ಬೆಂಗಳೂರು: ರಾಜ್ಯದಲ್ಲಿ ಡಬಲ್ ಡೆಕ್ಕರ್ ಬಸ್ ಓಡಿಸುವ ಯೋಜನೆಯಿಂದ ಕೆಎಸ್‌ಆರ್‌ಟಿಸಿ ಹಿಂದೆ ಸರಿದಿದೆ. ಬಸ್ ತಯಾರಕರು ಈ ವಿಷಯದಲ್ಲಿ ನಿರಾಸಕ್ತಿ ತೋರಿದ ಕಾರಣ ನಿಗಮವು ಅನಿವಾರ್ಯವಾಗಿ ಈ ಯೋಜನೆಯನ್ನು ಕೈಬಿಡಬೇಕಾಗಿದೆ.
ಕಳೆದ ವರ್ಷ ಕೆಎಸ್‌ಆರ್‌ಟಿಸಿಯು ಪ್ರಾಯೋಗಿಕವಾಗಿ ಓಡಿಸಲು 10 ಬಸ್‌ಗಳನ್ನು ಖರೀದಿಸಲು ಸಿದ್ಧತೆ ನಡೆಸಿತ್ತು. ಈ ಬಸ್‌ಗಳ ಓಡಾಟಕ್ಕಾಗಿ 5 ಮಾರ್ಗಗಳನ್ನು ಗುರುತಿಸಿತ್ತು. 70 ಮಾರ್ಗಗಳನ್ನು ಕೇಂದ್ರ ಸರ್ಕಾರವು ಗುರುತಿಸಿತ್ತು.
ಸಮಸ್ಯೆಯೇನು?: ‘ಬಸ್‌ಗಳನ್ನು ಖರೀದಿಸಲು ನಿಗಮ ಸಿದ್ಧವಿದೆ. ಆದರೆ, ಬೃಹತ್ ಸಂಖ್ಯೆಯಲ್ಲಿ ಖರೀದಿಸುವುದಾದರೆ ಮಾತ್ರ ಉತ್ಪಾದಕರು ಇಂಥ ಬಸ್‌ಗಳನ್ನು ತಯಾರಿಸಲು ಸಿದ್ಧರಿದ್ದಾರೆ. ಇತರ ಸಾರಿಗೆ ನಿಗಮಗಳು (ವಾಯವ್ಯ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳು) ಇಂಥ ಬಸ್‌ಗಳ ಖರೀದಿಗೆ ಮುಂದಾಗುತ್ತವೆಯೇ ಎಂಬುದನ್ನು ನೋಡಬೇಕಿದೆ’ ಎಂದು ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್.ಉಮಾಶಂಕರ್ ಹೇಳಿದರು.
ಕೆಎಸ್‌ಆರ್‌ಟಿಸಿ ಮೂಲಗಳು ಹೇಳುವ ಪ್ರಕಾರ, ‘ಬಸ್ ತಯಾರಕರ ಜತೆ ನಡೆಸಿದ ಸಭೆಯಲ್ಲಿ ಈ ಯೋಜನೆ ಬಗ್ಗೆ ಸಹಮತ ವ್ಯಕ್ತವಾಗಿಲ್ಲ. ಈ ಯೋಜನೆಯ ಸಾಧ್ಯತೆಯ ಬಗೆಗೂ ಅವರಿಗೆ ಮನವರಿಕೆ ಆಗಲಿಲ್ಲ. ಅವರಿಗೆ (ತಯಾರಕರಿಗೆ) ಈ ಯೋಜನೆ ಬಗ್ಗೆ ಆಸಕ್ತಿಯೂ ಇಲ್ಲ. ಏಕೆಂದರೆ ಡಬಲ್ ಡೆಕ್ಕರ್ ಬಸ್ ತಯಾರಿ ಸಂದರ್ಭ ಚಾಸಿಯಿಂದಲೇ ಸಾಕಷ್ಟು ಬದಲಾವಣೆ ಮಾಡಬೇಕಾಗುತ್ತದೆ. ಮಾತ್ರವಲ್ಲ ಅದು ಆತಂಕಕಾರಿಯೂ ಹೌದು. ಮಾತ್ರವಲ್ಲ ಡಬಲ್ ಡೆಕ್ಕರ್ ಬಸ್‌ಗಳಿಗೆ ಸರಿಯಾದ ಮಾರುಕಟ್ಟೆಯೂ ಇಲ್ಲ’ ಎಂದು ಹೇಳಿವೆ.
ಡಿಸೆಂಬರ್ 2017ರಲ್ಲಿ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಡಬಲ್ ಡೆಕ್ಕರ್ ಬಸ್‌ಗಳನ್ನು ಉತ್ತೇಜಿಸುವಂತೆ ಸೂಚನೆ ಹೊರಡಿಸಿತ್ತು. ಅವುಗಳಿಗೆ ಹೆಚ್ಚು ಸಾಮರ್ಥ್ಯ ಮತ್ತು ಕಡಿಮೆ ಸ್ಥಳಾವಕಾಶ ಸಾಕಾಗುತ್ತದೆ ಎಂದು ಸಚಿವಾಲಯ ಅಭಿಪ್ರಾಯ ವ್ಯಕ್ತತಪಡಿಸಿತ್ತು. ಬೆಂಗಳೂರು– ಮೈಸೂರು, ಚೆನ್ನೈ, ಹುಬ್ಬಳ್ಳಿ, ಹೈದರಾಬಾದ್ ಮಾರ್ಗಗಳನ್ನು ಇಂಥ ಬಸ್ ಓಡಾಟಕ್ಕೆ ಗುರುತಿಸಲಾಗಿತ್ತು.
ಈ ಬಸ್‌ಗಳು ಇಲ್ಲಿನ ರಸ್ತೆಗಳಿಗೆ ಹೊಂದುತ್ತವೆಯೇ ಎಂಬುದೂ ಸಂದೇಹಾಸ್ಪದ. ಏಕೆಂದರೆ ವಿದೇಶದ ರಸ್ತೆಗಳ ಗುಣಮಟ್ಟವನ್ನು ಇಲ್ಲಿನೊಂದಿಗೆ ಹೋಲಿಸಲು ಸಾಧ್ಯವಾಗದು ಎಂದೂ ಅಧಿಕಾರಿಗಳು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.