
ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆ ಕುರಿತು ಜಾಗೃತಿಯ ಜೊತೆಯಲ್ಲೇ ಪೊಲೀಸರು ‘ದಂಡದ ಅಸ್ತ್ರ’ ಬಳಸಿದರೂ ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
2024ರಲ್ಲಿ 23,620 ಪ್ರಕರಣಗಳು ದಾಖಲಾಗಿದ್ದವು. 2025ರಲ್ಲಿ 38,919 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 17 ಸಾವಿರಕ್ಕೂ ಅಧಿಕ ಚಾಲನಾ ಪರವಾನಗಿಗಳನ್ನು (ಡಿ.ಎಲ್) ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ.
ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರು ಹಾಗೂ ಗಂಭೀರ ಸ್ವರೂಪದ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸಂಚಾರ ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ದಂಡ ವಿಧಿಸುತ್ತಿದ್ದಾರೆ.
‘ಡ್ರಂಕ್ ಆ್ಯಂಡ್ ಡ್ರೈವ್’ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ₹10 ಸಾವಿರ ದಂಡ ವಿಧಿಸಲಾಗುತ್ತಿದೆ. ದಂಡದ ಹೊರತಾಗಿಯೂ ಚಾಲನಾ ಪರವಾನಗಿ ಅಮಾನತುಗೊಳಿಸುವಂತೆ ಸಂಚಾರ ಪೊಲೀಸರು ಸಂಬಂಧಪಟ್ಟ ಆರ್‌ಟಿಒ ಕಚೇರಿಗೆ ಶಿಫಾರಸು ಮಾಡಿದ್ದಾರೆ. ಒಟ್ಟು 19,500 ಸಾವಿರ ಚಾಲನಾ ಪರವಾನಗಿ (ಡಿಎಲ್) ಅಮಾನತು ಮಾಡುವಂತೆ ಶಿಫಾರಸು ಮಾಡಲಾಗಿದ್ದು, ಈ ಪೈಕಿ 17 ಸಾವಿರ ಚಾಲನಾ ಪರವಾನಗಿ ಅಮಾನತುಗೊಂಡಿವೆ ಎಂದು ಮೂಲಗಳು ಹೇಳಿವೆ.
ನಗರದ 50 ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಕಾರ್ಯಾಚರಣೆ ಕೈಗೊಂಡಿದ್ದು, 13 ಲಕ್ಷಕ್ಕೂ ಅಧಿಕ ವಾಹನಗಳನ್ನು ತಪಾಸಣೆ ಮಾಡಲಾಗಿದೆ. ಈ ಪೈಕಿ ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕರು, ಸವಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರರು, ಆಟೊ, ಕಾರು ಚಾಲಕರು, ಶಾಲಾ ವಾಹನ ಚಾಲಕರು, ಖಾಸಗಿ ಬಸ್ ಚಾಲಕರು, ವಾಟರ್ ಟ್ಯಾಂಕರ್ ಚಾಲಕರು ತಪಾಸಣೆ ವೇಳೆ ಮದ್ಯ ಸೇವಿಸಿರುವುದು ದೃಢಪಟ್ಟಿತ್ತು ಎಂದು ಪೊಲೀಸರು ತಿಳಿಸಿದರು.
ಪಾನಮತ್ತ ಚಾಲಕರಿಗೆ ₹10 ಸಾವಿರ ದಂಡ ವಿಧಿಸಲಾಗುತ್ತದೆ. ಮೊದಲ ಬಾರಿಗೆ ಸಿಕ್ಕಿಬಿದ್ದಾಗ ಮೂರು ತಿಂಗಳವರೆಗೆ ಡಿ.ಎಲ್ ಅಮಾನತು ಮಾಡಲಾಗುತ್ತದೆ. ಎರಡನೇ ಬಾರಿಗೆ ಆರು ತಿಂಗಳವರೆಗೆ ಅಮಾನತು ಮಾಡಲಾಗುತ್ತದೆ. ಇದೇ ವೇಳೆ ಪೊಲೀಸರು ವಾಹನವನ್ನು ವಶಕ್ಕೆ ಪಡೆಯುತ್ತಾರೆ.
‘ಪಾನಮತ್ತರಾಗಿ ವಾಹನ ಚಲಾಯಿಸಿ, ಪೊಲೀಸರಿಗೆ ಸಿಕ್ಕಿಬಿದ್ದಿರುವ ಹಲವರ ಬಳಿ ಚಾಲನಾ ಪರವಾನಗಿಯೇ ಇರುವುದಿಲ್ಲ. ಹಲವು ಖಾಸಗಿ ಶಾಲಾ ವಾಹನ ಚಾಲಕರು ಕೆಲಸದ ಅವಧಿಯಲ್ಲಿ ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಬಗ್ಗೆ ಪೊಲೀಸರಿಗೆ ಹಲವು ದೂರು ಬಂದಿದ್ದವು. ಹಾಗಾಗಿ ಕಾರ್ಯಾಚರಣೆ ನಡೆಸಿ, ನಗರದ ವಿವಿಧೆಡೆ ಶಾಲಾ ವಾಹನಗಳನ್ನು ತಡೆದು ಚಾಲಕರನ್ನು ತಪಾಸಣೆಗೆ ಒಳಪಡಿಸಿದಾಗ, ಹಲವರು ಮದ್ಯ ಸೇವಿಸಿದ್ದರು’ ಎಂದು ಸಂಚಾರ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.
‘ಮೂರು ಸಾವಿರಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆಗೆ ಒಳಪಡಿಸಿದಾಗ, 23 ಚಾಲಕರು ಪಾನಮತ್ತರಾಗಿ ಚಾಲನೆ ಮಾಡುತ್ತಿದ್ದುದು ಗೊತ್ತಾಗಿದೆ. ಆ ಚಾಲಕರ ವಿರುದ್ಧ ಪಾನಮತ್ತ ಚಾಲನೆ ಮತ್ತು ಅಜಾಗರೂಕ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ತಪಾಸಣೆ ವೇಳೆ ಕಾರ್ಯಕ್ಷಮತೆ ಪ್ರಮಾಣ ಪತ್ರ (ಎಫ್.ಸಿ) ಹೊಂದಿರದ ವಾಹನಗಳನ್ನು ಜಪ್ತಿ ಮಾಡಿ, ಅವುಗಳನ್ನು ಆರ್‌ಟಿಒ ಕಚೇರಿಗಳ ವಶಕ್ಕೆ ಒಪ್ಪಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಶಾಲಾ ವಾಹನ ಚಾಲಕರು ಪಾನಮತ್ತರಾಗಿ ವಾಹನ ಚಾಲನೆ ಮಾಡುತ್ತಿದ್ದ ಕುರಿತು ಸಂಬಂಧಪಟ್ಟ ಶಾಲಾ ಮಂಡಳಿಯಿಂದ ಮಾಹಿತಿ ಕೇಳಲಾಗಿದೆ. ಅವರು ಏನು ಮಾಹಿತಿ ನೀಡುತ್ತಾರೆ ಎಂಬುದನ್ನು ಆಧರಿಸಿ, ಸಾರಿಗೆ ಇಲಾಖೆಗೆ ವರದಿ ನೀಡಲಾಗುವುದು. ಕೆಲ ಶಾಲೆಗಳು ಮಕ್ಕಳನ್ನು ಕರೆದೊಯ್ಯಲು ಖಾಸಗಿ ವಾಹನಗಳನ್ನು ಬಳಸುತ್ತಿರುವುದು ಪತ್ತೆಯಾಗಿದೆ. ಈ ಬಗ್ಗೆಯೂ ಸಾರಿಗೆ ಇಲಾಖೆಗೆ ಮಾಹಿತಿ ನೀಡಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.