ADVERTISEMENT

ಡಾ.ಕೃತಿಕಾ ರೆಡ್ಡಿ ಕೊಲೆ: ಪತಿ ಕೃತ್ಯ ಸಾಬೀತು

ಅನಸ್ತೇಶಿಯಾ ನೀಡಿ ಕೊಲೆ ಮಾಡಿ ‘ಸಹಜ ಸಾವು’ ಎಂದು ಬಿಂಬಿಸಿದ್ದ ಪತಿ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 0:16 IST
Last Updated 10 ಜನವರಿ 2026, 0:16 IST
ಕೊಲೆಯಾದ ಕೃತಿಕಾ ರೆಡ್ಡಿ ಹಾಗೂ ಆರೋಪಿ ಮಹೇಂದ್ರ ರೆಡ್ಡಿ 
ಕೊಲೆಯಾದ ಕೃತಿಕಾ ರೆಡ್ಡಿ ಹಾಗೂ ಆರೋಪಿ ಮಹೇಂದ್ರ ರೆಡ್ಡಿ    

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಗೆ ಅನಸ್ತೇಶಿಯಾ ನೀಡಿ ಕೊಲೆ ಮಾಡಿ ‘ಸಹಜ ಸಾವು’ ಎಂದು ಬಿಂಬಿಸಿದ್ದ ಪ್ರಕರಣದ ತನಿಖೆ ಪೂರ್ಣ ಗೊಳಿಸಿರುವ ಮಾರತ್‌ಹಳ್ಳಿ ಠಾಣೆಯ ಪೊಲೀಸರು, ಎಸಿಜೆಎಂ ನ್ಯಾಯಾಲಯಕ್ಕೆ ಅಂದಾಜು 3 ಸಾವಿರಕ್ಕೂ ಹೆಚ್ಚು ಪುಟಗಳ ವಿವರವಾದ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಪತಿಯ ಕೃತ್ಯ ಸಾಬೀತಾಗಿದೆ ಎಂದು ಉಲ್ಲೇಖಿಸಲಾಗಿದೆ.

ಮುನೇನಕೊಳಲು ಅಯ್ಯಪ್ಪಸ್ವಾಮಿ ಲೇಔಟ್‌ ನಿವಾಸಿ ಡಾ.ಕೃತಿಕಾ ರೆಡ್ಡಿ (28) ಅವರನ್ನು 2024ರ ಏಪ್ರಿಲ್‌ 23ರಂದು ಗುಂಜೂರಿನ ನಿವಾಸಿ, ಪತಿ ಡಾ.ಜಿ.ಎಸ್‌.ಮಹೇಂದ್ರ ರೆಡ್ಡಿ (31) ಅವರು ಕೊಲೆ ಮಾಡಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಪೊಲೀಸರು ಮೃತದೇಹದ ಕೆಲ ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಯಲಕ್ಕೆ ರವಾನಿಸಿದ್ದರು. ಅದರ ವರದಿ 2025ರ ಅಕ್ಟೋಬರ್ 15ರಂದು
ಬಂದಿತ್ತು. ಅನಸ್ತೇಶಿಯಾ ಅಂಶ ಗಳು ಹೆಚ್ಚಾಗಿದ್ದರಿಂದ ಕೃತಿಕಾ ರೆಡ್ಡಿ ಮೃತಪಟ್ಟಿದ್ದಾರೆ ಎಂದು ಎಫ್‌ಎಸ್‌ಎಲ್‌ ವರದಿಯಲ್ಲಿ ದೃಢಪಟ್ಟಿತ್ತು. ಕೃತಿಕಾ ಅವರ
ತಂದೆಯಿಂದ ದೂರು ಪಡೆದುಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಮಹೇಂದ್ರ ರೆಡ್ಡಿ ಅವರೇ ಕೃತ್ಯ ಎಸಗಿರುವು ದಕ್ಕೆ ಕೆಲವು ಸಾಕ್ಷಿಗಳು ಲಭಿಸಿದ ಬೆನ್ನಲ್ಲೇ ಅವರನ್ನು ಮಾರತ್‌ಹಳ್ಳಿ ಠಾಣೆಯ ಪೊಲೀಸರು ಬಂಧಿಸಿ ದ್ದರು. ಮಹೇಂದ್ರ ರೆಡ್ಡಿ ಅವರು ‍ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತಾಂತ್ರಿಕ ಹಾಗೂ ಎಫ್‌ಎಸ್‌ಎಲ್ ವರದಿಗಳು ಸೇರಿದಂತೆ 72ಕ್ಕೂ ಹೆಚ್ಚು ಮಹತ್ವದ ಸಾಕ್ಷ್ಯಗಳನ್ನು ಸಂಗ್ರಹಿಸಿ, ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ. ಡಿಜಿಟಲ್ ಸಾಕ್ಷ್ಯಗಳು, ವೈದ್ಯಕೀಯ ವಿವರಗಳು, ತಾಂತ್ರಿಕ ಹಾಗೂ ಎಫ್‌ಎಸ್‌ಎಲ್ ವರದಿಗಳ ಆಧಾರದ ಮೇಲೆ ಮಹೇಂದ್ರ ರೆಡ್ಡಿ ಅವರೇ ಕೃತ್ಯ ಎಸಗಿರುವುದು ದೃಢಪಟ್ಟಿದೆ ಎಂದು ಮೂಲಗಳು ಹೇಳಿವೆ.

ADVERTISEMENT

‘ಪತ್ನಿ ಅನಾರೋಗ್ಯದಿಂದ ಬಳಲುತ್ತಿ ದ್ದರು ಎಂಬ ನೆಪವೊಡ್ಡಿ ಮಹೇಂದ್ರ ರೆಡ್ಡಿ ಅವರು ಬೇರೆ ಔಷಧಿಗಳನ್ನು ನೀಡುವ ಸಮಯದಲ್ಲಿ ಹೆಚ್ಚುವರಿ ಅನಸ್ತೇಶಿಯಾ ನೀಡಿದ್ದರು. ಮೆಡಿಕಲ್‌ ಸ್ಟೋರ್‌ಗೆ ಹೋಗಿ ಅವರೇ ಅನಸ್ತೇಶಿಯಾ ಖರೀದಿಸಿ ತಂದಿದ್ದರು. ಮೆಡಿಕಲ್‌ ಸ್ಟೋರ್‌ಗೆ ಹೋಗಿ ವಾಪಸ್ ಬರುತ್ತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅಲ್ಲದೇ ಯುಪಿಐ ಮೂಲಕ ಹಣ ಪಾವತಿ ಮಾಡಿದ ದಾಖಲೆಗಳನ್ನು ಸಂಗ್ರಹಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

ಸಂದೇಶದಲ್ಲಿತ್ತು ಕೊಲೆ ರಹಸ್ಯ

ಆರೋಪಿ ಬಂಧನದ ಬಳಿಕ ಮೊಬೈಲ್‌ ಹಾಗೂ ಲ್ಯಾಪ್‌ಟಾಪ್‌ ವಶಕ್ಕೆ ಪಡೆದುಕೊಂಡು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ(ಎಫ್‌ಎಸ್‌ಎಲ್‌) ರವಾನೆ ಮಾಡಲಾಗಿತ್ತು. ಎಫ್‌ಎಸ್‌ಎಲ್‌ ತಜ್ಞರು ಪರಿಶೀಲನೆ ನಡೆಸಿ ವರದಿ ನೀಡಿದ್ದರು. ಗೆಳತಿಯ ಜತೆಗೆ ಆರೋಪಿ ಚಾಟಿಂಗ್ ನಡೆಸಿರುವುದು ಪತ್ತೆಯಾಗಿತ್ತು.

ಪದೇ ಪದೇ ಚಾಟಿಂಗ್ ಮಾಡುತ್ತಿದ್ದಂತೆ ಬೇಸರಗೊಂಡಿದ್ದ ಸ್ನೇಹಿತೆ, ಮಹೇಂದ್ರ ರೆಡ್ಡಿ ಅವರ ಮೊಬೈಲ್‌ ಸಂಖ್ಯೆಯನ್ನು ಬ್ಲಾಕ್‌ ಲೀಸ್ಟ್‌ಗೆ ಸೇರಿಸಿದ್ದರು. ಕೆಲವು ಬಾರಿ ಫೋನ್‌ ಪೇಯಲ್ಲೂ ಆರೋಪಿ ಸಂದೇಶ ಕಳುಹಿಸಿರುವುದು ಪತ್ತೆ ಆಗಿತ್ತು ಎಂದು ಮೂಲಗಳು ಹೇಳಿವೆ.

‘ನಿನಗಾಗಿ ನನ್ನ ಪತ್ನಿಯನ್ನು ಕೊಲೆ ಮಾಡಿದ್ದೇನೆ’ ಎಂಬುದಾಗಿ ಆರೋಪಿ ಸಂದೇಶ ಕಳುಹಿಸಿರುವುದಕ್ಕೆ ದಾಖಲೆಗಳು ಸಿಕ್ಕಿದ್ದವು. ಎಂಟು ಸಂದೇಶಗಳಲ್ಲಿ ಕೊಲೆ ರಹಸ್ಯ ಅಡಗಿತ್ತು. ಈ ಎಲ್ಲ ಅಂಶಗಳನ್ನೂ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.