ADVERTISEMENT

ಇಪಿಎಫ್ ಹಣ ವಂಚನೆ ಆರೋಪ | ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿರುವೆ: ಉತ್ತಪ್ಪ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2024, 16:00 IST
Last Updated 22 ಡಿಸೆಂಬರ್ 2024, 16:00 IST
ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ   

ಬೆಂಗಳೂರು: ‘ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್)​ ಹಣ ವಂಚನೆ ಆರೋಪ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ. ನನಗೆ ಕಂಪೆನಿಗಳ ಜತೆ ಯಾವುದೇ ಸಂಬಂಧವಿಲ್ಲ’ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಬಿನ್ ಉತ್ತಪ್ಪ ಸ್ಪಷ್ಟನೆ ನೀಡಿದ್ದಾರೆ.

‘ಕಂಪೆನಿಯ ನಿರ್ದೇಶಕ ಸ್ಥಾನಕ್ಕೆ ಹಲವು ವರ್ಷಗಳ ಹಿಂದೆಯೇ ರಾಜೀನಾಮೆ ನೀಡಿದ್ದೇನೆ’ ಎಂದು ‘ಎಕ್ಸ್‌’ನಲ್ಲಿ ಹೇಳಿದ್ದಾರೆ.

‘2018 -19ರಲ್ಲಿ ಸ್ಟ್ರಾಬೆರಿ ಲೆನ್ಸೆರಿಯಾ ಪ್ರೈವೇಟ್ ಲಿಮಿಟೆಡ್, ಸೆಂಟಾರಸ್ ಲೈಫ್ ಸ್ಟೈಲ್ ಬ್ರ್ಯಾಂಡ್ಸ್ ಪ್ರೈವೇಟ್ ಲಿಮಿಟೆಡ್, ಬೆರ್ರೀಸ್ ಫ್ಯಾಷನ್ ಹೌಸ್ ಕಂಪೆನಿಗಳಿಗೆ ಸಾಲದ ರೂಪದಲ್ಲಿ ಹಣಕಾಸು ತೊಡಗಿಸಿದ್ದೆ. ಹಾಗಾಗಿ ಆ ಕಂಪೆನಿಗಳಿಗೆ ನಿರ್ದೇಶಕನಾಗಿ ನೇಮಕಗೊಂಡಿದ್ದೆ. ಆದರೆ, ಸಕ್ರಿಯ ಕಾರ್ಯನಿರ್ವಾಹಕ ಪಾತ್ರ ಹೊಂದಿರಲಿಲ್ಲ ಹಾಗೂ ಕಂಪೆನಿಗಳ ದೈನಂದಿನ ವ್ಯವಹಾರಗಳಲ್ಲಿ ನಾನು ಭಾಗಿಯಾಗಿರಲಿಲ್ಲ’ ಎಂದು ತಿಳಿಸಿದ್ದಾರೆ.

ADVERTISEMENT

‘ನಾನು ಸಾಲದ ರೂಪದಲ್ಲಿ ನೀಡಿದ್ದ ಹಣವನ್ನು ಮರುಪಾವತಿಸಲು ಈ ಕಂಪೆನಿಗಳು ವಿಫಲವಾಗಿವೆ. ಈ ವಿಚಾರ ನ್ಯಾಯಾಲಯದಲ್ಲಿದೆ’ ಎಂದಿದ್ದಾರೆ.

‘ವೃತ್ತಿಪರ ಕ್ರಿಕೆಟಿಗನಾಗಿ, ನಿರೂಪಕನಾಗಿ, ವೀಕ್ಷಕ ವಿವರಣೆಗಾರನಾಗಿ ನನಗೆ ಆ ಕಂ‍ಪೆನಿಗಳ ಕಾರ್ಯಾಚರಣೆಗಳಲ್ಲಿ ಭಾಗವಹಿಸಲು ಸಮಯವಿರಲಿಲ್ಲ ಹಾಗೂ ಅಷ್ಟು ಪರಿಣತಿಯೂ ಇರಲಿಲ್ಲ. ವಾಸ್ತವವಾಗಿ ನಾನು ಇದುವರೆಗೂ ಹಣ ಹೂಡಿಕೆ ಮಾಡಿರುವ ಇತರೆ ಕಂಪೆನಿಗಳಲ್ಲಿಯೂ ಕಾರ್ಯನಿರ್ವಾಹಕ ಪಾತ್ರವನ್ನು ವಹಿಸಿರುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಹಣ ವಂಚಿಸಿದ ಆರೋಪದ ಮೇಲೆ ರಾಬಿನ್ ಉತ್ತಪ್ಪ ವಿರುದ್ಧ ಡಿಸೆಂಬರ್ 4ರಂದು ಬಂಧನದ ವಾರಂಟ್ ಜಾರಿಗೊಳಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.