ADVERTISEMENT

ಆರ್‌ಬಿಐಗೆ ಜಮೆಯಾದ 328 ಖೋಟಾ ನೋಟು

ಎಸ್‌ಬಿಐ ಕರೆನ್ಸಿ ಚಸ್ಟ್‌ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2019, 20:15 IST
Last Updated 17 ನವೆಂಬರ್ 2019, 20:15 IST
   

ಬೆಂಗಳೂರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಹಾಗೂ ಇತರೆ ಬ್ಯಾಂಕ್‌ಗಳ ವ್ಯವಸ್ಥಾಪಕರು ರಿಸರ್ವ್ ಬ್ಯಾಂಕ್ ಆಫ್‌ ಇಂಡಿಯಾ (ಆರ್‌ಬಿಐ) ಕಚೇರಿಗೆ ಜಮೆ ಮಾಡಿದ್ದ ಹಣದ ಪೈಕಿ ₹ 32,800 ಮೌಲ್ಯದ ಖೋಟಾ ನೋಟುಗಳು ಪತ್ತೆ ಆಗಿವೆ.

ಜಮೆ ಆಗಿದ್ದ ಹಣವನ್ನು ಆರ್‌ಬಿಐ ಅಧಿಕಾರಿಗಳು ಯಂತ್ರದಲ್ಲಿ ತಪಾಸಣೆ ನಡೆಸಿದಾಗ ₹ 100 ಮುಖಬೆಲೆಯ 328 ಖೋಟಾ ನೋಟುಗಳು ಸಿಕ್ಕಿವೆ. ಆ ಬಗ್ಗೆ ಆರ್‌ಬಿಐ ವಿತರಣಾ ವಿಭಾಗದ ವ್ಯವಸ್ಥಾಪಕಿ ಲಕ್ಷ್ಮಿ ಅವರು ಹಲಸೂರು ಗೇಟ್‌ ಠಾಣೆಗೆ ದೂರು ನೀಡಿದ್ದಾರೆ.

‘ಎಸ್‌ಬಿಐ ಮಲ್ಲೇಶ್ವರ ಶಾಖೆ ಹಾಗೂ ಇತರೆ ಬ್ಯಾಂಕ್‌ಗಳ ಕರೆನ್ಸಿ ಚಸ್ಟ್‌ನವರು ಮಾರ್ಚ್‌ 1ರಿಂದ ಮಾರ್ಚ್ 31ರ ಅವಧಿಯಲ್ಲಿ ಆರ್‌ಬಿಐಗೆ ಹಣ ಜಮೆ ಮಾಡಿದ್ದರು. ಆ ಹಣದಲ್ಲೇ₹ 32,800 ಮೌಲ್ಯದ ಖೋಟಾ ನೋಟುಗಳು ಪತ್ತೆಯಾಗಿವೆ. ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಲಕ್ಷ್ಮಿ ಅವರು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ಪ್ರತಿ ವರ್ಷವೂ ದೂರು: ‘ಆರ್‌ಬಿಐ ಅಧಿಕಾರಿಗಳು, ಪ್ರತಿವರ್ಷವೂ ಆಂತರಿಕ ಪರಿಶೋಧನೆ ನಡೆಸುತ್ತಾರೆ. ಆ ವೇಳೆ ಖೋಟಾ ನೋಟು ಕಂಡುಬಂದರೆ ದೂರು ಕೊಡುತ್ತಾರೆ. ಅದೇ ರೀತಿ ಈ ವರ್ಷವೂ ಕೊಟ್ಟಿದ್ದಾರೆ’ ಎಂದು ಹಲಸೂರು ಗೇಟ್ ಪೊಲೀಸರು ಹೇಳಿದರು.

‘ನೋಟುಗಳ ನಕಲಿ ತಯಾರಿಕೆ ಅಥವಾ ನಕಲಿ ನೋಟುಗಳನ್ನು ಅಸಲಿಯಂತೆ ಬಳಸುವಿಕೆ (ಐಪಿಸಿ 489–ಬಿ) ಹಾಗೂ ನಕಲಿ ನೋಟು ಇಟ್ಟುಕೊಂಡ (ಐಪಿಸಿ 489–ಸಿ) ಆರೋಪದಡಿ ಎಸ್‌ಬಿಐ ಹಾಗೂ ಇತರೆ ಬ್ಯಾಂಕ್‌ಗಳ ಕರೆನ್ಸಿ ಚಸ್ಟ್‌ ವ್ಯವಸ್ಥಾಪಕರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.