ಬೆಂಗಳೂರು: ಮಾದಕ ವಸ್ತುಗಳ ಮಾರಾಟ ಹಾಗೂ ಸೇವನೆ ಪ್ರಕರಣಗಳ ಆರೋಪಿಗಳ ಮನೆಗಳಿಗೆ ಬೆಂಗಳೂರು ಉತ್ತರ ವಿಭಾಗದ ಪೊಲೀಸರು ತಡರಾತ್ರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮಗೌಡ ಅವರ ನೇತೃತ್ವದಲ್ಲಿ ಮೂರು ಉಪ ವಿಭಾಗಗಳ ಎಸಿಪಿಗಳು, 13 ಠಾಣೆಗಳ ಪೊಲೀಸ್ ಇನ್‌ಸ್ಪೆಕ್ಟರ್, ಪಿಎಸ್ಐಗಳು ಮತ್ತು ಸಿಬ್ಬಂದಿ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 106 ಜನರನ್ನು ತಪಾಸಣೆಗೆ ಒಳಪಡಿಸಲಾಯಿತು.
ಇದೇ ವೇಳೆ ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಎರಡು ಪ್ರಕರಣ ದಾಖಲಿಸಿ, ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರಿಂದ ಸುಮಾರು 1 ಕೆ.ಜಿ 650 ಗ್ರಾಂ ಗಾಂಜಾ ಮತ್ತು 150 ಗ್ರಾಂ ಹ್ಯಾಶಿಶ್ ಆಯಿಲ್ ವಶಪಡಿಸಿಕೊಳ್ಳಲಾಗಿದೆ. 11 ಆರೋಪಿಗಳ ವಿರುದ್ಧ ಮಾದಕ ಪದಾರ್ಥ ಸೇವನೆಯ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಮಾದಕ ಪದಾರ್ಥ ಮಾರಾಟ, ಸೇವನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿಗಳು ಹಾಗೂ ಅನುಮಾನಾಸ್ಪದ ವ್ಯಕ್ತಿಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಅವರ ಪ್ರಸ್ತುತ ಕೆಲಸ, ಈ ಹಿಂದೆ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗುತ್ತಿರುವ ಬಗ್ಗೆ ಹಾಗೂ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗದೇ ವಾರಂಟ್, ಘೋಷಿತ ಆರೋಪಿಗಳೆಂದು ಪ್ರಕಟಣೆ ಹೊರಡಿಸಿರುವ ಬಗ್ಗೆ ಪರಿಶೀಲನೆ ಮಾಡಲಾಯಿತು.
ಅಲ್ಲದೇ ನ್ಯಾಯಾಲಯದ ವಿಚಾರಣೆ ವೇಳೆ ತಪ್ಪದೇ ಹಾಜರಾಗುವಂತೆ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಾದಕ ವಸ್ತು ಜಪ್ತಿ:
ರಾಜಾನುಕುಂಟೆ ಪೊಲೀಸರು ಜುಲೈ 7 ರಂದು ದಾಳಿ ಮಾಡಿ, ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸಿ, ಅವರಿಂದ ₹4.5 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.