ADVERTISEMENT

ದರೋಡೆಕೋರರ ಬಂಧನ: ಮೂರೂವರೆ ಕೆ.ಜಿ ಚಿನ್ನಾಭರಣ ಜಪ್ತಿ

* ಪಿಸ್ತೂಲ್ ತೋರಿಸಿ ಬೆದರಿಕೆ * ಕೆಲಸಗಾರನ ಕೈ–ಕಾಲು ಕಟ್ಟಿ ಕೃತ್ಯ

​ಪ್ರಜಾವಾಣಿ ವಾರ್ತೆ
Published 8 ಜುಲೈ 2022, 19:50 IST
Last Updated 8 ಜುಲೈ 2022, 19:50 IST
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ಪಿಸ್ತೂಲ್‌ಗಳನ್ನು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ವೀಕ್ಷಿಸಿದರು
ಆರೋಪಿಗಳಿಂದ ಜಪ್ತಿ ಮಾಡಲಾದ ಚಿನ್ನಾಭರಣ, ಬೆಳ್ಳಿ ಸಾಮಗ್ರಿ ಹಾಗೂ ಪಿಸ್ತೂಲ್‌ಗಳನ್ನು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ವೀಕ್ಷಿಸಿದರು   

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಠಾಣೆ ವ್ಯಾಪ್ತಿಯ ಮೈಲಸಂದ್ರದಲ್ಲಿರುವ ‘ರಾಮದೇವ್ ಜ್ಯುವೆಲರ್ಸ್ ಮತ್ತು ಬ್ರೋಕರ್ಸ್’ ಮಳಿಗೆಗೆ ನುಗ್ಗಿ ₹ 1.58 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿ ದರೋಡೆ ಮಾಡಿದ್ದ ಆರೋಪದಡಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

‘ರಾಜಸ್ಥಾನದ ದೇವರಾಮ್, ರಾಹುಲ್, ರಾಮ್ ಸಿಂಗ್ ಹಾಗೂ ಅನಿಲ್ ಬಂಧಿತರು. ಇವರಿಂದ 3 ಕೆ.ಜಿ 500 ಗ್ರಾಂ ಚಿನ್ನಾಭರಣ ಹಾಗೂ 16 ಕೆ.ಜಿ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ. ಇನ್ನೊಬ್ಬ ಆರೋಪಿ ವಿಷ್ಣುಪ್ರಸಾದ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ತಿಳಿಸಿದರು.

‘ಚಿನ್ನಾಭರಣ ಮಳಿಗೆ ಕೆಲಸಗಾರ, ಜುಲೈ 4ರಂದು ಬೆಳಿಗ್ಗೆ 7.15ರ ಸುಮಾರಿಗೆ ಬಾಗಿಲು ತೆರೆದು ವ್ಯಾಪಾರ ಆರಂಭಿಸಿದ್ದ. ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಬಂದಿದ್ದ ಆರೋಪಿಗಳು, ಚಿನ್ನದ ಸರ ತೋರಿಸುವಂತೆ ಹೇಳಿದ್ದರು. ಕೆಲಸಗಾರ ಸರ ತೋರಿಸುವುದರಲ್ಲಿ ನಿರತನಾಗಿದ್ದ. ಅದೇ ವೇಳೆ ಪಿಸ್ತೂಲ್ ತೋರಿಸಿ ಬೆದರಿಸಿದ್ದ ಆರೋಪಿಗಳು, ಆತನನ್ನು ಹಿಡಿದು ಕೈ–ಕಾಲು ಕಟ್ಟಿ ಹಾಕಿದ್ದರು.’

ADVERTISEMENT

‘ಮಳಿಗೆಯಲ್ಲಿದ್ದ ₹ 1.58 ಕೋಟಿ ಮೌಲ್ಯದ ಚಿನ್ನಾಭರಣ ಹಾಗೂ ಬೆಳ್ಳಿ ಸಾಮಗ್ರಿಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು. ಸಿ.ಸಿ.ಟಿ.ವಿ ಕ್ಯಾಮೆರಾ ಡಿವಿಆರ್ ಸಹ ಜೊತೆಗೇ ತೆಗೆದುಕೊಂಡು ಹೋಗಿದ್ದರು. ಈ ಬಗ್ಗೆ ಕೆಲಸಗಾರ ಹಾಗೂ ಮಾಲೀಕನ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು’ ಎಂದೂ ಹೇಳಿದರು.

ಪೊಲೀಸರ ಮೇಲೆ ಗುಂಡಿನ ದಾಳಿ: ‘ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿಗಳು ರಾಜಸ್ಥಾನಕ್ಕೆ ಹೋಗಿದ್ದರು. ಈ ಬಗ್ಗೆ ಮಾಹಿತಿ ಕಲೆಹಾಕಿದ್ದ ವಿಶೇಷ ತಂಡ, ರಾಜಸ್ಥಾನಕ್ಕೆ ಹೋಗಿ ಸ್ಥಳೀಯ ಪೊಲೀಸರ ಸಹಕಾರದಲ್ಲಿ ತನಿಖೆ ಆರಂಭಿಸಿತ್ತು’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

‘ಚಿತ್ತೂರ್‌ಘರ್ ಜಿಲ್ಲೆಯ ಬೇಗೂಮ್‌ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳು ಅಡಗಿದ್ದರು. ಅವರನ್ನು ಬಂಧಿಸಲು ಹೋದಾಗ ಪೊಲೀಸರ ಮೇಲೆಯೇ ಗುಂಡಿನ ದಾಳಿ ನಡೆಸಿದರು. ಅದನ್ನು ಎದುರಿಸಿದ ಪೊಲೀಸರು, ಸಿನಿಮೀಯ ರೀತಿಯಲ್ಲಿ ಮೂರು ಕಿ.ಮೀ.ವರೆಗೆ ಬೆನ್ನಟ್ಟಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಗಳಿಂದ 2 ಪಿಸ್ತೂಲ್, 3 ಸಜೀವ ಗುಂಡುಗಳನ್ನೂ ಜಪ್ತಿ ಮಾಡಿದ್ದರು. ಆರೋಪಿಗಳ ವಿರುದ್ಧ ಬೇಗೂಮ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ಸಹ ದಾಖಲಾಗಿದೆ’ ಎಂದೂ ಹೇಳಿದರು.

ವ್ಯಾಪಾರದಲ್ಲಿ ನಷ್ಟವಾಗಿದ್ದರಿಂದ ದರೋಡೆ: ‘ಆರೋಪಿ ದೇವರಾಮ್, ರಾಜಸ್ಥಾನದಿಂದ ಬೆಂಗಳೂರಿಗೆ ಬಂದು ಹುಳಿಮಾವು ಬಳಿ ಹಾರ್ಡ್‌ವೇರ್ ಇಟ್ಟುಕೊಂಡಿದ್ದ. ವ್ಯವಹಾರದಲ್ಲಿ ಲಕ್ಷಾಂತರ ರೂಪಾಯಿ ನಷ್ಟವಾಗಿ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಹಣ ಗಳಿಸಬೇಕೆಂದು ದರೋಡೆಗೆ ಇಳಿದಿದ್ದ’ ಎಂದು ಪ್ರತಾಪ್ ರೆಡ್ಡಿ ತಿಳಿಸಿದರು.

‘ರಾಹುಲ್, ರಾಮ್ ಸಿಂಗ್, ಅನಿಲ್ ಹಾಗೂ ವಿಷ್ಣುಪ್ರಸಾದ್ ದರೋಡೆಯನ್ನೇ ವೃತ್ತಿ ಮಾಡಿಕೊಂಡಿದ್ದರು. ಅವರನ್ನು ಸಂಪರ್ಕಿಸಿದ್ದ ಆರೋಪಿ, ಬೆಂಗಳೂರಿಗೆ ಕರೆಸಿ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಚಿನ್ನಾಭರಣ ಮಳಿಗೆ ಬಳಿ 20 ದಿನಗಳಿಂದ ಓಡಾಡಿದ್ದ ಆರೋಪಿಗಳು, ದರೋಡೆಗೆ ಸಂಚು ರೂಪಿಸಿದ್ದರು. ಕೆಲಸಗಾರ ಒಬ್ಬನೇ ಇರುವಾಗಲೇ ಮಳಿಗೆಗೆ ನುಗ್ಗಿ ಆಭರಣ ದೋಚಿದ್ದರು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.