ADVERTISEMENT

ಟೋಲ್ ಸಿಬ್ಬಂದಿ ಬೆದರಿಸಿ ಓಡಾಟ: ಅಸಲಿಗೆ ಸಿಕ್ಕಿಬಿದ್ದ ‘ನಕಲಿ ಪೊಲೀಸಪ್ಪ’

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 23:30 IST
Last Updated 7 ಜುಲೈ 2025, 23:30 IST
ರವಿ 
ರವಿ    

ಬೆಂಗಳೂರು: ಟೋಲ್‌ ಹಾಗೂ ಇತರೆ ಸ್ಥಳಗಳಲ್ಲಿ ಪೊಲೀಸ್ ಸಿಬ್ಬಂದಿಯ ನಕಲಿ ಗುರುತಿನ ಚೀಟಿ ತೋರಿಸಿ ಸಿಬ್ಬಂದಿಯನ್ನು ಬೆದರಿಸಿ ಓಡಾಡುತ್ತಿದ್ದ ಆರೋಪಿಯನ್ನು ವಲಸೆ ವಿಭಾಗದ ಅಧಿಕಾರಿಗಳು ಹಾಗೂ ಪೀಣ್ಯ ಠಾಣೆಯ ಪೊಲೀಸರು ಪತ್ತೆಹಚ್ಚಿದ್ದಾರೆ.

ಖಚಿತ ಮಾಹಿತಿ ಆಧರಿಸಿ ಕರಿಓಬನಹಳ್ಳಿಯ ರವಿ ಎಂಬಾತನನ್ನು ಕೆಲವು ದಿನಗಳ ಹಿಂದೆ ಬಂಧಿಸಲಾಗಿತ್ತು. ಆರೋಪಿಗೆ ನ್ಯಾಯಾಲಯದಿಂದ ಜಾಮೀನು ಸಿಕ್ಕಿದ್ದು ಆತ ಬಿಡುಗಡೆ ಆಗಿದ್ದಾನೆ ಎಂದು ಪೊಲೀಸರು ಹೇಳಿದರು.

ರವಿ, ರೇಣುಕಾ ಶುಗರ್ಸ್​ನಲ್ಲಿ ಕ್ಷೇತ್ರಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದ.

ADVERTISEMENT

‘ಆರೋಪಿಗೆ ಪಿಎಸ್‌ಐ ಒಬ್ಬರ ಪರಿಚಯವಿತ್ತು. ಅವರ ಗುರುತಿನ ಚೀಟಿಯನ್ನು ಆರೋಪಿ ತೆಗೆದುಕೊಂಡಿದ್ದ. ಅದೇ ಮಾದರಿಯಲ್ಲಿ ನಕಲಿ ಐ.ಡಿ ಮಾಡಿಸಿಕೊಂಡು, ತನ್ನ ಫೋಟೊ ಅಂಟಿಸಿಕೊಂಡಿದ್ದ. ಟೋಲ್, ವಿಮಾನ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಸಿಬ್ಬಂದಿಯನ್ನು ಬೆದರಿಸಿ ಓಡಾಟ ನಡೆಸುತ್ತಿದ್ದ. ಯಾರೇ ಕೇಳಿದರೂ ‘ಏಯ್ ನಾನು ಪೊಲೀಸಪ್ಪ’ ಎಂಬುದಾಗಿ ಹೇಳುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ವಿಭಾಗದ ಅಧಿಕಾರಿಗಳ ಬಳಿಯೂ ರವಿ ನಕಲಿ ಗುರುತಿನ ಚೀಟಿ ತೋರಿಸಿದ್ದ. ಗುರುತಿನ ಚೀಟಿ ಸ್ಕ್ಯಾನ್ ಮಾಡಿದ್ದ ವಲಸೆ ವಿಭಾಗದ ಅಧಿಕಾರಿಗಳಿಗೆ ಅನುಮಾನ ಬಂದಿತ್ತು. ಅದು ನಕಲಿ ಕಾರ್ಡ್‌ ಎಂದು ಖಾತರಿಪಡಿಸಿಕೊಂಡು ಆತನನ್ನು ವಶಕ್ಕೆ ಪಡೆದುಕೊಂಡಿದ್ದರು. ಪೀಣ್ಯ ಪೊಲೀಸರು ಆತನನ್ನು ಬಂಧಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.