ADVERTISEMENT

Eduverse | ಕಲಿತ ಶಿಕ್ಷಣ ಉಪಯೋಗವೇ ‘ಜೀವನದ ವಿದ್ಯೆ’: ಡಿ.ಕೆ.ಎಸ್ ಹೆಗ್ಡೆ

‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 0:19 IST
Last Updated 7 ಏಪ್ರಿಲ್ 2024, 0:19 IST
ಬೆಂಗಳೂರಿನಲ್ಲಿ ‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ’ ಆಯೋಜಿಸಿರುವ 14ನೇ ‘ಎಡ್ಯುವರ್ಸ್‌’ ಅನ್ನು ನಟ ವಿಜಯ ರಾಘವೇಂದ್ರ ಶನಿವಾರ ಉದ್ಘಾಟಿಸಿದರು. ರಾಜೀವ್ ವೇಲೂರ್, ಕಿರಣ್‌ ಸುಂದರರಾಜನ್‌, ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ, ರಕ್ಷಿತ್‌ ಶೆಟ್ಟಿ, ಕೆ.ವಿಜಯಕಲಾ ಸುಧಾಕರ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಬೆಂಗಳೂರಿನಲ್ಲಿ ‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ’ ಆಯೋಜಿಸಿರುವ 14ನೇ ‘ಎಡ್ಯುವರ್ಸ್‌’ ಅನ್ನು ನಟ ವಿಜಯ ರಾಘವೇಂದ್ರ ಶನಿವಾರ ಉದ್ಘಾಟಿಸಿದರು. ರಾಜೀವ್ ವೇಲೂರ್, ಕಿರಣ್‌ ಸುಂದರರಾಜನ್‌, ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ, ರಕ್ಷಿತ್‌ ಶೆಟ್ಟಿ, ಕೆ.ವಿಜಯಕಲಾ ಸುಧಾಕರ್ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಲಿತ ಶಿಕ್ಷಣವನ್ನು ಉಪಯೋಗಿಸುವ ಕಲೆಯೇ ‘ಜೀವನದ ವಿದ್ಯೆ’ ಎಂದು ಅಪೊಲೊ ನ್ಯಾಷನಲ್‌ ಸ್ಕೂಲ್‌ನ ಉಪಾಧ್ಯಕ್ಷೆ ಐಶ್ವರ್ಯಾ ಡಿ.ಕೆ.ಎಸ್ ಹೆಗ್ಡೆ ಹೇಳಿದರು.

ಇಲ್ಲಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಶನಿವಾರ ನಡೆದ, ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’  ಆಯೋಜಿಸಿರುವ ಕರ್ನಾಟಕದ ಅತಿ ದೊಡ್ಡ ಶೈಕ್ಷಣಿಕ ಮೇಳ ‘ಎಡ್ಯುವರ್ಸ್‌’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಬದಲಾಗುತ್ತಿರುವ ಜಗತ್ತಿಗೆ ಅನುಗುಣವಾಗಿ ಶಿಕ್ಷಣದ ಸ್ವರೂಪವೂ ಬದಲಾಗಿದೆ. ಜೀವನ ನಿಭಾಯಿಸುವುದು ಹೇಗೆ ಎನ್ನುವುದನ್ನು ಶಿಕ್ಷಣದ ಮೂಲಕ ಕಲಿಯುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಖುಷಿ ಕೊಡುವ, ಮನಸ್ಸಿಗೆ ಮುದ ನೀಡುವ ವಿಷಯಗಳನ್ನು ಓದಲು ಪೋಷಕರು ಪ್ರೇರೇಪಣೆ ನೀಡಬೇಕು. ಮಕ್ಕಳು ಸೂಕ್ತ ವಿಷಯಗಳ ಆಯ್ಕೆಯಲ್ಲಿ ವಿಫಲರಾದರೆ ಅದಕ್ಕೆ ಪೋಷಕರೇ ಹೊಣೆ’ ಎಂದರು.

ADVERTISEMENT

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿವೃತ್ತ ಪಿಆರ್‌ಒ ಎ.ಎಸ್‌.ರವಿ ಮಾತನಾಡಿ, ‘ಒಳ್ಳೆಯ ಕಾಲೇಜು ಆಯ್ಕೆ ಮಾಡಿಕೊಳ್ಳುವುದು ಮಹತ್ವದ ಘಟ್ಟವಾಗಿರುತ್ತದೆ. ಕಾಲೇಜುಗಳ ಆದ್ಯತೆ ನೀಡುವಾಗ ಹೆಚ್ಚಿನ ಕಾಲೇಜುಗಳ ಹೆಸರು ನಮೂದಿಸಬೇಕು. ಉತ್ತಮ ಕಾಲೇಜಿನ ಹೆಸರು ಮೊದಲ ಆದ್ಯತೆಯಲ್ಲಿ ಇರಬೇಕು. ಆದ್ಯತೆ ನೀಡುವಾಗ ಎಡವಿದರೆ, ಇಷ್ಟವಿಲ್ಲದ ಕಾಲೇಜಿನಲ್ಲಿ ಸೀಟು ಲಭಿಸುವ ಸಾಧ್ಯತೆ ಇರುತ್ತದೆ’ ಎಂದು ಎಚ್ಚರಿಸಿದರು.

‘ಪ್ರಸ್ತುತ ಶೈಕ್ಷಣಿಕ ಅವಕಾಶಗಳು ಹೆಚ್ಚಿದ್ದು, ಕೋರ್ಸ್‌ ಆಯ್ಕೆಯಲ್ಲಿ ಆದಷ್ಟು ಎಚ್ಚರಿಕೆ ವಹಿಸಬೇಕು. ಉತ್ತಮ ರ್‍ಯಾಂಕ್‌ ಗಳಿಸಿದರೆ ಉತ್ತಮ ಪ್ರಯೋಗಾಲಯ, ಗ್ರಂಥಾಲಯ, ಬೋಧಕ ವೃಂದ ಹೊಂದಿರುವ ಕಾಲೇಜಿನಲ್ಲಿ ಸೀಟು ಲಭಿಸಲಿದೆ. ದಾಖಲಾತಿಗಳನ್ನು ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡುವಾಗ ಎಚ್ಚರಿಕೆ ವಹಿಸಬೇಕು. ದಾಖಲಾತಿ ಹಾಗೂ ಪಾಸ್‌ವರ್ಡ್‌ ಅನ್ನು ಯಾರಿಗೂ ನೀಡಬಾರದು’ ಎಂದು ಸಲಹೆ ನೀಡಿದರು.

‘ಆನ್‌ಲೈನ್‌ಗೆ ದಾಖಲಾತಿ ಸಲ್ಲಿಸುವುದಕ್ಕೂ ಮೊದಲು ಕಾಲೇಜುಗಳ ವಿವರವನ್ನು ಮೊದಲೇ ಪಡೆದುಕೊಂಡಿರಬೇಕು. ಆಗ ಸುಲಭವಾಗಲಿದೆ’ ಎಂದು ಸಲಹೆ ನೀಡಿದರು. ‌

ಶೈಕ್ಷಣಿಕ ಮೇಳದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗಾಗಿ ಸಿ.ಇ.ಟಿ, ಕಾಮೆಡ್‌–ಕೆ ಅಣಕು ಪರೀಕ್ಷೆ ನಡೆಯಿತು. ಮೇಳದಲ್ಲಿ ಭಾಗವಹಿಸಿದ್ದ ಪೋಷಕರು ಹಾಗೂ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. 

ಅದಿತಿ ನಾಗರಾಜ್
ರಘುಪತಿ
ವಿನುತ್‌
ಗಗನ್
ಶಮೀಲ್
‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ’ ಆಯೋಜಿಸಿರುವ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ವಿವಿಧ ಕೋರ್ಸ್‌ಗಳ ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ.
‘ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿ’ ಆಯೋಜಿಸಿರುವ 14ನೇ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ನಲ್ಲಿ ವಿದ್ಯಾರ್ಥಿ ಮತ್ತು ಪೋಷಕರು ವಿವಿಧ ಕೋರ್ಸ್‌ಗಳ ಮಾಹಿತಿ ಪಡೆದರು –ಪ್ರಜಾವಾಣಿ ಚಿತ್ರ.

ವಿದ್ಯಾರ್ಥಿಗಳು–ಪೋಷಕರ ಅನಿಸಿಕೆ...

‘ಹೆಚ್ಚು ಅನುಕೂಲ...’

ಶೈಕ್ಷಣಿಕ ಮೇಳವನ್ನು ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಹೊಸ ಕೋರ್ಸ್‌ಗಳು ಹಾಗೂ ಪ್ರವೇಶ ಶುಲ್ಕದ ಮಾಹಿತಿ ಒಂದೇ ಸೂರಿನಡಿ ಲಭಿಸಿತು. ಈ ರೀತಿಯ ಮೇಳದಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲ ಆಗಲಿದೆ.

–ಅದಿತಿ ನಾಗರಾಜ್‌ ವಿದ್ಯಾರ್ಥಿನಿ ಚೈತನ್ಯ ಪಿಯು ಕಾಲೇಜು ನಾಗರಬಾವಿ

‘ಗೊಂದಲ ನಿವಾರಣೆ’

ಯಾವ ಕೋರ್ಸ್‌ ಆಯ್ಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ಗೊಂದಲ ಇತ್ತು. ತಜ್ಞರಿಂದ ಮಾಹಿತಿ ಪಡೆದುಕೊಂಡು ಗೊಂದಲ ಬಗೆ ಹರಿಸಿಕೊಂಡಿದ್ದೇವೆ.

–ಶಮೀಲ್‌ ಪೋಷಕ ಗೋಣಿಕೊಪ್ಪಲು ಕೊಡಗು

‘ತಪ್ಪಿದ ಅಲೆದಾಟ...’

ಬಿ.ಎಸ್‌ಸಿ ಕೋರ್ಸ್‌ಗೆ ಸೇರಲು ನಿರ್ಧರಿಸಿದ್ದೇನೆ. ಒಂದೇ ಸ್ಥಳದಲ್ಲಿ ಎಲ್ಲ ಮಾಹಿತಿ ಸಿಕ್ಕಿದ್ದರಿಂದ ಪ್ರತಿ ಕಾಲೇಜು ಬಳಿಗೆ ತೆರಳಿ ವಿಚಾರಿಸುವುದು ತಪ್ಪಿತು. ನನ್ನ ಆಯ್ಕೆಯ ಕಾಲೇಜಿನ ಮಳಿಗೆಗಳೂ ಮೇಳದಲ್ಲಿ ಪಾಲ್ಗೊಂಡಿದ್ದವು.

–ಗಗನ್‌ ವಿದ್ಯಾರ್ಥಿ ಮಲ್ಲೇಶ್ವರ

‘ಸಂಪೂರ್ಣ ಮಾಹಿತಿ’

ಬಿ.ಟೆಕ್‌ ಕೋರ್ಸ್‌ಗೆ ಸೇರಲು ಇಚ್ಛಿಸಿದ್ದೇನೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಶೈಕ್ಷಣಿಕ ಮೇಳದ ಮಳಿಗೆಯಲ್ಲಿ ದೊರೆಯಿತು. ಯಾವ ಕೋರ್ಸ್‌ ತೆಗೆದುಕೊಂಡರೆ ಭವಿಷ್ಯಕ್ಕೆ ಅನುಕೂಲ ಎಂಬುದು ಮೇಳದಿಂದ ತಿಳಿಯಿತು.

–ವಿ.ಮೋನಿಶ್‌ ವಿದ್ಯಾರ್ಥಿ

‘ಪ್ರವೇಶ ಶುಲ್ಕದ ಮಾಹಿತಿ’

ಹೊಸ ಕೋರ್ಸ್‌ಗಳ ಪ್ರಾಮುಖ್ಯ ಭವಿಷ್ಯದಲ್ಲಿನ ಉದ್ಯೋಗ ಅವಕಾಶ ಶುಲ್ಕದ ವಿವರವನ್ನು ಮಳಿಗೆಯವರು ನೀಡಿದರು. ಈ ಮೇಳ ಆಯೋಜಿಸಿದ್ದಕ್ಕೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್‌ ಹೆರಾಲ್ಡ್‌’ ಬಳಗಕ್ಕೆ ಧನ್ಯವಾದಗಳು

–ರಘುಪತಿ ಪೋಷಕರು ಬನಶಂಕರಿ

‘ಧೈರ್ಯ ಬಂದಿದೆ’

ವೈದ್ಯಕೀಯ ಶಿಕ್ಷಣ ಪಡೆಯಲು ಆಸಕ್ತಿ ಹೊಂದಿದ್ದೇನೆ. ಕೌನ್ಸೆಲಿಂಗ್ ಎದುರಿಸುವುದು ಹೇಗೆ ಎಂಬ ಭಯವಿತ್ತು. ವಿಚಾರಗೋಷ್ಠಿಯಲ್ಲಿ ತಜ್ಞರು ನೀಡಿದ ಮಾಹಿತಿಯಿಂದಾಗಿ ಧೈರ್ಯ ಬಂದಿದೆ.

–ವಿನಿತ್‌ ವಿದ್ಯಾರ್ಥಿ ಕನಕಪುರ ರಾಮನಗರ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.