ADVERTISEMENT

ಅಮೆರಿಕದಿಂದ ಸುಂಕದ ಹೊರೆ: ಯುರೋಪ್‌, ಏಷ್ಯಾದತ್ತ ಗಮನಹರಿಸಲು ಉದ್ಯಮಿಗಳಿಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 22:10 IST
Last Updated 2 ಸೆಪ್ಟೆಂಬರ್ 2025, 22:10 IST
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಫ್ತು ಶ್ರೇಷ್ಠತಾ’ ಪ್ರಶಸ್ತಿ' ಯನ್ನು ಉದ್ಯಮಿಗಳಿಗೆ ಪ್ರದಾನ ಮಾಡಲಾಯಿತು  ಪ್ರಜಾವಾಣಿ ಚಿತ್ರ
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ರಫ್ತು ಶ್ರೇಷ್ಠತಾ’ ಪ್ರಶಸ್ತಿ' ಯನ್ನು ಉದ್ಯಮಿಗಳಿಗೆ ಪ್ರದಾನ ಮಾಡಲಾಯಿತು  ಪ್ರಜಾವಾಣಿ ಚಿತ್ರ   

ಬೆಂಗಳೂರು: ಭಾರತದಿಂದ ರಫ್ತಾಗುವ ಉತ್ಪನ್ನಗಳ ಮೇಲೆ ಅಮೆರಿಕ ಹೇರಿರುವ ಶೇ 50ರಷ್ಟು ಸುಂಕದ ಹೊರೆಯ ಸವಾಲನ್ನು ಸಮರ್ಥವಾಗಿ ಎದುರಿಸಲು ಯೂರೋಪ್‌ ಹಾಗೂ ಏಷ್ಯಾದ ದೇಶಗಳತ್ತ ಉದ್ಯಮಿಗಳು ಗಮನಹರಿಸಬೇಕು ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ( ಎಫ್‌ಕೆಸಿಸಿಐ) ಅಧ್ಯಕ್ಷ ಎಂ.ಜಿ.ಬಾಲಕೃಷ್ಣ ಸಲಹೆ ಮಾಡಿದರು.

ಮಂಗಳವಾರ ಇಲ್ಲಿ ನಡೆದ ಎಫ್‌ಕೆಸಿಸಿಐನ ರಫ್ತು ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ‘ಅಮೆರಿಕ ಮೇಲೆ ಅವಲಂಬನೆ ಆಗುವುದನ್ನು ತಪ್ಪಿಸಲು ಉದ್ಯಮಿಗಳು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಯುಎಇ, ಆಸ್ಟ್ರೇಲಿಯಾ, ಜಪಾನ್‌ನಂತಹ ಪ್ರಮುಖ ದೇಶಗಳ ಜತೆಗೆ ರಫ್ತು ಒಪ್ಪಂದ ಮಾಡಿಕೊಳ್ಳಬೇಕು’ ಎಂದರು.

ಅದರಲ್ಲೂ ಯೂರೋಪ್‌ನ ದೇಶಗಳೊಂದಿಗೆ ಸಿಇ ಪ್ರಮಾಣ ಪತ್ರ, ಸುಸ್ಥಿರತೆ ಲೇಬಲ್‌ಗಳು, ಗುಣಮಟ್ಟ ಬೆಂಚ್‌ಮಾರ್ಕ್‌ಗಳನ್ನು ಪಡೆದುಕೊಂಡು ಸ್ಥಳೀಯ ಹಂತದಲ್ಲೂ ಸಹಭಾಗಿತ್ವವನ್ನು ವಿಸ್ತರಿಸಿ. ಆ ದೇಶಗಳಲ್ಲಿ ನಡೆಯುವ ಉದ್ಯಮ ಮೇಳಗಳಲ್ಲೂ ಭಾಗವಹಿಸಿ ಎಂದು ಸೂಚಿಸಿದರು.

ADVERTISEMENT

ವಿಯೆಟ್ನಾಂ, ಇಂಡೊನೇಷ್ಯಾ, ದಕ್ಷಿಣ ಕೊರಿಯಾ ಕೂಡ ಪರ್ಯಾಯ ಆಯ್ಕೆಗಳಾಗಿವೆ. ಚೀನಾ ರೂಪಿಸಿರುವ +1 ರಣನೀತಿಯನ್ನು ಭಾರತ ಅನುಸರಿಸುವುದು ಒಳ್ಳೆಯದು. ಇದರಿಂದ ಭಾರತದ ರಫ್ತು ಪರಂಪರೆಯನ್ನು ಬಲಪಡಿಸಲು ಸಹಕಾರಿಯಾಗಲಿದೆ ಎಂದರು.

ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಎಂಜಿನಿಯರಿಂಗ್‌ ವಲಯದ ರಫ್ತು ಪ್ರಮಾಣ ಹೆಚ್ಚಬೇಕು. ನಾವಿನ್ಯತೆ ಜತೆಗೆ ದೇಶಿಯವಾಗಿಯೂ ಮೌಲ್ಯ ಹೆಚ್ಚಿಸಲು ಗಮನ ನೀಡಬೇಕು. ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಕೆಗೂ ಒತ್ತು ನೀಡುವುದು ಸೂಕ್ತ ಎಂದು ಅವರು ತಿಳಿಸಿದರು.

ಕೇಂದ್ರ ಪ್ರೋತ್ಸಾಹಕ ಯೋಜನೆ ಘೋಷಿಸಲಿ: ರಾಮಲಿಂಗಾರೆಡ್ಡಿ

ಅಮೆರಿಕ ಹೇರಿರುವ ಸುಂಕದ ಹೊರೆ ತಪ್ಪಿಸಲು ಕೇಂದ್ರ ಸರ್ಕಾರವು ಪ್ರೋತ್ಸಾಹಕ ಯೋಜನೆಗಳನ್ನು ಘೋಷಿಸಬೇಕು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಭಾರತದ ರಫ್ತು ಯಶಸ್ಸಿಗೆ ಕರ್ನಾಟಕದ ಕೊಡುಗೆ ಬಹಳಷ್ಟಿದೆ. ಐಟಿ ಏರೋಸ್ಪೇಸ್ ಜೈವಿಕ ತಂತ್ರಜ್ಞಾನ ಕಾಫಿ ಜವಳಿ ಮತ್ತು ಉತ್ಪಾದನಾ ವಲಯಗಳಿಗೆ ಸಂಬಂಧಿಸಿ ರಫ್ತಿನಲ್ಲಿ ಕರ್ನಾಟಕವು ಅಗ್ರಸ್ಥಾನದಲ್ಲಿದೆ ಎಂದು ಹೇಳಿದರು.

ಕಂಪನಿಗಳಿಗೆ ಪ್ರಶಸ್ತಿ: 40 ರಫ್ತು ಕಂಪನಿಗಳಿಗೆ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ರಫ್ತು ಶ್ರೇಷ್ಠತಾ ಪ್ರಶಸ್ತಿಯನ್ನು ರಾಮಲಿಂಗಾರೆಡ್ಡಿ ಪ್ರದಾನ ಮಾಡಿದರು. ಬೆಂಗಳೂರು ಕರ್ನಾಟಕದ ವಿವಿಧ ವಲಯಗಳ ಉದ್ಯಮಿಗಳು ಚಿನ್ನ ಬೆಳ್ಳಿ ವಿಭಾಗದಡಿ ಪ್ರಶಸ್ತಿಗಳನ್ನು ಸ್ವೀಕರಿಸಿದರು. ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮುಂದಿನ ಅಧ್ಯಕ್ಷರಾದ ಉಮಾರೆಡ್ಡಿ ಹಿರಿಯ ಉಪಾಧ್ಯಕ್ಷರಾದ ಟಿ. ಸಾಯಿರಾಮ್ ಪ್ರಸಾದ್ ನಿಕಟಪೂರ್ವ ಅಧ್ಯಕ್ಷ ರಮೇಶ್ ಚಂದ್ರ ಲಹೋಟಿ ಮತ್ತು ಪ್ರಶಸ್ತಿ ಸಮಿತಿಯ ಅಧ್ಯಕ್ಷ ತಿಪ್ಪೇಶಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.