ಬೆಂಗಳೂರು: ನಗರದ ರಿಚ್ ಕಾರ್ಟನ್ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದ ದುಬೈನ ರಾಯನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನ ವ್ಯವಸ್ಥಾಪಕ ಲಾರೆನ್ಸ್ ಮೆಲ್ವಿನ್ ಅವರನ್ನು ಅಪಹರಿಸಿ ₹50 ಲಕ್ಷಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಅಪಹರಣಕಾರರನ್ನು ಅಶೋಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರದ ದಿನ್ನೂರು ಮುಖ್ಯರಸ್ತೆಯ ಮೊಹಮ್ಮದ್ ಆಸೀಫ್ ರಿಸಾಲ್ದಾರ್ (42), ಕೌಸರ್ ನಗರದ ಮೊಹಮ್ಮದ್ ಸುಹೇಲ್ ಶೇಖ್ (25), ಡಿ.ಜೆ. ಹಳ್ಳಿ ಶಾಂಪುರ ಮುಖ್ಯರಸ್ತೆಯ ನಾಲ್ಕನೇ ಕ್ರಾಸ್‌ನ ನಿವಾಸಿ ಸಲ್ಮಾನ್ ಪಾಷಾ (22), ಕೆ.ಜಿ. ಹಳ್ಳಿ ಗಾಂಧಿನಗರ ಎರಡನೇ ಮುಖ್ಯರಸ್ತೆಯ ನಿವಾಸಿ ಮೊಹಮ್ಮದ್ ನವಾಜ್ (27) ಬಂಧಿತರು.
ತಲೆಮರೆಸಿಕೊಂಡಿರುವ ಮಹಿಮಾ, ಶಾಕೀಬ್, ಸುರೇಶ್, ಅಲ್ತಾಫ್ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಲಾರೆನ್ಸ್ ಮೆಲ್ವಿನ್ ಅವರನ್ನು ಅಪಹರಿಸಿ ಅಪಾರ್ಟ್‌ಮೆಂಟ್‌ವೊಂದರ ಫ್ಲ್ಯಾಟ್‌ನಲ್ಲಿ ಕೂಡಿಹಾಕಿ ಜೀವಬೆದರಿಕೆ ಹಾಕಿದ್ದರು. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪೊಲೀಸರು ಹೇಳಿದರು.
‘ಲಾರೆನ್ಸ್ ಮೆಲ್ವಿನ್ ಅವರ ತಾಯಿ ಅಶೋಕನಗರ ಠಾಣೆಗೆ ತನ್ನ ಪುತ್ರ ನಾಪತ್ತೆ ಆಗಿದ್ದಾನೆ ಎಂದು ದೂರು ನೀಡಿದ್ದರು. ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದಾಗ ಲಾರೆನ್ಸ್ ಮೆಲ್ವಿನ್ ಅವರು ಅಪಹರಣಕ್ಕೆ ಒಳಗಾಗಿರುವುದು ಗೊತ್ತಾಗಿತ್ತು. ಅವರ ಗೆಳತಿ ಮಹಿಮಾಳೇ ಅಪಹರಣದ ಸೂತ್ರಧಾರಿ ಎಂದು ಕಂಡುಬಂದಿತ್ತು. ಆಕೆ ಸೇರಿದಂತೆ ನಾಲ್ವರು ನಾಪತ್ತೆ ಆಗಿದ್ದು, ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ವಿಜಯಪುರದ ಶಾಕೀಬ್‌ಗೆ ಮಹಿಮಾ ₹10 ಲಕ್ಷಕ್ಕೆ ಸುಪಾರಿ ನೀಡಿ, ಲಾರೆನ್ಸ್ ಮೆಲ್ವಿನ್ ಬಳಿ ಹಣ ಸುಲಿಗೆ ಮಾಡುವಂತೆ ಸೂಚಿಸಿದ್ದಳು. ಶಾಕೀಬ್ ಉಳಿದ ಆರೋಪಿಗಳಿಗೆ ಸುಪಾರಿ ನೀಡಿ ಸುಲಿಗೆ ಮಾಡುವಂತೆ ಸೂಚಿಸಿದ್ದ’ ಎಂದು ಪೊಲೀಸರು ಹೇಳಿದರು.
ಏನಿದು ಪ್ರಕರಣ?
ದುಬೈನಲ್ಲಿ ರಾಯನ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನಲ್ಲಿ ಲಾರೆನ್ಸ್ ಮೆಲ್ವಿನ್ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆ ನಗರಕ್ಕೆ ಬಂದು ಕುಟುಂಬದ ಜತೆಗೆ ಉಳಿದುಕೊಂಡಿದ್ದರು. ನಂತರ, ಕೇರಳದ ಕೊಚ್ಚಿನ್‌ನಲ್ಲಿರುವ ಸಂಬಂಧಿಕರ ಮನೆಗೆ ತೆರಳಿದ್ದರು. ಅಲ್ಲಿಂದ ಬೆಂಗಳೂರಿಗೆ ವಾಪಸ್ ಬಂದು ರಿಚ್ ಕಾರ್ಟನ್ ಹೋಟೆಲ್‌ನಲ್ಲಿ ವಾಸ್ತವ್ಯ ಮಾಡಿದ್ದರು. ಮರುದಿನ ಪೋಕರ್ ಆಡಲು ಇಂದಿರಾನಗರಕ್ಕೆ ಹೋಗಿದ್ದರು. ವಾಪಸ್ ಬಂದು ಹೋಟೆಲ್‌ನಲ್ಲಿ ಇರುವಾಗ ಗೆಳತಿ ಮಹಿಮಾ ವಾಟ್ಸ್‌ಆ್ಯಪ್‌ನಲ್ಲಿ ಕರೆ ಮಾಡಿ ಸಿಗುವಂತೆ ಕೇಳಿಕೊಂಡಿದ್ದಳು. ಕ್ಯಾಬ್ ಬುಕ್ ಮಾಡಿದ್ದು, ಅದರಲ್ಲಿ ಬರುವಂತೆ ಹೇಳಿದ್ದಳು. ಆಕೆಯ ಮಾತು ನಂಬಿದ್ದ ದೂರುದಾರ, ಆಕೆಯಿದ್ದ ಸ್ಥಳಕ್ಕೆ ಹೋಗಲು ಮುಂದಾಗಿದ್ದರು. ಹೋಟೆಲ್ ಬಳಿಗೆ ಬಂದ ಕ್ಯಾಬ್ ಹತ್ತಿ ಹೋಗುತ್ತಿದ್ದಾಗ ದಾರಿ ಮಧ್ಯೆ, ಕ್ಯಾಬ್ ನಿಲ್ಲಿಸಿ ಅದರಲ್ಲಿದ್ದವರು ಹಲ್ಲೆ ನಡೆಸಿ, ಜೇಬಿನಲ್ಲಿದ್ದ ₹1 ಲಕ್ಷ ಹಾಗೂ ಎರಡು ಐ–ಫೋನ್ ಕಸಿದುಕೊಂಡಿದ್ದರು ಎಂದು ಪೊಲೀಸರು ಹೇಳಿದರು.
ನೆರವಿಗೆ ಬಂದಿದ್ದ ಅಪಾರ್ಟ್‌ಮೆಂಟ್ ನಿವಾಸಿ
ಕೂಗಾಟ ಗಮನಿಸಿ ಪಕ್ಕದ ಫ್ಲ್ಯಾಟ್‌ನ ಮಹಿಳೆಯೊಬ್ಬರು ಕಿಟಕಿಯ ಮೂಲಕ ನೋಡಿದ್ದರು. ಆಗ ದೂರುದಾರರು ಸಹೋದರಿಗೆ ಮಾಹಿತಿ ನೀಡುವಂತೆ ಲಾರೆನ್ಸ್ ಅವರು ಕೋರಿದ್ದರು. ಈ ವಿಚಾರ ತಿಳಿದು ಯಶವಂತಪುರದ ಬಳಿಗೆ ಲಾರೆನ್ಸ್ ಅವರನ್ನು ಅಪಹರಣಕಾರರು ಬಿಟ್ಟು ಹೋಗಿದ್ದರು. ಬಿಟ್ಟು ಹೋಗುವ ಮೊದಲು ₹ 1 ಸಾವಿರ ಹಣ ಕೀ ಪ್ಯಾಡ್ ಮೊಬೈಲ್ ಹಾಗೂ ಸಿಮ್ ನೀಡಿ ಹೋಗಿದ್ದರು ಎಂದು ಪೊಲೀಸರು ಹೇಳಿದರು.
ಕಣ್ಣಿಗೆ ಬಟ್ಟೆ ಕಟ್ಟಿ ಕರೆದೊಯ್ದು ಹಲ್ಲೆ
‘ಲಾರೆನ್ಸ್ ಅವರ ಕಣ್ಣಿಗೆ ಬಟ್ಟೆಕಟ್ಟಿ ಸರ್ವೀಸ್ ಅಪಾರ್ಟ್‌ಮೆಂಟ್‌ಗೆ ಕರೆದೊಯ್ದು ₹50 ಲಕ್ಷ ನೀಡಿದರೆ ಬಿಟ್ಟು ಕಳುಹಿಸುವುದಾಗಿ ಆರೋಪಿಗಳು ಹೇಳಿದ್ದರು. ನನ್ನ ಬಳಿ ₹20 ಲಕ್ಷ ಮಾತ್ರವಿದೆ. ಅದನ್ನು ಕೊಡುತ್ತೇನೆ ಎಂದು ಹೇಳಿದ್ದರು. ಅದಕ್ಕೆ ಆರೋಪಿಗಳು ಒಪ್ಪಿರಲಿಲ್ಲ. ಫ್ಲ್ಯಾಟ್‌ನಲ್ಲಿ ಕೂಡಿ ಹಾಕಿದ್ದರು. ಬಳಿಕ ₹2.50 ಕೋಟಿ ನೀಡುವಂತೆ ಬೆದರಿಕೆ ಹಾಕಿದ್ದರು. ಅಷ್ಟು ಹಣ ನೀಡದಿದ್ದರೆ ₹ 5 ಕೋಟಿ ವಸೂಲಿ ಮಾಡುವಂತೆ ಸೂಚಿಸಿರುವವರ ಬಳಿಗೆ ಕರೆದೊಯ್ಯುವುದಾಗಿ ಅಪಹರಣಕಾರರು ಹೇಳಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.