ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಹೋಟೆಲ್‌ನಲ್ಲಿ ಕೊಠಡಿ ಪಡೆದು ನಕಲಿ ನೋಟುಗಳನ್ನು ಮುದ್ರಣ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕ್ರಿಷ್ ಮಾಲಿ (23) ಬಂಧಿತ ಆರೋಪಿ.
ಕ್ರಿಷ್ ಮಾಲಿ ಅವರ ತಂದೆ ಉದ್ಯಮಿ. ಮನೆಯಲ್ಲಿ ಗಲಾಟೆ ಮಾಡಿಕೊಂಡು ಹೊರಬಂದಿದ್ದ ಆರೋಪಿ, ಆನ್‌ಲೈನ್ ಮೂಲಕ ಟಸ್ಕರ್‌ಟೌನ್‌ನಲ್ಲಿರುವ ಹೋಟೆಲ್‌ವೊಂದರಲ್ಲಿ ಕೊಠಡಿ ಬುಕ್ ಮಾಡಿದ್ದ. ಜೂನ್ 1ರಂದು ಹೋಟೆಲ್‌ಗೆ ಬಂದಿದ್ದ ಆರೋಪಿ, ಒಂದು ವಾರ ವಾಸ್ತವ್ಯ ಮಾಡಿದ್ದ. ತನ್ನ ಬಳಿಯಿರುವ ಹಣ ಖರ್ಚಾಗುತ್ತಿದ್ದಂತೆಯೇ ನಕಲಿ ನೋಟು ಮುದ್ರಣ ಮಾಡಲು ಸಂಚು ರೂಪಿಸಿದ್ದ. ಮುದ್ರಣಕ್ಕೆ ಪ್ರಿಂಟರ್, ಸ್ಕ್ಯಾನರ್‌ಗಳನ್ನು ಖರೀದಿಸಿ ಕೊಠಡಿಗೆ ತಂದಿದ್ದ. ಹೋಟೆಲ್ ರೂಂನಲ್ಲಿ ಇದ್ದುಕೊಂಡೇ ₹500 ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿದ್ದ. ಜೂನ್ 7ರಂದು ಮಧ್ಯಾಹ್ನ ಆರೋಪಿ ಕೊಠಡಿ ಖಾಲಿ ಮಾಡಿದ್ದ. ಹೋಟೆಲ್‌ಗೂ ನಕಲಿ ನೋಟು ನೀಡಿದ್ದ. ಇದು ಅಸಲಿ ನೋಟುಗಳಿರಬಹುದು ಎಂಬುದಾಗಿ ಹೋಟೆಲ್ ಸಿಬ್ಬಂದಿ ನಂಬಿದ್ದರು ಎಂದು ಮೂಲಗಳು ತಿಳಿಸಿವೆ.
ಹೋಟೆಲ್ ಕೊಠಡಿಯನ್ನು ಆರೋಪಿ ಖಾಲಿ ಮಾಡಿದ ಬಳಿಕ ಅಲ್ಲಿದ್ದ ತ್ಯಾಜ್ಯವನ್ನು ಸಿಬ್ಬಂದಿ ಬಿಬಿಎಂಪಿಯ ಕಸ ಸಂಗ್ರಹಿಸುವ ವಾಹನಕ್ಕೆ ಎಸೆದಿದ್ದರು. ಕಸದಲ್ಲಿ ನಕಲಿ ನೋಟುಗಳಿರುವುದನ್ನು ಪೌರ ಕಾರ್ಮಿಕರು ಪತ್ತೆ ಮಾಡಿ ಹೋಟೆಲ್ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಆರೋಪಿ ಹೋಟೆಲ್ ಬಿಲ್ ಪಾವತಿ ವೇಳೆ ನೀಡಿದ್ದ ನೋಟುಗಳನ್ನು ಪರಿಶೀಲಿಸಿದಾಗ ಅದು ನಕಲಿ ಎಂಬುದು ಗೊತ್ತಾಗಿತ್ತು ಎಂದು ಪೊಲೀಸರು ಹೇಳಿದರು. ನಂತರ, ಕಮರ್ಷಿಯಲ್ ಸ್ಟ್ರೀಟ್ ಠಾಣೆಗೆ ದೂರು ನೀಡಲಾಗಿತ್ತು.
ಹೋಟೆಲ್‌ನಲ್ಲಿ ಕೊಠಡಿಯನ್ನು ಬಾಡಿಗೆಗೆ ಪಡೆದುಕೊಳ್ಳುವಾಗ ಆರೋಪಿ ಕೊಟ್ಟಿದ್ದ ಆಧಾರ್‌ಕಾರ್ಡ್ ವಿಳಾಸ ಆಧರಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.