ADVERTISEMENT

ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವುದಾಗಿ ₹48 ಲಕ್ಷ ವಂಚನೆ: ನಕಲಿ ‘ಗುರೂಜಿ’ ಸೆರೆ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 15:14 IST
Last Updated 2 ಡಿಸೆಂಬರ್ 2025, 15:14 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಸಾರ್ವಜನಿಕರಿಗೆ ವಂಚಿಸುತ್ತಿದ್ದ ನಕಲಿ ‘ಗುರೂಜಿ’ಯನ್ನು ಜ್ಞಾನಭಾರತಿ ಠಾಣೆಯ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ADVERTISEMENT

ವಿಜಯ್ ಗುರೂಜಿ ಬಂಧಿತ ಆರೋಪಿ.

ಆರೋಪಿಗೆ ಸಹಕಾರ ನೀಡುತ್ತಿದ್ದ ಸಹಚರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಗೊತ್ತಾಗಿದೆ.

ಲೈಂಗಿಕ ಸಮಸ್ಯೆಗೆ ಶೀಘ್ರ ಪರಿಹಾರ ನೀಡುವುದಾಗಿ ನಂಬಿಸಿ, ಸಾಫ್ಟ್‌ವೇರ್ ಎಂಜಿನಿಯರ್‌ ತೇಜಸ್‌ ಎಂಬುವರಿಂದ ₹48 ಲಕ್ಷ ಪಡೆದು ವಂಚಿಸಿದ್ದ ಸಂಬಂಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ವಿಜಯ್ ಗುರೂಜಿ ಹಾಗೂ ವಿಜಯಲಕ್ಷ್ಮಿ ಆಯುರ್ವೇದಿಕ್‌ ಶಾಪ್‌ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದು ಗೊತ್ತಾದ ಮೇಲೆ ನಕಲಿ ‘ಗುರೂಜಿ’ ತಲೆಮರೆಸಿಕೊಂಡಿದ್ದ. ಆರೋಪಿಯ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು.

ದೂರಿನಲ್ಲಿ ಏನಿತ್ತು?:

ಲೈಂಗಿಕ ಸಮಸ್ಯೆಗೆ ‌ಕೆಂಗೇರಿಯ ಆಸ್ಪತ್ರೆಯಲ್ಲಿ ತೇಜಸ್ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಗೆ ಹೋಗಿ ಬರುವಾಗ ರಸ್ತೆಯ ಪಕ್ಕದ ಟೆಂಟ್ ಬಳಿ ಹಾಕಿದ್ದ ಲೈಂಗಿಕ ಸಮಸ್ಯೆಗೆ ಚಿಕಿತ್ಸೆ ಎಂಬ ಫಲಕ ನೋಡಿ, ಮೇ ತಿಂಗಳಲ್ಲಿ ಅಲ್ಲಿಗೆ ಭೇಟಿ ಕೊಟ್ಟಿದ್ದರು. ಟೆಂಟ್‍ನಲ್ಲಿದ್ದ ವ್ಯಕ್ತಿಯೊಬ್ಬ ವಿಜಯ್ ‘ಗುರೂಜಿ’ಯನ್ನು ಪರಿಚಯ ಮಾಡಿಕೊಟ್ಟಿದ್ದ ಎಂದು ಮೂಲಗಳು ಹೇಳಿವೆ.

ಬಳಿಕ ತೇಜಸ್‍ ಅವರನ್ನು ಪರೀಕ್ಷಿಸಿದ್ದ ವಿಜಯ್ ‘ಗುರೂಜಿ’, ಯಶವಂತಪುರದ ವಿಜಯಲಕ್ಷ್ಮಿ ಆಯುರ್ವೇದ ಔಷಧ ಅಂಗಡಿಯಲ್ಲಿ ‘ದೇವರಾಜ್ ಬೂಟಿ’ ಹೆಸರಿನ ಔಷಧ ಖರೀದಿಸಿ ಸೇವಿಸಬೇಕು. ಅದರ ಬೆಲೆ ಗ್ರಾಂಗೆ ₹1.60 ಲಕ್ಷ ಇದ್ದು, ಆ ಔಷಧ ಬೇರೆ ಕಡೆ ಸಿಗುವುದಿಲ್ಲ. ಅದನ್ನು ಹರಿದ್ವಾರದಿಂದ ತರಿಸಲಾಗಿದೆ. ನಗದು ಪಾವತಿಸಿ ಆ ಔಷಧ ಖರೀದಿಸಬೇಕು. ಅದರ ಖರೀದಿಗೆ ಯಾರನ್ನೂ ಜತೆಯಲ್ಲಿ ಕರೆದುಕೊಂಡು ಹೋಗಬಾರದು. ಬೇರೆ ವ್ಯಕ್ತಿಯನ್ನು ಜತೆಯಲ್ಲಿ ಕರೆದೊಯ್ದರೆ ಆ ಔಷಧಿಗೆ ಶಕ್ತಿ ಫಲಿಸುವುದಿಲ್ಲ ಎಂಬುದಾಗಿ ಷರತ್ತು ಹಾಕಿದ್ದ ಎಂದು ಪೊಲೀಸರು ತಿಳಿಸಿದರು.

ವಿಜಯ್ ‘ಗುರೂಜಿ’ ಸಲಹೆಯಂತೆ ತೇಜಸ್ ಹಲವು ಬಾರಿ ‘ದೇವರಾಜ್ ಬೂಟಿ’ ಮತ್ತು ‘ಭವನ ಬೂಟಿ’ ತೈಲ ಖರೀದಿಸಿದ್ದರು. ಬೇರೆ ಬೇರೆ ಔಷಧಗಳು ಹಾಗೂ ತೈಲಗಳ ಹೆಸರಿನಲ್ಲಿ ತೇಜಸ್‍ ಅವರಿಂದ ಹಂತ ಹಂತವಾಗಿ ₹48 ಲಕ್ಷ ವಸೂಲು ಮಾಡಲಾಗಿದೆ. ಬ್ಯಾಂಕ್ ಹಾಗೂ ಸ್ನೇಹಿತರಿಂದ ಸಾಲ ಪಡೆದು ಔಷಧಗಳನ್ನು ಖರೀದಿಸಿದ್ದರು. ಆದರೂ ಸಮಸ್ಯೆ ಪರಿಹಾರವಾಗದಿದ್ದಾಗ ವಿಜಯ್ ‘ಗುರೂಜಿ’, ‘ಇನ್ನೂ ಹೆಚ್ಚಿನ ಚಿಕಿತ್ಸೆಯ ಅಗತ್ಯ ಇದೆ. ಚಿಕಿತ್ಸೆ ಮುಂದುವರಿಸದಿದ್ದರೆ ಹೆಚ್ಚಿನ ಸಮಸ್ಯೆಯಾಗಿ ಜೀವಕ್ಕೆ ತೊಂದರೆ ಆಗುತ್ತದೆ’ ಎಂಬುದಾಗಿ ಹೆದರಿಸಿ ತೇಜಸ್‍ರಿಂದ ಮತ್ತೆ ಹಣ ಪೀಕಲು ಯತ್ನಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಬೆದರಿಕೆ ಹಾಕಿದ್ದ ಗುರೂಜಿ
ಗುರೂಜಿ ಸಲಹೆಯಂತೆ ತೆಗೆದುಕೊಂಡಿದ್ದ ಔಷಧದಿಂದ ಟೆಕಿಯ ಆರೋಗ್ಯ ಹದಗೆಟ್ಟಿತ್ತು. ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಬಳಿಕ, ತೇಜಸ್‌ ಅವರು ರಕ್ತ ಪರೀಕ್ಷೆ ಮಾಡಿಸಿಕೊಂಡಿ ದ್ದರು. ಆಗ, ಮೂತ್ರಪಿಂಡಕ್ಕೆ ಹಾನಿ ಆಗಿರು ವುದು ಪತ್ತೆ ಆಗಿತ್ತು. ಅದಾದ ಮೇಲೆ ದೂರು ನೀಡುವುದಾಗಿ ಹೇಳಿದ್ದಕ್ಕೆ ಗುರೂಜಿ ಬೆದರಿಕೆ ಹಾಕಿದ್ದ ಎಂದು ಮೂಲಗಳು ಹೇಳಿವೆ.

ಹಲವರಿಗೆ ವಂಚನೆ 

ವಿಜಯ್ ‘ಗುರೂಜಿ’ ರಸ್ತೆಬದಿ ಟೆಂಟ್ ಹಾಕಿಕೊಂಡು ಆಯುರ್ವೇದ ಔಷಧಗಳನ್ನು ಮಾರಾಟ ಮಾಡುತ್ತಿದ್ದ. ಮಂಡಿನೋವು, ಚರ್ಮದ ಕಾಯಿಲೆ ಹಾಗೂ ವಿಶೇಷವಾಗಿ ಲೈಂಗಿಕ ಸಮಸ್ಯೆಗಳಿಂದ
ಬಳಲುತ್ತಿದ್ದವರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ.

ಪರಿಹಾರದ ಆಸೆಯಿಂದ ಬರುತ್ತಿದ್ದ ಜನರಿಗೆ, ಮೂಲಿಕೆ ಹಾಗೂ ಪುಡಿಗಳ ರೂಪದಲ್ಲಿ ನಕಲಿ ಆಯುರ್ವೇದ ಔಷಧ ನೀಡಿ ವಂಚಿಸುತ್ತಿದ್ದ. ಆರೋಪಿ ಹಲವರಿಗೆ ವಂಚಿಸಿರುವ ಮಾಹಿತಿ ಲಭಿಸಿದೆ. ವಂಚನೆಗೆ ಒಳಗಾದ ಹಲವರು ಮರ್ಯಾದೆಗೆ ಅಂಜಿ ದೂರು ನೀಡಿಲ್ಲ. ಟೆಕಿ ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.