ಬೆಂಗಳೂರು: ಸ್ವಾಭಿಮಾನಿ ಕರ್ನಾಟಕ ವೇದಿಕೆ ನೀಡುವ 2024ನೇ ಸಾಲಿನ ‘ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ’ಗೆ ಸಾಹಿತ್ಯದ ವಿವಿಧ ಪ್ರಕಾರಗಳ ಎಂಟು ಕೃತಿಗಳು ಆಯ್ಕೆಯಾಗಿವೆ.
ಕಥಾ ವಿಭಾಗದಲ್ಲಿ ರವಿಕುಮಾರ್ ನೀಹ ಅವರ ‘ಅವು ಅಂಗೇ’ ಮತ್ತು ಮಹಾಂತೇಶ ನವಲಕಲ್ ಅವರ ‘ಬುದ್ಧ ಗಂಟೆಯ ಸದ್ದು’, ಕವನ ವಿಭಾಗದಲ್ಲಿ ಗೀತಾ ಮಂಜು ಬೆಣ್ಣೆಹಳ್ಳಿ ಅವರ ‘ಕಿರು ಬೆಳಕಿನ ಸೂಜಿ’ ಮತ್ತು ಶಶಿ ತರೀಕೆರೆ ಅವರ ‘ಪ್ಯೂಷಾ’, ಪ್ರಬಂಧ ವಿಭಾಗದಲ್ಲಿ ಶಿವರಾಜ ಬ್ಯಾಡರಹಳ್ಳಿ ಅವರ ‘ಒಂದು ತಲೆ ಚವುರದ ಕಥೆ’ ಮತ್ತು ಕರವೀರ ಪ್ರಭು ಕ್ಯಾಲಕೊಂಡ ಅವರ ‘ನೀವೂ ನೆಪೋಲಿಯನ್ ಆಗಿ’ ಕೃತಿಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.
‘ಡಾ. ಸಿ. ಸೋಮಶೇಖರ್ ಮತ್ತು ಶ್ರೀಮತಿ ಸರ್ವಮಂಗಳ ದತ್ತಿ ಪ್ರಶಸ್ತಿ’ಗೆ ಧರಣೇಂದ್ರ ಕುರಕರಿ ಅವರ ‘ಜಾತ್ರಿ’ ಕಾದಂಬರಿ ಮತ್ತು ಮಹಾಂತೇಶ ಪಾಟೀಲ ಅವರ ‘ಬೆಳಕು ಬೆಳೆಯುವ ಹೊತ್ತು’ ವಿಮರ್ಶಾ ಕೃತಿ ಭಾಜನವಾಗಿವೆ. ಪ್ರಶಸ್ತಿಯು ತಲಾ ₹5 ಸಾವಿರ ಒಳಗೊಂಡಿದೆ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಇದೇ 30ರಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ವೇದಿಕೆ ಅಧ್ಯಕ್ಷ ದ್ವಾರನಕುಂಟೆ ಪಾತಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.