ADVERTISEMENT

ಅತಿ ವೇಗವಾಗಿ ಚಾಲನೆ ಮಾಡಿದರೂ ಡಿಎಲ್ ರದ್ದು: ಎಸಿಪಿ ನಿಕಿತಾ

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 23:00 IST
Last Updated 18 ಜನವರಿ 2026, 23:00 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕೆಂಗೇರಿ: ಚಾಲನಾ ವೃತ್ತಿಯು ತಾಳ್ಮೆ ಹಾಗೂ ಏಕಾಗ್ರತೆ ಬಯಸುವ ಕಾಯಕ. ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ಸಂಭಾವ್ಯ ಅವಘಡಗಳನ್ನು ತಪ್ಪಿಸಬಹುದು ಎಂದು ವಿಜಯನಗರ ಸಂಚಾರ ವಿಭಾಗದ ಎಸಿಪಿ ನಿಕಿತಾ ಹೇಳಿದರು.

ರಸ್ತೆ ಸುರಕ್ಷತಾ ಸಪ್ತಾಹದ ಭಾಗವಾಗಿ ರಾಜ್ಯ ಸಾರಿಗೆ ಇಲಾಖೆ ಸಹಯೋಗದಲ್ಲಿ ಎಲ್‌.ವಿ. ಟ್ರಾವೆಲ್ಸ್‌ ಆಯೋಜಿಸಿದ್ದ ‘ಸಡಕ್‌ ಸುರಕ್ಷಾ ಜೀವನ ರಕ್ಷಾ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

ಸುರಕ್ಷಿತ ಪ್ರಯಾಣವನ್ನು ಖಾತ್ರಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಹಲವಾರು ನಿಯಮಗಳನ್ನು ಜಾರಿಗೆ ತಂದಿವೆ. ಕುಡಿದು ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲು ಮಾಡಿ ಚಾಲನಾ ಪರವಾನಗಿ ರದ್ದು ಮಾಡಲಾಗುತ್ತಿತ್ತು. ಬದಲಾದ ಸಂಚಾರಿ ಕಾಯ್ದೆಗಳನ್ವಯ ಸಿಗ್ನಲ್‌ ಜಂಪಿಂಗ್‌, ಚಾಲನೆಯ ವೇಳೆ ಮೊಬೈಲ್‌ ಬಳಕೆ, ಅತಿ ವೇಗದ ಚಾಲನೆ ಪ್ರಕರಣಗಳಲ್ಲೂ ಚಾಲನಾ ಪರವಾನಗಿ ರದ್ದು ಮಾಡಲು ಅವಕಾಶವಿದೆ ಎಂದು ವಿವರಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರವೀಣ್‌ ಮಾತನಾಡಿ, ‘ದೇಶದಲ್ಲಿ 2023ನೇ ಸಾಲಿನಲ್ಲಿ 4.80 ಲಕ್ಷಕ್ಕೂ ಅಧಿಕ ಅಪಘಾತ ಪ್ರಕರಣಗಳು ದಾಖಲಾಗಿವೆ. 1,72,890 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವಸರ ಹಾಗೂ ಅಜಾಗರೂಕತೆ, ಸಂಚಾರ ನಿಯಮಗಳ ಉಲ್ಲಂಘನೆಯೇ ಅಪಘಾತಗಳಿಗೆ ಮೂಲ ಕಾರಣ’ ಎಂದು ಹೇಳಿದರು.

‘ಅವಘಡ ಸಂಭವಿಸಿದ ಕೂಡಲೇ ಚಿಕಿತ್ಸೆ ದೊರೆತರೆ ಪ್ರಾಣ ಉಳಿಯುವ ಸಾಧ್ಯತೆ ಹೆಚ್ಚು. ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ದಾಖಲಿಸಬೇಕು. ದಾಖಲಿಸಿದ ವ್ಯಕ್ತಿಗೆ ಯಾವುದೇ ಕಾನೂನಿನ ತೊಡಕು ಉಂಟಾಗುವುದಿಲ್ಲ. ಬದಲಿಗೆ ಅಂತಹವರನ್ನು ಗುರುತಿಸಿ ಸರ್ಕಾರದ ವತಿಯಿಂದ ಪುರಸ್ಕರಿಸಲಾಗುತ್ತದೆ’ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿವೇಕಾನಂದ ಮಾಹಿತಿ ನೀಡಿದರು.

ಆರ್‌ಟಿಒ ಮಂಜುನಾಥ್‌, ಕಾಮಾಕ್ಷಿಪಾಳ್ಯ ಸಿಪಿಐ ಯೋಗೀಶ್, ಜ್ಞಾನಭಾರತಿ ಠಾಣೆ ಸಿಪಿಐ ಪ್ರೀತಂ, ಅನ್ನಪೂರ್ಣೇಶ್ವರಿನಗರ ಠಾಣೆ ಸಿಪಿಐ ಲತೇಶ್‌ ಕುಮಾರ್‌, ಎಲ್‌.ವಿ. ಟ್ರಾವೆಲ್ಸ್‌ ನಿರ್ದೇಶಕ ನಾರಾಯಣಸ್ವಾಮಿ, ಸಿಇಒ ಸುದರ್ಶನ್‌, ವಿಷ್ಣು, ಮುತ್ತುರಾಜ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.