ADVERTISEMENT

ಶಸ್ತ್ರಚಿಕಿತ್ಸೆ ನೆಪ; ಡ್ರಗ್ಸ್ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2021, 22:10 IST
Last Updated 15 ಡಿಸೆಂಬರ್ 2021, 22:10 IST
   

ಬೆಂಗಳೂರು: ಶಸ್ತ್ರಚಿಕಿತ್ಸೆ ನೆಪದಲ್ಲಿ ನಗರಕ್ಕೆ ಬಂದು ಡ್ರಗ್ಸ್ ಮಾರಿ ಐಷಾರಾಮಿ ಜೀವನ ನಡೆಸುತ್ತಿದ್ದ ವಿದೇಶಿಗರು ಸೇರಿ 6 ಆರೋಪಿಗಳನ್ನು ದಕ್ಷಿಣ ವಿಭಾಗ ಪೊಲೀಸರು ಬಂಧಿಸಿದ್ದಾರೆ.

‘ಕುಮಾರಸ್ವಾಮಿ ಲೇಔಟ್, ಬನಶಂಕರಿ ಹಾಗೂ ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

‘ಬನಶಂಕರಿ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಪ್ರಿನ್ಸ್ ಆಬಿ ಚಿಡೋಜಿ ಹಾಗೂ ಪೋಪಾನ್‌ನನ್ನು ಬಂಧಿಸಲಾಗಿದೆ. ನೈಜೀರಿಯಾ ಪ್ರಜೆಗಳಾದ ಇವರಿಬ್ಬರು, ಗಂಟಲು ಶಸ್ತ್ರಚಿಕಿತ್ಸೆ ಮಾಡಿಸುವ ನೆಪದಲ್ಲಿ ವೀಸಾ ಪಡೆದು ನಗರಕ್ಕೆ ಬಂದಿದ್ದರು. ಪರಿಚಯಸ್ಥರಿಂದ ಡ್ರಗ್ಸ್ ಖರೀದಿಸುತ್ತಿದ್ದ ಆರೋಪಿಗಳು, ನಗರದ ಹಲವೆಡೆ ಮಾರುತ್ತಿದ್ದರು. ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು. ಅವರಿಂದ ₹ 1.80 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

'ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಸುತ್ತಾಡಿ ಡ್ರಗ್ಸ್ ಮಾರುತ್ತಿದ್ದ ನೈಜೀರಿಯಾದ ಡಾಲೊ ಬರ್ಥೆಲಿಮಿ ಎಂಬಾತನನ್ನು ಬಂಧಿಸಲಾಗಿದೆ. ಕೆಲ ತಿಂಗಳ ಹಿಂದಷ್ಟೇ ನಗರಕ್ಕೆ ಬಂದಿದ್ದ ಆತ, ಎಚ್‌ಆರ್‌ಬಿಆರ್ ಬಡಾವಣೆಯಲ್ಲಿ ನೆಲೆಸಿದ್ದ. ಬಾಡಿಗೆ ಮನೆಯಲ್ಲೇ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡು ಮಾರುತ್ತಿದ್ದರು. ಆತನನ್ನು ಬಂಧಿಸಿ ₹ 1.30 ಲಕ್ಷ ಎಂಡಿಎಂಎ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ’ ಎಂದೂ ಹೇಳಿದರು.

ಮಣಿಪುರದ ಮೂವರ ಸೆರೆ: ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಡ್ರಗ್ಸ್ ಮಾರುತ್ತಿದ್ದ ಮಣಿಪುರದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

‘ಮೊಯಿನ್ ಅಲಾಂ (22), ಮೊಹಮ್ಮದ್ ಸಾಹಿದೂರ್ ರಹಮಾನ್ ಹಾಗೂ ವಾಕೀಮ್ ಯೂನಸ್ (23) ಬಂಧಿತರು. ಅವರಿಂದ ₹ 20 ಲಕ್ಷ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.