
ಬೆಂಗಳೂರು: ‘ಅತಿಯಾದ ಮೊಬೈಲ್- ಕಂಪ್ಯೂಟರ್ ವೀಕ್ಷಣೆ, ವಾಯುಮಾಲಿನ್ಯ ಸೇರಿ ವಿವಿಧ ಕಾರಣಗಳಿಂದ ಒಣಕಣ್ಣು ಸಮಸ್ಯೆ ಹೆಚ್ಚುತ್ತಿದೆ. ಇದರಿಂದ ದೃಷ್ಟಿನಷ್ಟವಾಗುವ ಸಾಧ್ಯತೆಗಳಿವೆ’ ಎಂದು ನಾರಾಯಣ ನೇತ್ರಾಲಯದ ನಿರ್ದೇಶಕ ಡಾ.ರೋಹಿತ್ ಶೆಟ್ಟಿ ಹೇಳಿದರು.
ನಾರಾಯಣ ನೇತ್ರಾಲಯ ಐ ಫೌಂಡೇಶನ್ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿದ್ದ ‘ಡ್ರೈ ಐ ಆ್ಯಂಡ್ ಓಕ್ಯುಲರ್ ಸರ್ಫೇಸ್ ಸೊಸೈಟಿ’ಯ (ಡಿಇಒಎಸ್‌ಎಸ್) ಮೂರನೇ ಕಾಂಗ್ರೆಸ್ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಚಿಕಿತ್ಸೆ ನಿರ್ಲಕ್ಷಿಸಿದರೆ ದೈಹಿಕ ಕಿರಿಕಿರಿ ಉಂಟಾಗುತ್ತದೆ. ಅಷ್ಟೇ ಅಲ್ಲದೇ, ರೋಗಿಗಳು ಮಾನಸಿಕವಾಗಿಯೂ ದುರ್ಬಲರಾಗುವರು. ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಗುಣಮುಖರಾಗಬಹುದು’ ಎಂದು ತಿಳಿಸಿದರು.
ಡಿಇಒಎಸ್‌ಎಸ್ ಕಾಂಗ್ರೆಸ್ ಅಧ್ಯಕ್ಷ ಸಿಹೆಮ್ ಲಾಜ್ರೆಗ್ ಮಾತನಾಡಿ, ‘ಥರ್ಮಲ್ ತಂತ್ರಜ್ಞಾನಗಳು, ಕೃತಕ ಬುದ್ಧಿಮತ್ತೆಯಂತಹ ಆಧುನಿಕ ರೋಗನಿರ್ಣಯ ವಿಧಾನಗಳ ಮೇಲೆ ಬೆಳಕು ಚೆಲ್ಲುವ ನಿಟ್ಟಿನಲ್ಲಿ ಸಮಾವೇಶಗಳು ಜರುಗಬೇಕು’ ಎಂದು ಅಭಿಪ್ರಾಯಪಟ್ಟರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ. ಭಗವಾನ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.