ADVERTISEMENT

ಪೊಲೀಸರ ದಿಕ್ಕು ತಪ್ಪಿಸಲು 30 ಸಿಮ್ ಬಳಕೆ !

ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಅಶ್ಲೀಲ ಸಂದೇಶ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 19:39 IST
Last Updated 28 ಜೂನ್ 2019, 19:39 IST
ಸಯ್ಯದ್ ನಯಾಜ್
ಸಯ್ಯದ್ ನಯಾಜ್   

ಬೆಂಗಳೂರು: ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಅಶ್ಲೀಲ ಸಂದೇಶ, ಫೋಟೊ ಹಾಗೂ ವಿಡಿಯೊ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಸಯ್ಯದ್ ನಯಾಜ್ (36) ಎಂಬಾತನನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

‘ತಮಿಳುನಾಡಿನ ಹೊಸೂರು ನಿವಾಸಿಯಾದ ಸಯ್ಯದ್, ಒಬ್ಬರಿಂದ ಸೆಕೆಂಡ್ ಹ್ಯಾಂಡ್ ಮೊಬೈಲ್‌ ಖರೀದಿಸಿ ಮತ್ತೊಬ್ಬರಿಗೆ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದ. ಅಂಥ ಮೊಬೈಲ್‌ಗಳಲ್ಲಿ ಸಂಗ್ರಹವಾಗಿರುತ್ತಿದ್ದ ಮಹಿಳೆಯರ ನಂಬರ್‌ಗಳನ್ನು ಕದ್ದು ಕೃತ್ಯಕ್ಕೆ ಬಳಸಿಕೊಳ್ಳುತ್ತಿದ್ದ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಂಗಳೂರಿನ ಮಹಿಳೆಯೊಬ್ಬರಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿ ಫೇಸ್‌ಬುಕ್‌ನಲ್ಲೂ ಸ್ನೇಹಿತನಾಗಿದ್ದ ಆರೋಪಿ, ನಿರಂತರವಾಗಿ ಅಶ್ಲೀಲ ಫೋಟೊ ಹಾಗೂ ವಿಡಿಯೊ ಕಳುಹಿಸಲಾರಂಭಿಸಿದ್ದ. ಅದರಿಂದ ನೊಂದ ಮಹಿಳೆ, ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

ನಾನಾ ಹೆಸರಿನಲ್ಲಿ ಖಾತೆ ತೆರೆದಿದ್ದ: ‘ರಮೇಶ್‍ಕುಮಾರ್, ರಾಮ್‍ಕುಮಾರ್, ರಾಜೇಶ್‍ಕುಮಾರ್, ಸೈಯ್ಯದ್‍ ಅಸ್ಲಾಂ ಹಾಗೂ ವಿಜಯ್ ಶಾಂತಿ ಎಂಬ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಆರೋಪಿ ಸೈಯದ್, ಆ ಖಾತೆಯಿಂದಲೇ ಮಹಿಳೆಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದ’ ಎಂದು ಅಧಿಕಾರಿ ಹೇಳಿದರು.

‘ಆತನ ರಿಕ್ವೆಸ್ಟ್‌ನ್ನು ಮಹಿಳೆಯರು ಸ್ವೀಕರಿಸುತ್ತಿದ್ದರು. ತದನಂತರ ಚಾಟಿಂಗ್ ಮಾಡಲಾರಂಭಿಸುತ್ತಿದ್ದ ಆರೋಪಿ, ಅಶ್ಲೀಲ ಸಂದೇಶ ಹಾಗೂ ಫೋಟೊ ಕಳುಹಿಸಲಾರಂಭಿಸುತ್ತಿದ್ದ. ನಂತರ, ವಿಡಿಯೊ ಕರೆ ಮಾಡಿ ಕಿರುಕುಳ ನೀಡುತ್ತಿದ್ದ’ ಎಂದರು.

‘ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿರುವ ಕೆಲ ಮಹಿಳೆಯರ ಫೋಟೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುತ್ತಿದ್ದ ಆರೋಪಿ, ಅವರ ಹೆಸರಿನಲ್ಲೂ ನಕಲಿ ಖಾತೆ ತೆರೆದು ನಿರ್ವಹಣೆ ಮಾಡುತ್ತಿದ್ದ. ಆ ಖಾತೆಯಿಂದಲೂ ಹಲವು ಯುವತಿಯರಿಗೆ ರಿಕ್ವೆಸ್ಟ್ ಕಳುಹಿಸಿ ಸ್ನೇಹಿತನಾಗಿ ಕೃತ್ಯ ಎಸಗಿರುವ ಮಾಹಿತಿ ಇದೆ’ ಎಂದು ಹೇಳಿದರು.

40 ಮೊಬೈಲ್, 30 ಸಿಮ್ ಕಾರ್ಡ್ ಬಳಕೆ: ‘ಸೆಕೆಂಡ್ ಹ್ಯಾಂಡ್ ಮೊಬೈಲ್ ಮಾರಾಟ ಮಾಡುತ್ತಿದ್ದ ಆರೋಪಿ ಬಳಿ ನಿತ್ಯವೂ 10ಕ್ಕೂ ಹೆಚ್ಚು ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ಗಳು ಇರುತ್ತಿದ್ದವು. ಆ ಮೊಬೈಲ್‌ನಲ್ಲೇ ವಾಟ್ಸ್‌ ಆ್ಯಪ್ ಹಾಗೂ ಫೇಸ್‌ಬುಕ್‌ ಆ್ಯಪ್ ಬಳಸಿ ಮಹಿಳೆಯರನ್ನು ಸಂಪರ್ಕಿಸುತ್ತಿದ್ದ’ ಎಂದು ಅಧಿಕಾರಿ ಹೇಳಿದರು.

‘ಆತನ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಹುಡುಕಾಟ ಆರಂಭಿಸಿದ್ದೆವು. ಅದು ಗೊತ್ತಾಗುತ್ತಿದ್ದಂತೆ 40 ಮೊಬೈಲ್ ಹಾಗೂ 30 ಸಿಮ್‌ಕಾರ್ಡ್‌ಗಳನ್ನು ಬಳಸಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದ. ಒಂದೊಂದೇ ಸಿಮ್‌ ಕಾರ್ಡ್‌ ಬೆನ್ನತ್ತಿ ಹೋದಾಗ, ಅದನ್ನು ಬೇರೆಯರಿಗೆ ಮಾರಾಟ ಮಾಡಿ ಆರೋಪಿ ಎಸ್ಕೇಪ್ ಆಗುತ್ತಿದ್ದ.ಹೀಗಾಗಿ ಆತನ ಸುಳಿವು ಸಿಗುತ್ತಿರಲಿಲ್ಲ’ ಎಂದರು.

‘ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿದ್ದ ಸೈಬರ್ ಕ್ರೈಂ ಪೊಲೀಸರ ತಂಡ, ಮೊಬೈಲ್ ಸಹಾಯದಿಂದಲೇ ಆರೋಪಿಯ ಸುಳಿವು ಪತ್ತೆ ಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಅಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.