ADVERTISEMENT

‘ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ: ಅಕ್ರಮಕ್ಕೆ ರಹದಾರಿ’

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2022, 20:52 IST
Last Updated 29 ಮಾರ್ಚ್ 2022, 20:52 IST
   

ಬೆಂಗಳೂರು: ಮಂಜೂರಾದ ಕಟ್ಟಡ ಯೋಜನೆಯನ್ನು ಉಲ್ಲಂಘಿಸಿ ಕಟ್ಟಡ ನಿರ್ಮಿಸುವ ಪರಿಪಾಠ ಅವ್ಯಾಹತವಾಗಿರುವ ಬೆನ್ನಲ್ಲೇ ಸ್ವಾಧೀನಾನುಭವ ಪತ್ರ (ಒ.ಸಿ) ಇಲ್ಲದೆಯೇ ‘ಬೆಳಕು’ ಯೋಜನೆಯಡಿ ವಿದ್ಯುತ್ ಸಂಪರ್ಕ ನೀಡಲು ಸರ್ಕಾರ ಮುಂದಾಗಿದೆ. ನಕ್ಷೆ ಉಲ್ಲಂಘಿಸಿ ಮನೆ ನಿರ್ಮಾಣಕ್ಕೆ ಇದು ರಹದಾರಿ ಆಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ನಿಯಮ ಉಲ್ಲಂಘನೆಯನ್ನು ನಿಯಂತ್ರಿಸಲೆಂದೇ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯದ ಕಟ್ಟಡಗಳಿಗೆ ವಿದ್ಯುತ್‌ ಹಾಗೂ ಕುಡಿಯುವ ನೀರಿನ ಕಾಯಂ ಸಂಪರ್ಕ ನೀಡುವುದನ್ನು 2017ರ ಡಿಸೆಂಬರ್‌ನಿಂದ ಸ್ಥಗಿತಗೊಳಿಸಲಾಗಿದೆ. ಈ ನಿಯಮ ಸಡಿಲಿಸುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚುತ್ತಲೇ ಇತ್ತು.

5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೆ ತೊಂದರೆಗೆ ಒಳಗಾಗಿವೆ ಎಂದು ಬೆಂಗಳೂರು ನಗರದ ಹಲವು ಶಾಸಕರೂ ಇಂಧನ ಇಲಾಖೆಗೆ ಮನವಿ ಸಲ್ಲಿಸಿದ್ದರು. ಒ.ಸಿ‌‌ ಇಲ್ಲದವರಿಗೂ ಸಂಪರ್ಕ‌ ನೀಡುವ ಬಗ್ಗೆ ಸದ್ಯದಲ್ಲೇ ಆದೇಶ ಹೊರಡಿಸುವುದಾಗಿ ಇಂಧನ ಸಚಿವ ವಿ. ಸುನೀಲ್‌ಕುಮಾರ್ ಪ್ರಕಟಿಸಿದ್ದಾರೆ. ಈ ಬಗ್ಗೆ ನಾಗರಿಕ ಸಂಘಟನೆಗಳ ಮುಖಂಡರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

***

‘ಸಮನ್ವಯತೆ ಇಲ್ಲದಿರುವುದೇ ಸಮಸ್ಯೆ’ಯೋಜನಾ ಬದ್ಧವಾಗಿ ಬೆಂಗಳೂರು ನಗರ ಕಟ್ಟುವ ದೃಷ್ಟಿಕೋನ ಸರ್ಕಾರಕ್ಕೆ ಇಲ್ಲವಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ರಚನೆಯಾದ ಬೆಂಗಳೂರು ಮಹಾನಗರ ಯೋಜನೆ ಸಮಿತಿ (ಬಿಎಂಪಿಸಿ) ಕಾರ್ಯರೂಪಕ್ಕೆ ಬರಲಿಲ್ಲ. ಬಿಬಿಎಂಪಿ, ಜಲ ಮಂಡಳಿ, ಬೆಸ್ಕಾಂ, ಬಿಎಂಟಿಸಿ, ಪೊಲೀಸ್ ಇಲಾಖೆಗಳು ತಮ್ಮ ಪಾಡಿಗೆ ತಾವು ಪ್ರತ್ಯೇಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಅನುಷ್ಠಾನ ಮಾಡುತ್ತಿವೆ. ಎಲ್ಲಾ ಇಲಾಖೆಗಳೂ ಸಮನ್ವಯತೆಯಿಂದ ಕೆಲಸ ಮಾಡಿದರೆ ನಕ್ಷೆ ಉಲ್ಲಂಘನೆ ಮಾಡಿ ಮನೆ ಕಟ್ಟುವವರಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ. ಮಂಜೂರಾತಿ ಪಡೆದಿರುವ ನಕ್ಷೆ ಆಧರಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯಲಾಗುತ್ತದೆ. ಬಳಿಕ ಅದನ್ನು ಉಲ್ಲಂಘಿಸಿ ಮನೆ ಕಟ್ಟುವುದನ್ನು ನೋಡಿದ್ದರೂ ಬಿಬಿಎಂಪಿ ವಾರ್ಡ್‌ ಎಂಜಿನಿಯರ್‌ಗಳು ಸುಮ್ಮನಿರುತ್ತಾರೆ. ಕಟ್ಟಡ ನಿರ್ಮಾಣವಾದ ನಂತರ ಮನೆಯ ಮಾಲೀಕರಿಂದ ಲಂಚ ಪಡೆಯುವ ಸುಲಭದ ಮಾರ್ಗವನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ಇದೆಲ್ಲವನ್ನು ಸರಿಯಾಗಬೇಕೆಂದರೆ ಬಿಎಂಪಿಸಿ ಕಾರ್ಯರೂಪಕ್ಕೆ ಬರಬೇಕು. ಒ.ಸಿ ಇಲ್ಲದೆ ವಿದ್ಯುತ್ ಸಂಪರ್ಕ ನೀಡುವುದು ಸೂಕ್ತ ಅಲ್ಲ.

ಡಿ.ಎಸ್. ರಾಜಶೇಖರ್,ಬೆಂಗಳೂರು ಪ್ರಜಾ ವೇದಿಕೆ

***


‘ಚುನಾವಣೆ ದೃಷ್ಟಿಕೋನದ ನಿರ್ಧಾರ ಸರಿಯಲ್ಲ’

ನಾಗರಿಕರಿಗೆ ನೀರು ಮತ್ತು ವಿದ್ಯುತ್ ಒದಗಿಸಬೇಕು ಎಂಬುದು ಒಂದು ದೃಷ್ಟಿಯಲ್ಲಿ ಸರಿಯಾದರೂ, ನಕ್ಷೆ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಆಗುವುದನ್ನು ತಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಯೋಜನಾಬದ್ಧವಾಗಿ ನಗರ ನಿರ್ಮಾಣವಾಗಬೇಕೆಂದರೆ ನ್ಯಾಯಾಲಯದ ಆದೇಶ ಪಾಲನೆ ಮಾಡಬೇಕಾಗುತ್ತದೆ. ಒ.ಸಿ ಸಿಗದ ಕಾರಣಕ್ಕೆ 5 ಲಕ್ಷಕ್ಕೂ ಹೆಚ್ಚು ಕುಟುಂಬಗಳು ವಿದ್ಯುತ್ ಸಂಪರ್ಕ ಪಡೆಯಲು ಸಾಧ್ಯವಾಗಿಲ್ಲ ಎಂದಾದರೆ ಅದಕ್ಕೆ ಕಾರಣ ಕೂಡ ಸರ್ಕಾರವೇ ಆಗಿದೆ. ಈ ಸಂಖ್ಯೆ ದೊಡ್ಡದಾಗಲು ಬಿಟ್ಟಿದ್ದು ಇದೇ ಬಿಬಿಎಂಪಿ. ನಕ್ಷೆಯಾನುಸಾರವೇ ಕಟ್ಟಡಗಳನ್ನು ಕಟ್ಟುವಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಸರ್ಕಾರದ್ದೇ ಆಗಿದೆ. ಬಿಬಿಎಂಪಿ ಚುನಾವಣೆ ಸಮೀಪವಾಗಿದೆ ಎಂಬ ಕಾರಣಕ್ಕೆ ಈಗ ಒ.ಸಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೇಳಲಾಗುತ್ತಿದೆ. ಒಳ ರಾಜಕೀಯ, ಮತೀಯ ರಾಜಕೀಯ ಮಾಡಿಕೊಂಡು ಕಾಲ ಕಳೆಯಲಾಗಿದೆ. ಅಭಿವೃದ್ಧಿ ದೃಷ್ಟಿಯಿಂದ ಏನನ್ನೂ ಸರ್ಕಾರ ಮಾಡಿಲ್ಲ. ಅದಕ್ಕಾಗಿ ಈಗ ಈ ರೀತಿಯ ಹೆಜ್ಜೆ ಇಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಹೋಗುವುದು ತಪ್ಪು ನಿರ್ಧಾರ. ಈ ರೀತಿಯ ಅಡ್ಡದಾರಿ ಬಿಟ್ಟು ಕಟ್ಟಡ ನಿರ್ಮಾಣಕ್ಕೆ ಅನುಮತಿಗಳನ್ನು ಪಡೆಯಲು ಏಕಗವಾಕ್ಷಿ ವ್ಯವಸ್ಥೆ ತರಬೇಕು‌‌.

ಎನ್‌.ಎಸ್.ಮುಕುಂದ್, ಬೆಂಗಳೂರು ಪ್ರಜಾ ವೇದಿಕೆ

***


‘ನಕ್ಷೆ ಉಲ್ಲಂಘನೆಗೆ ಕಡಿವಾಣ ಬೇಕು’

ಕಟ್ಟಡ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕದಿದ್ದರೆ ನಗರ ಅನಿಯಂತ್ರಿತವಾಗಿ ಬೆಳೆಯುತ್ತದೆ. ಆದ್ದರಿಂದ ಯಾವುದಾದರೂ ಒಂದು ಹಂತದಲ್ಲಿ ಕಡಿವಾಣ ಹಾಕಲೇಬೇಕು. ಒ.ಸಿ ಸಿಗದ ಕಾರಣಕ್ಕೆ 5 ಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಬೆಂಗಳೂರಿನಲ್ಲಿ ಸಿಕ್ಕಿಲ್ಲ ಎಂದು ಇಂಧನ ಸಚಿವರೇ ಹೇಳುತ್ತಿದ್ದಾರೆ. ನಕ್ಷೆ ಉಲ್ಲಂಘಿಸಲು ಅಧಿಕಾರಿಗಳೇ ಅವಕಾಶ ಮಾಡಿಕೊಟ್ಟಿದ್ದಾರೆ. ಮೊದಲು ಆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು. ಆಗ ಮಾತ್ರ ಮುಂದಿನ ದಿನಗಳಲ್ಲಿ ನಕ್ಷೆ ಉಲ್ಲಂಘನೆ ಆಗುವುದು ತಪ್ಪಲಿದೆ. ಇಲ್ಲದಿದ್ದರೆ ಅಕ್ರಮ–ಸಕ್ರಮ ಯೋಜನೆಯನ್ನು ಬಡವರ ಜೊತೆಗೆ ಶ್ರೀಮಂತರು, ರಿಯಲ್ ಎಸ್ಟೇಟ್ ಮಾಫಿಯಾದವರೂ ದುರ್ಬಳಕೆ ಮಾಡಿಕೊಳ್ಳುತ್ತಾರೆ. ಅದಕ್ಕೆ ಅವಕಾಶವನ್ನು ಅಧಿಕಾರಿಗಳೇ ಮಾಡಿಕೊಡುತ್ತಾರೆ. ಬರಲಿರುವ ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆ ಒಂದನ್ನೇ ದೃಷ್ಟಿಯಾಗಿಟ್ಟುಕೊಂಡು ಸರ್ಕಾರ ಈ ರೀತಿಯ ಆದೇಶ ಹೊರಡಿಸುವುದು ಸೂಕ್ತವಲ್ಲ. ನಕ್ಷೆ ಉಲ್ಲಂಘನೆ ತಡೆಯಬೇಕು. ಆ ಮೂಲಕ ಮುಂದಾಗಲಿರುವ ಅಪಾಯಗಳನ್ನೂ ತಡೆಯಬೇಕು.

ಮಂಜುಳಾ ವೆಂಕಟೇಶ್,ಹಲಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.