
ಬಂಧನ (ಸಾಂದರ್ಭಿಕ ಚಿತ್ರ)
ಬೆಂಗಳೂರು: ನಾಯಿ ಮುದ್ದು ಮಾಡುವ ನೆಪದಲ್ಲಿ ವಕೀಲೆಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ ಆರೋಪಿಯನ್ನು ಜ್ಞಾನಭಾರತಿ ಠಾಣೆ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬ್ಯಾಡರಹಳ್ಳಿ ನಿವಾಸಿ ವಿಘ್ನೇಶ್ ಅಲಿಯಾಸ್ ವಿಕ್ಕಿ(19) ಬಂಧಿತ ಆರೋಪಿ.
ವಕೀಲೆ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆ ಮಾಡಲಾಯಿತು ಎಂದು ಪೊಲೀಸರು ಹೇಳಿದರು.
ನ.7ರಂದು ದೂರುದಾರೆ ವಕೀಲೆ, ಮನೆ ಬಳಿ ನಾಯಿಯನ್ನು ಕರೆದುಕೊಂಡು ವಾಯುವಿಹಾರಕ್ಕೆ ತೆರಳಿದ್ದರು. ಆಗ ನಾಯಿ ಮುದ್ದಾಡುವ ನೆಪದಲ್ಲಿ ವಕೀಲೆಗೆ ಕಿರುಕುಳ ನೀಡಿದ್ದ ಎಂದು ಪೊಲೀಸರು ಹೇಳಿದರು.
ಕೂಲಿ ಕಾರ್ಮಿಕನಾಗಿರುವ ವಿಘ್ನೇಶ್, ಮದ್ಯದ ಅಮಲಿನಲ್ಲಿ ಉದ್ದೇಶಪೂರ್ವಕವಾಗಿಯೇ ವಕೀಲೆಗೆ ಕಿರುಕುಳ ನೀಡಿದ್ದಾನೆ. ಮೊಬೈಲ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಂತ್ರಸ್ತೆ ವೃತ್ತಿಯಲ್ಲಿ ವಕೀಲೆಯಾಗಿದ್ದು, ಉಲ್ಲಾಳದ ಉಪಕಾರ್ ಲೇಔಟ್‌ನಲ್ಲಿ ನ. 7ರಂದು ರಾತ್ರಿ 10.30ರ ಸುಮಾರಿಗೆ ನಾಯಿ ಜತೆ ವಾಯುವಿಹಾರಕ್ಕೆ ಹೋಗಿದ್ದರು. ಆಗ ಎದುರಾಗಿದ್ದ ಆರೋಪಿ ‘ನಾಯಿಯನ್ನು ಮುಟ್ಟಬಹುದೇ’ ಎಂದು ಕೇಳಿದ್ದ. ಅದಕ್ಕೆ ಸಂತ್ರಸ್ತೆ ಅವಕಾಶ ನೀಡಿದ್ದರು. ಬಳಿಕ ನಾಯಿಯನ್ನು ಆರೋಪಿ ಮುದ್ದಿಸುತ್ತಿದ್ದ. ನಂತರ, ಸಂತ್ರಸ್ತೆ ಮನೆಗೆ ತೆರಳಲು ಮುಂದಾದಾಗ ಏಕಾಏಕಿ ಆಕೆಯ ದೇಹ ಸ್ಪರ್ಶಿಸಿದ್ದ. ಗಾಬರಿಗೊಂಡಿದ್ದ ವಕೀಲೆ ಆರೋಪಿಯನ್ನು ತಳ್ಳಿದ್ದರು. ನಂತರವೂ ಆರೋಪಿ ಕಿರುಕುಳ ನೀಡಲು ಯತ್ನಿಸಿದ್ದಾಗ ಕಪಾಳಕ್ಕೆ ಹೊಡೆದಿದ್ದರು ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.