳಗಿನ ಜಾವ ಕರ್ತವ್ಯ ಮುಗಿಸಿ ಪೇಯಿಂಗ್ ಗೆಸ್ಟ್‌ ತೆರಳುತ್ತಿದ್ದ ವೈದ್ಯೆಯ ಬಳಿ ಆರೋಪಿ ಅಸಭ್ಯವಾಗಿ ವರ್ತಿಸಿ ಪರಾರಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕರ್ತವ್ಯ ಮುಗಿಸಿ ಬರುತ್ತಿದ್ದ ವೈದ್ಯೆಗೆ ಆಕೆಯ ಪಿಜಿ ಮುಂಭಾಗದಲ್ಲಿಯೇ ಎದುರಾಗಿದ್ದ ಆರೋಪಿ, ಬಸ್ ನಿಲ್ದಾಣದ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿದ್ದ. ವೈದ್ಯೆ ಭಯದಿಂದಲೇ ವಿಳಾಸ ಹೇಳಿ ಪೇಯಿಂಗ್‌ ಗೆಸ್ಟ್‌ನ ಗೇಟ್‌ ತೆರೆಯಲು ಮುಂದಾಗಿದ್ದರು. ಆಗ ಸ್ಕೂಟಿ ನಿಲ್ಲಿಸಿ ಹತ್ತಿರ ಬಂದಿದ್ದ ಆರೋಪಿ, ಆಕೆಯ ದೇಹ ಸ್ಪರ್ಶಿಸುತ್ತಾ ಅಸಭ್ಯವಾಗಿ ವರ್ತಿಸಿದ್ದ. ವೈದ್ಯೆ ಜೋರಾಗಿ ಕೂಗಿದ್ದರಿಂದ ಆರೋಪಿ ಅಲ್ಲಿಂದ ಪರಾರಿ ಆಗಿದ್ದ ಎಂದು ಪೊಲೀಸರು ಹೇಳಿದರು.

ಆರೋಪಿಯ ವಿರುದ್ಧ ಹಳೆಯ ಪ್ರಕರಣಗಳಿಲ್ಲ. ತಾಯಿ ಜತೆಗೆ ಬೆಂಗಳೂರಿನಲ್ಲಿ ಆರೋಪಿ ವಾಸವಿದ್ದ. ಪರಿಚಿತರನ್ನು ಭೇಟಿಯಾಗಲು ಚಿಕ್ಕಬಾಣಾವರಕ್ಕೆ ತೆರಳುತ್ತಿದ್ದ ವೇಳೆ ಕೃತ್ಯ ಎಸಗಿದ್ದ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.