ಬೆಂಗಳೂರು: ವರದಕ್ಷಿಣೆ ವಿಚಾರವಾಗಿ ದಂಪತಿ ನಡುವೆ ಜಗಳವಾಗಿ ಪತ್ನಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಪತಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪತ್ನಿ ನಮಿತಾ ಸಾಹು (43) ಕೊಲೆಯಾದವರು. ಲೋಕೇಶ್ ಕುಮಾರ್ ಗೆಹಲೋತ್ (43) ಬಂಧಿತ ಆರೋಪಿ.
ಏಪ್ರಿಲ್ 24ರಂದು ಠಾಣಾ ವ್ಯಾಪ್ತಿಯ ಮಹಾಗಣಪತಿ ನಗರದ ಮನೆಯಲ್ಲಿ ನಮಿತಾ ಸಾಹು ಅವರನ್ನು ಕೊಲೆ ಮಾಡಲಾಗಿತ್ತು. ಮನೆ ಮಾಲೀಕ ಭೂಪೇಂದರ್ ಅವರು ನೀಡಿದ ದೂರು ಆಧರಿಸಿ, ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ಕಬ್ಬನ್ ಪೇಟೆಯಲ್ಲಿ ಫೊಟೊ ಸ್ಟುಡಿಯೊ ಹೊಂದಿದ್ದ ರಾಜಸ್ಥಾನದ ಲೋಕೇಶ್ ಕುಮಾರ್,
ಐದು ವರ್ಷಗಳ ಹಿಂದೆ ನಮಿತಾ ಸಾಹು ಅವರನ್ನು ವಿವಾಹವಾಗಿ ಮಹಾಗಣಪತಿ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ. ದಂಪತಿಗೆ ಮೂರು ವರ್ಷದ ಹೆಣ್ಣು ಮಗುವಿದೆ. ಇತ್ತೀಚೆಗೆ ದಂಪತಿ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಗಲಾಟೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಏಪ್ರಿಲ್ 24ರಂದು ಮನೆಯಲ್ಲಿದ್ದ ಲೋಕೇಶ್‌ಗೆ, ಪತ್ನಿಯ ಸಹೋದರ ಕರೆ ಮಾಡಿದ್ದರು. ಈ ವೇಳೆ ಫೋನ್ ಸ್ಪೀಕರ್ ಆನ್ ಮಾಡುವಂತೆ ನಮಿತಾ ಒತ್ತಾಯಿಸಿದ್ದರು. ಆನ್ ಮಾಡಲು ನಿರಾಕರಿಸಿದಾಗ ಇಬ್ಬರ ಮಧ್ಯೆ ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಮಾತಿಗೆ ಮಾತು ಬೆಳೆದು ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
‘ಮದುವೆಗೂ ಮುನ್ನ ಪತ್ನಿ ಕೆಲಸ ಮಾಡುತ್ತಿದ್ದಾಗ ಕೂಡಿಟ್ಟ ಹಣ ಕೊಡುವಂತೆ ಆರೋಪಿ ಪೀಡಿಸುತ್ತಿದ್ದ. ಸ್ಟುಡಿಯೊ ಅಭಿವೃದ್ಧಿಪಡಿಸಲು ಮತ್ತು ನಗರದಲ್ಲಿ ನಿವೇಶನ ಖರೀದಿಸಲು ಹಣ ನೀಡುವಂತೆ ಪತ್ನಿಯನ್ನು ಪೀಡಿಸುತ್ತಿದ್ದ. ಆಕೆಯಿಂದ ₹ 60 ಸಾವಿರ ಪಡೆದುಕೊಂಡಿದ್ದ ಮತ್ತು ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಾಯ ಮಾಡುತ್ತಿದ್ದ’ ಎಂದು ನಮಿತಾ ಸಾಹು ಕುಟುಂಬಸ್ಥರು ಆರೋಪಿಸಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ಮಾತನಾಡಿ, ‘ಬಸವೇಶ್ವರನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ದಂಪತಿ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಏಪ್ರಿಲ್ 24ರ ಸಂಜೆ ಕೆಲಸದಿಂದ ಮನೆಗೆ ಬಂದ ಲೋಕೇಶ್, ತನ್ನ ಪತ್ನಿಯ ಅಣ್ಣನೊಂದಿಗೆ ಮಾತನಾಡುತ್ತಿದ್ದ. ಈ ವೇಳೆ ತಾನೂ ಕೇಳಿಸಿಕೊಳ್ಳಬೇಕೆಂದು ಲೌಡ್ ಸ್ಪೀಕರ್ ಹಾಕುವಂತೆ ಪತ್ನಿಯು ಒತ್ತಾಯಿಸಿದ್ದಾರೆ. ಆದರೆ, ಇದಕ್ಕೆ ಆತ ಒಪ್ಪಿಲ್ಲ. ಕೋಪದಲ್ಲಿ ಪತ್ನಿಗೆ ಹೊಡೆದು, ಕತ್ತು ಹಿಸುಕಿ ಕೊಲೆ ಮಾಡಿರುವುದು ಗೊತ್ತಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.