ADVERTISEMENT

17 ಸುಲಿಗೆ ಪ್ರಕರಣ ಪತ್ತೆ: 6 ಮಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2023, 14:59 IST
Last Updated 4 ನವೆಂಬರ್ 2023, 14:59 IST
ಸುಲಿಗೆ ಪ್ರಕರಣದ ಆರೋಪಿಗಳನ್ನು ಅವರ ಮನೆ ಬಳಿ ಸುತ್ತಾಡಿಸಿದ ಪೊಲೀಸರು, ಜನರಲ್ಲಿ ಜಾಗೃತಿ ಮೂಡಿಸಿದರು
ಸುಲಿಗೆ ಪ್ರಕರಣದ ಆರೋಪಿಗಳನ್ನು ಅವರ ಮನೆ ಬಳಿ ಸುತ್ತಾಡಿಸಿದ ಪೊಲೀಸರು, ಜನರಲ್ಲಿ ಜಾಗೃತಿ ಮೂಡಿಸಿದರು   

ಬೆಂಗಳೂರು: ವಿಧಾನಸೌಧದ ಸುತ್ತಮುತ್ತಲಿನ ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ (ಸಿಬಿಡಿ) ಸುಲಿಗೆ ಹಾಗೂ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದು, ವಿಶೇಷ ಕಾರ್ಯಾಚರಣೆ ನಡೆಸಿ 6 ಆರೋಪಿಗಳನ್ನು ಬಂಧಿಸಿದ್ದಾರೆ.

ಶಿವಾಜಿನಗರ ಠಾಣೆ ವ್ಯಾಪ್ತಿಯ ಕಂಟೋನ್ಮೆಂಟ್ ರೈಲು ನಿಲ್ದಾಣ ಬಳಿ ಪತ್ರಿಕಾ ವಿತರಕ ಆಂಥೋನಿ ಸಿ. (75) ಅವರನ್ನು ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಮೇಲಿಂದ ಮೇಲೆ ನಡೆಯುತ್ತಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಶನಿವಾರ ನಸುಕಿನಿಂದ ಹಲವು ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿದರು.

ಅಶೋಕನಗರ, ಭಾರತಿನಗರ, ಕಮರ್ಷಿಯಲ್ ಸ್ಟ್ರೀಟ್, ಶಿವಾಜಿನಗರ, ಹಲಸೂರು, ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ, ಬಾಣಸವಾಡಿ ಹಾಗೂ ಸುತ್ತಮುತ್ತಲಿನ ಠಾಣೆಗಳ ವ್ಯಾಪ್ತಿಯಲ್ಲಿ ವಿಶೇಷ ಕಾರ್ಯಾಚರಣೆ ನಡೆಯಿತು.

ADVERTISEMENT

‘ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಜನರಿಗೆ ರಕ್ಷಣೆ ಒದಗಿಸಲು ದಿನದ 24 ಗಂಟೆಯೂ ಪೊಲೀಸರು ಕೆಲಸ ಮಾಡುತ್ತಿದ್ದಾರೆ. ನಸುಕಿನಲ್ಲಿ ಓಡಾಡುವವರನ್ನು ಗುರಿಯಾಗಿಸಿ ಸುಲಿಗೆ ಮಾಡುತ್ತಿರುವ ಆರೋಪಿಗಳ ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಲಾಗಿದೆ. ಅಪರಾಧ ತಡೆಯಲು ಗಸ್ತು ಹೆಚ್ಚಿಸಲಾಗಿದೆ’ ಎಂದು ಪೂರ್ವ ವಿಭಾಗದ ಡಿಸಿಪಿ ಡಿ. ದೇವರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

7 ಪ್ರಕರಣಗಳಲ್ಲಿ ನಾಲ್ವರು ಬಂಧನ: ಜನರನ್ನು ಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಆರೋಪದಡಿ ನೀಲಸಂದ್ರದ ಸೈಯದ್ ಉಸ್ಮನ್ (21), ಇರ್ಫಾನ್ ಅಲಿಯಾಸ್ ಚುವ್ವಿ (20), ಜೀವಾ (20) ಹಾಗೂ ಸೂರ್ಯನನ್ನು (21) ಪುಲಕೇಶಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಪುಲಕೇಶಿನಗರ, ಬಾಣಸವಾಡಿ, ಬೊಮ್ಮನಹಳ್ಳಿ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ ಹಾಗೂ ಎಚ್‌ಎಸ್‌ಆರ್ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 10 ಸುಲಿಗೆ ಪ್ರರಣಗಳಲ್ಲಿ ಆರೋಪಿಗಳು ಭಾಗಿಯಾಗಿದ್ದರು’ ಎಂದು ಪೊಲೀಸರು ಹೇಳಿದರು.

ಇಬ್ಬರ ಬಂಧನದಿಂದ 10 ಪ್ರಕರಣ ಪತ್ತೆ: ಸುಲಿಗೆ ಹಾಗೂ ದ್ವಿಚಕ್ರ ವಾಹನ ಕಳ್ಳತನ ಪ್ರಕರಣದಲ್ಲಿ ಆರೋಪಿಗಳಾದ ಮೊಹಮ್ಮದ್ ಜಬಿ ಹಾಗೂ ಜುನೈದ್‌ನನ್ನು ಹಲಸೂರು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿಗಳು ಮಾರಕಾಸ್ತ್ರ ಹಿಡಿದು ಓಡಾಡುತ್ತಿದ್ದರು. ದಾರಿಹೋಕರನ್ನು ಅಡ್ಡಗಟ್ಟಿ ಜೀವ ಬೆದರಿಕೆಯೊಡ್ಡಿ ಸುಲಿಗೆ ಮಾಡುತ್ತಿದ್ದರು. ಪುಲಕೇಶಿನಗರ, ಭಾರತಿನಗರ, ಹೆಬ್ಬಾಳ, ಕೆ.ಆರ್.ಪುರ, ಹೆಣ್ಣೂರು, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ಆರೋಪಿಗಳ ವಿರುದ್ಧ 10 ಪ್ರಕರಣಗಳು ದಾಖಲಾಗಿದ್ದವು. ‘ದ್ವಿಚಕ್ರ ವಾಹನ ಕದಿಯುತ್ತಿದ್ದ ಆರೋಪಿಗಳು, ಅದರಲ್ಲಿಯೇ ಸುತ್ತಾಡಿ ಸುಲಿಗೆ ಮಾಡುತ್ತಿದ್ದರು. ಬಂಧಿತರಿಂದ ₹5.50 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನ, 9 ಮೊಬೈಲ್, ಲ್ಯಾಪ್‌ಟಾಪ್ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

ಮನೆ ಬಳಿ ಆರೋಪಿ ಕರೆದೊಯ್ದ ಪೊಲೀಸರು: ಬಂಧಿತ ಆರೋಪಿಗಳು, ಪದೇ ಪದೇ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗುತ್ತಿದ್ದರು. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ಇರಲಿಲ್ಲ.

ಆರೋಪಿಗಳನ್ನು ಅವರ ಮನೆಗೆ ಕರೆದೊಯ್ದಿದ್ದ ಪೊಲೀಸರು, ಕುಟುಂಬದವರಿಗೆ ಮಾಹಿತಿ ನೀಡಿದರು. ಮನೆ ಬಳಿಯೇ ಆರೋಪಿಗಳನ್ನು ಸುತ್ತಾಡಿಸಿದರು. ‘ಸುಲಿಗೆ ಆರೋಪಿಗಳ ಬಗ್ಗೆ ಎಚ್ಚರಿಕೆ ವಹಿಸಿ’ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.

‘24 ಗಂಟೆ ಗಸ್ತು: 8 ನಿಮಿಷಗಳಲ್ಲಿ ಸ್ಪಂದನೆ’
‘ಬೆಂಗಳೂರಿನಲ್ಲಿ ಗಸ್ತು ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ರೂಪಿಸಲಾಗಿದೆ. ದಿನದ 24 ಗಂಟೆಯೂ ಪೊಲೀಸರು ಗಸ್ತು ತಿರುಗುತ್ತಿದ್ದು ನಿಯಂತ್ರಣ ಕೊಠಡಿಗೆ ಯಾವುದಾದರೂ ತುರ್ತು ಕರೆ ಬಂದರೆ ಪೊಲೀಸರು 8 ನಿಮಿಷಗಳ ಒಳಗೆ ಸ್ಥಳದಲ್ಲಿರುತ್ತಾರೆ’ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ಎನ್. ಸತೀಶ್‌ಕುಮಾರ್ ತಿಳಿಸಿದ್ದಾರೆ. ಸಿಬಿಡಿ ಪ್ರದೇಶದಲ್ಲಿ ಹೆಚ್ಚುತ್ತಿರುವ ಸುಲಿಗೆ ಹಾಗೂ ಹಲ್ಲೆ ಪ್ರಕರಣಗಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ನ. 4ರಂದು ಪ್ರಕಟವಾದ ‘ಗಸ್ತು ತಿರುಗದ ಪೊಲೀಸರು; ಹೆಚ್ಚಿದ ಸುಲಿಗೆ ಹಲ್ಲೆ ಕೃತ್ಯ’ ಶೀರ್ಷಿಕೆಯ ವರದಿಗೆ ಅವರು ಸ್ಪಷ್ಟೀಕರಣ ನೀಡಿದ್ದಾರೆ. ‘ಪ್ರತಿ ನಿತ್ಯವೂ ರಾತ್ರಿ 241 ಹೊಯ್ಸಳ ವಾಹನಗಳು 632 ದ್ವಿಚಕ್ರ ವಾಹನಗಳಲ್ಲಿ ಸುಮಾರು 2000 ಪೊಲೀಸರು ಗಸ್ತು ತಿರುಗುತ್ತಾರೆ. ಸುಮಾರು 10000 ಬೀಟ್ ಪಾಯಿಂಟ್‌ಗಳಿಗೆ ಭೇಟಿ ನೀಡುತ್ತಾರೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ‘ಸ್ಮಾಟ್ ಇ–ಬೀಟ್’ ‘ಗುಡ್‌ ಮಾರ್ನೀಂಗ್ ಬೀಟ್’ ಹಾಗೂ ‘ದಿಢೀರ್ ಬೀಟ್’ ಪರಿಚಯಿಸಲಾಗಿದೆ. ನಸುಕಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ಪ್ರತ್ಯೇಕವಾಗಿ 650 ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ’ ಎಂದಿದ್ದಾರೆ. ‘ನಿತ್ಯವೂ 1600 ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ. ತಂತ್ರಜ್ಞಾನದ ಸಹಾಯದಿಂದ ಅನುಮಾನಾಸ್ಪದ ವ್ಯಕ್ತಿಗಳ ಬೆರಳಚ್ಚು ಸಂಗ್ರಹಿಸಲಾಗುತ್ತಿದೆ. ನಗರದಲ್ಲಿ ಪೊಲೀಸರ ಕರ್ತವ್ಯದಲ್ಲಿ ಯಾವುದೇ ನಿರ್ಲಕ್ಷ್ಯ ಆಗಿಲ್ಲ. ಸಿಬ್ಬಂದಿ ಕೊರತೆ ಹಾಗೂ ಒತ್ತಡದ ನಡುವೆಯೂ ಪೊಲೀಸರು ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.