
ಬೆಂಗಳೂರು: ‘ಹೆರಾಯನ್, ಮಾರ್ಫಿನ್, ಹೈಡ್ರೊಮಾರ್ಫಿನ್ ಸೇರಿ ವಿವಿಧ ಡ್ರಗ್ಸ್ (ಒಪಿಯಾಡ್) ಸೇವಿಸುವವರು, ಸಹಜ ಜೀವನಕ್ಕೆ ಮರಳುವ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ವಿವಿಧ ಸಮಸ್ಯೆಗಳನ್ನು ದ್ವಿಗುಣ ವೇಗದಲ್ಲಿ ಜಯಿಸಲು ಯೋಗ ಸಹಕಾರಿ’ ಎನ್ನುವುದು ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಸಂಶೋಧಕರು ನಡೆಸಿದ ಅಧ್ಯಯನದಿಂದ ದೃಢಪಟ್ಟಿದೆ.
ಸಂಸ್ಥೆಯ ವ್ಯಸನ ಚಿಕಿತ್ಸಾ ಕೇಂದ್ರದ ಸಂಶೋಧಕರಾದ ಡಾ. ಹೇಮಂತ್ ಭಾರ್ಗವ್, ಭರತ್ ಹೊಳ್ಳ ಮತ್ತು ಸುದ್ದಲಾ ಗೌತಮ್ ಅವರು ಈ ಅಧ್ಯಯನ ನಡೆಸಿದ್ದಾರೆ. ‘ಮಾದಕ ವ್ಯಸನಿಗಳು ದುರಾಭ್ಯಾಸ ತ್ಯಜಿಸಿದ ತಕ್ಷಣ, ಅವರ ಶರೀರದಲ್ಲಿ ಉಂಟಾಗುವ ಬದಲಾವಣೆ ಹಾಗೂ ಕಾಣಿಸಿಕೊಳ್ಳುವ ಅನಾರೋಗ್ಯ ಸಮಸ್ಯೆಗಳ ನಿರ್ವಹಣೆಗೆ ಯೋಗ ಸಹಕಾರಿಯಾಗಲಿದೆಯೇ’ ಎಂಬುದರ ಬಗ್ಗೆ ಅವರು ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನವು ‘ಜಮಾ ಸೈಕಿಯಾಟ್ರಿ’ ಜರ್ನಲ್‌ನಲ್ಲಿ ಪ್ರಕಟವಾಗಿದೆ.
‘ಸಹಜ ಜೀವನಕ್ಕೆ ಮರಳಲು ಚಿಕಿತ್ಸೆ ಪಡೆಯುತ್ತಿರುವವರು, ಯೋಗವನ್ನು ಅಳವಡಿಸಿಕೊಂಡಲ್ಲಿ ಅತ್ಯುತ್ತಮ ಫಲಿತಾಂಶ ದೊರೆಯಲಿದೆ. ಚೇತರಿಕೆ ಅವಧಿ ಅರ್ಧದಷ್ಟು ಕಡಿತವಾಗಲಿದೆ’ ಎಂಬ ಫಲಿತಾಂಶ ಈ ಅಧ್ಯಯನದಿಂದ ದೊರೆತಿದೆ.
ಡ್ರಗ್ಸ್ ವ್ಯಸನಿಗಳಲ್ಲಿ 59 ಮಂದಿಯನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಔಷಧದ ಜತೆಗೆ ಯೋಗಾಭ್ಯಾಸ ಮಾಡಿದವರು ಐದು ದಿನಗಳಲ್ಲಿ ಸಹಜ ಜೀವನಕ್ಕೆ ಮರಳಿದ್ದಾರೆ. ಔಷಧವೊಂದನ್ನೇ ಪಡೆದವರ ಈ ಅವಧಿ ಒಂಬತ್ತು ದಿನಗಳಾಗಿದ್ದವು. ಯೋಗಾಭ್ಯಾಸದಿಂದ ಉತ್ತಮ ನಿದ್ದೆಯ ಜತೆಗೆ ಆತಂಕ ಹಾಗೂ ನೋವು ತಕ್ಕಮಟ್ಟಿಗೆ ಕಡಿಮೆಯಾಗಲಿದೆ ಎಂದು ಅಧ್ಯಯನ ವರದಿಯಲ್ಲಿ ತಿಳಿಸಲಾಗಿದೆ.
‘ಯೋಗವು ಒತ್ತಡ ನಿವಾರಣೆ ಹಾಗೂ ದೇಹದ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. ಅಧ್ಯಯನಕ್ಕೆ ಒಳಪಟ್ಟವರಿಗೆ ಪ್ರತಿನಿತ್ಯ 45 ನಿಮಿಷಗಳ ಯೋಗಾಭ್ಯಾಸ ಮಾಡಿಸಲಾಗುತ್ತಿತ್ತು. ಸಹಜ ಭಂಗಿಗಳು, ಉಸಿರಾಟದ ವ್ಯಾಯಾಮಗಳನ್ನು ಒಳಗೊಂಡಿದ್ದವು’ ಎಂದು ಡಾ. ಹೇಮಂತ್ ಭಾರ್ಗವ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.