ADVERTISEMENT

ಸಾಮಾಜಿಕ–ಶೈಕ್ಷಣಿಕ ಸಮೀಕ್ಷೆಗೆ ವೈದ್ಯರ ಬಳಕೆ

ರೋಗಿಗಳಿಗೆ ಚಿಕಿತ್ಸೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ತೊಡಕು *ಇದೇ ಮೊದಲ ಬಾರಿ ವೈದ್ಯರೂ ಗಣತಿದಾರರು

ವರುಣ ಹೆಗಡೆ
Published 4 ಅಕ್ಟೋಬರ್ 2025, 0:14 IST
Last Updated 4 ಅಕ್ಟೋಬರ್ 2025, 0:14 IST
ಸರ್ಕಾರಿ ಆಯರ್ವೇದ ಆಸ್ಪತ್ರೆಯ ಹೊರನೋಟ 
ಸರ್ಕಾರಿ ಆಯರ್ವೇದ ಆಸ್ಪತ್ರೆಯ ಹೊರನೋಟ    

ಬೆಂಗಳೂರು: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ವೈದ್ಯರನ್ನೂ ಬಳಸಿಕೊಳ್ಳಲಾಗುತ್ತಿದೆ. ಇದರಿಂದಾಗಿ ರೋಗಿಗಳಿಗೆ ಚಿಕಿತ್ಸೆ ಹಾಗೂ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಲಿದೆ.

ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಈ ಸಮೀಕ್ಷೆ ನಡೆಸಲು ರಾಜ್ಯದಾದ್ಯಂತ ಶಿಕ್ಷಕರನ್ನು ಬಳಸಿಕೊಳ್ಳಲಾಗಿದೆ. ಆದರೆ, ಜಿಬಿಎ ವ್ಯಾಪ್ತಿಯಲ್ಲಿ ಸಮೀಕ್ಷಕರ ಕೊರತೆಯಿಂದಾಗಿ, ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯ, ಬಸವೇಶ್ವರನಗರದಲ್ಲಿರುವ ಸರ್ಕಾರಿ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಸಮೀಕ್ಷೆಗೆ ನಿಯೋಜಿಸಲಾಗಿದೆ. ಈ ಸಂಬಂಧ ಈಗಾಗಲೇ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಇದೇ 23ರಂದು ನೇಮಕಾತಿ ಆದೇಶ ಹೊರಡಿಸಿದ್ದಾರೆ. ಇದೇ ಮೊದಲ ಬಾರಿಗೆ ಸರ್ಕಾರದ ಸಮೀಕ್ಷೆಯೊಂದರಲ್ಲಿ ವೈದ್ಯರನ್ನೂ ಬಳಸಿಕೊಳ್ಳಲಾಗುತ್ತಿದೆ.

ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದಡಿ ಜಯಚಾಮರಾಜೇಂದ್ರ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಈ ವೈದ್ಯಕೀಯ ವಿದ್ಯಾಲಯದ ಪ್ರಾಧ್ಯಾಪಕರು ಭೋಧನೆ ಜತೆಗೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನೂ ಒದಗಿಸುತ್ತಿದ್ದಾರೆ. ಈ ಆಸ್ಪತ್ರೆಯಿಂದ ತಲಾ ಹತ್ತು ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಯನ್ನು ಸಮೀಕ್ಷಕರನ್ನಾಗಿ ಬಳಸಿಕೊಳ್ಳಲಾಗುತ್ತಿದೆ. ಅದೇ ರೀತಿ, ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆ ಮತ್ತು ಕಾಲೇಜಿನಿಂದಲೂ ತಲಾ ಹತ್ತು ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 

ADVERTISEMENT

ಸೇವೆ ವ್ಯತ್ಯಯ: ಸಮೀಕ್ಷಕರಾಗಿ ನಿಯೋಜನೆಗೊಂಡ ವೈದ್ಯರು ಹಾಗೂ ಅರೆವೈದ್ಯಕೀಯ ಸಿಬ್ಬಂದಿಯಲ್ಲಿ ಕೆಲವರಿಗೆ ಈಗಾಗಲೇ ತರಬೇತಿಯನ್ನೂ ನೀಡಲಾಗಿದೆ. ಗೊತ್ತುಪಡಿಸಲಾದ ವೈದ್ಯರು ಮತ್ತು ಸಿಬ್ಬಂದಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದರಿಂದ, ಈಗಾಗಲೇ ವೈದ್ಯರು ಹಾಗೂ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಈ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ವ್ಯತ್ಯಯವಾಗುವ ಸಾಧ್ಯತೆಯಿದೆ. ಈ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ರಾಜ್ಯದ ವಿವಿಧ ಭಾಗಗಳ ಜತೆಗೆ, ಹೊರರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಾರೆ. 

‘ನಮ್ಮ ಕರ್ತವ್ಯವು ಅಗತ್ಯ ಸೇವೆಯಡಿ ಬರುತ್ತದೆ. ಆದರೂ ವಿದ್ಯಾರ್ಥಿಗಳು ಹಾಗೂ ರೋಗಿಗಳ ಬಗ್ಗೆ ಯೋಚಿಸದೆ ಇದೇ ಮೊದಲ ಬಾರಿ ಸಮೀಕ್ಷೆಗೆ ನಿಯೋಜಿಸಲಾಗಿದೆ. ಈ ಸಮೀಕ್ಷೆಯಲ್ಲಿ ಸಮೀಕ್ಷಕರನ್ನಾಗಿ ನಿಯೋಜಿಸುವುದರಿಂದ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದುರಾಗಲಿದೆ. ನಿಗದಿತ ಅವಧಿಯಲ್ಲಿ ಸಮೀಕ್ಷೆ ಮುಗಿಸುವುದು ಕಷ್ಟಸಾಧ್ಯ ಎಂಬ ಕಾರಣಕ್ಕೆ ನಮ್ಮನ್ನು ನಿಯೋಜಿಸಲಾಗಿದೆ. ಸಮೀಕ್ಷೆ ಅವಧಿಯಲ್ಲಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವ್ಯತ್ಯಯಾಗುವ ಜತೆಗೆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವೈದ್ಯಕೀಯ ವಿದ್ಯಾರ್ಥಿಗಳ ಕಲಿಕೆಗೂ ತೊಡಕಾಗಲಿದೆ’ ಎಂದು ಸಮೀಕ್ಷಕರಾಗಿ ನೇಮಕಗೊಂಡಿರುವ ವೈದ್ಯರು ‘ಪ್ರಜಾವಾಣಿ’ಗೆ ತಿಳಿಸಿದರು.

ಅಂಕಿ–ಅಂಶಗಳು 300 ಸರ್ಕಾರಿ ಆಯುರ್ವೇದ ಆಸ್ಪತ್ರೆ ಹೊಂದಿರುವ ಹಾಸಿಗೆಗಳು 250 ಸರ್ಕಾರಿ ಹೋಮಿಯೋಪಥಿ ಆಸ್ಪತ್ರೆ ಹೊಂದಿರುವ ಹಾಸಿಗೆಗಳು

ಪ್ರಮುಖ ಸರ್ಕಾರಿ ಆಸ್ಪತ್ರೆ  ಜಯಚಾಮರಾಜೇಂದ್ರ ಸರ್ಕಾರಿ ಆಯುರ್ವೇದ ಆಸ್ಪತ್ರೆಗೆ ಪ್ರತಿನಿತ್ಯ ಸರಾಸರಿ 300ರಿಂದ 400 ಹೊರ ರೋಗಿಗಳು ಭೇಟಿ ನೀಡುತ್ತಿದ್ದಾರೆ. 150ಕ್ಕೂ ಅಧಿಕ ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆಯುರ್ವೇದ ಚಿಕಿತ್ಸಾ ಪದ್ಧತಿಯಲ್ಲಿ ಒಂದಾದ ಪಂಚಕರ್ಮ ಚಿಕಿತ್ಸೆಗೆ ಇಲ್ಲಿ ಬೇಡಿಕೆ ಹೆಚ್ಚಿದ್ದು ರಾಜ್ಯದ ವಿವಿಧ ಭಾಗಗಳಿಂದ ರೋಗಿಗಳು ಬರುತ್ತಾರೆ. ನೆರೆಯ ತಮಿಳುನಾಡು ಆಂಧ್ರಪ್ರದೇಶ ಸೇರಿ ವಿವಿಧ ರಾಜ್ಯದವರು ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಅಮಾನತು ಎಚ್ಚರಿಕೆ 

ಸಮೀಕ್ಷೆಗೆ ಸಂಬಂಧಿಸಿದಂತೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ ರಾವ್ ಅವರು ಪ್ರತ್ಯೇಕ ನೇಮಕಾತಿ ಆದೇಶವನ್ನು ನಿಯೋಜನೆಗೊಂಡವರಿಗೆ ನೀಡಿದ್ದಾರೆ. ‘ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿ ತರಬೇತಿ ಮತ್ತು ಸಮೀಕ್ಷಾ ಕಾರ್ಯದಲ್ಲಿ ಗೈರಾದರೆ ತಮ್ಮನ್ನು ಅಮಾನತು ಮಾಡಿ ಜಿಬಿಎ ವತಿಯಿಂದ ಶಿಸ್ತುಕ್ರಮ ಕೈಗೊಳ್ಳಲಾಗುವುದು. ಭಾರತೀಯ ನ್ಯಾಯ ಸಂಹಿತೆ 233ರ ಅಡಿ ಎಫ್‌ಐಆರ್‌ ದಾಖಲಿಸಲಾಗುತ್ತದೆ’ ಎಂದು ನೇಮಕಾತಿ ಆದೇಶ ಪತ್ರದಲ್ಲಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.