ಬೆಂಗಳೂರು: ಅರ್ಹತೆ ಹಾಗೂ ಪರವಾನಗಿ ಇಲ್ಲದಿದ್ದರೂ ಚಿಕಿತ್ಸೆ ನೀಡುವ ನಕಲಿ ವೈದ್ಯರ ಜಾಲ ರಾಜ್ಯದಲ್ಲಿ ಸಕ್ರಿಯವಾಗಿದೆ. ಈ ಜಾಲದ ವಿರುದ್ಧ ಆರೋಗ್ಯ ಇಲಾಖೆಯು ಕಳೆದೊಂದು ವರ್ಷ ನಡೆಸಿದ ಕಾರ್ಯಾಚರಣೆಯಲ್ಲಿ 256 ನಕಲಿ ವೈದ್ಯರು ಪತ್ತೆಯಾಗಿದ್ದಾರೆ.
ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳು, ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಹಾಗೂ ನಕಲಿ ವೈದ್ಯರ ಪತ್ತೆ ಕಾರ್ಯವನ್ನು ಇಲಾಖೆ ಚುರುಕುಗೊಳಿಸಿದೆ. ರಾಜ್ಯದ ವಿವಿಧೆಡೆ ಕಾನೂನು ಬಾಹಿರವಾಗಿ ವೈದ್ಯ ವೃತ್ತಿ ಕೈಗೊಂಡವರನ್ನು ಗುರುತಿಸಿ, ದಂಡ ವಿಧಿಸುವ ಜತೆಗೆ ಶಿಕ್ಷಿಸಲಾಗುತ್ತಿದೆ. ಇಷ್ಟಾಗಿಯೂ ರಾಜ್ಯದಾದ್ಯಂತ ನಕಲಿ ವೈದ್ಯರು ಕಾನೂನು ಬಾಹಿರವಾಗಿ ಕಾರ್ಯನಿರ್ವಹಿಸುತ್ತಿರುವುದು ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ದೃಢಪಟ್ಟಿದೆ. ಅಲೋಪಥಿ, ಹೋಮಿಯೋಪಥಿ, ಆಯುರ್ವೇದ, ನ್ಯಾಚುರೋಪಥಿ, ಯುನಾನಿ ಹಾಗೂ ಸಿದ್ಧ ವೈದ್ಯರು ಸೇರಿದ್ದಾರೆ.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆಯಡಿ (ಕೆಪಿಎಂಇ) ಆರೋಗ್ಯಾಧಿಕಾರಿಗಳ ತಂಡವು ವಿವಿಧ ಆಸ್ಪತ್ರೆಗಳು, ಕ್ಲಿನಿಕ್‌ಗಳು ಹಾಗೂ ಪ್ರಯೋಗಾಲಯಗಳಿಗೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದೆ. ಈ ಪರಿಶೀಲನೆ ವೇಳೆ ವೈದ್ಯಕೀಯ ವೃತ್ತಿ ನಡೆಸಲು ಅಗತ್ಯ ವಿದ್ಯಾರ್ಹತೆ ಇಲ್ಲದಿದ್ದರೂ ಪರವಾನಗಿ ಹೊಂದಿರದಿದ್ದರೂ ಕ್ಲಿನಿಕ್‌ಗಳು ನಡೆಸುತ್ತಿರುವುದು ಅಧಿಕಾರಿಗಳ ತಂಡದ ಗಮನಕ್ಕೆ ಬಂದಿದೆ. ಅಂತಹವರನ್ನು ನಕಲಿ ವೈದ್ಯರ ಪಟ್ಟಿಗೆ ಸೇರಿಸಲಾಗಿದೆ. 2024–25ನೇ ಸಾಲಿಗೆ ಪತ್ತೆಯಾದ ನಕಲಿ ವೈದ್ಯರಿಗೆ ಸಂಬಂಧಿಸಿದಂತೆ, 89 ಕ್ಲಿನಿಕ್‌ಗಳನ್ನು ಮುಚ್ಚಿಸಲಾಗಿದೆ.
154 ವೈದ್ಯರಿಗೆ ದಂಡ:
ಅಧಿಕಾರಿಗಳು ನಡೆಸಿದ ಈ ಕಾರ್ಯಾಚರಣೆ ವೇಳೆ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರದಿರುವುದು, ಅಕ್ರಮವಾಗಿ ಕ್ಲಿನಿಕ್ ನಡೆಸುತ್ತಿರುವುದು, ನಕಲಿ ಪ್ರಮಾಣ ಪತ್ರ ಹೊಂದಿರುವುದು ದೃಢಪಟ್ಟಿದೆ. ನಾಲ್ಕು ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ನಕಲಿ ವೈದ್ಯರಿಗೆ ಕಡಿವಾಣ ಹಾಕುವ ಸಂಬಂಧ ಇಲಾಖೆಯು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಆಯುಷ್ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಕೀಲರು ಒಳಗೊಂಡ ವಿಶೇಷ ತಂಡವನ್ನು ರಚಿಸಿದೆ. ಈ ತಂಡವು ಕಾರ್ಯಾಚರಣೆ ನಡೆಸಿ, ಪ್ರತಿ ತಿಂಗಳು ಸರ್ಕಾರಕ್ಕೆ ವರದಿ ಸಲ್ಲಿಸುತ್ತಿದೆ.
‘ಇತ್ತೀಚೆಗೆ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗುತ್ತಿದೆ. ಅಂತಹವರ ವಿರುದ್ಧ ಕಾನೂನಿನ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳು, ಕ್ಲಿನಿಕ್‌ಗಳು ತಮ್ಮ ಕೆಪಿಎಂಇ ನೋಂದಣಿ ಸಂಖ್ಯೆ, ಆಸ್ಪತ್ರೆ ಮತ್ತು ಮಾಲೀಕರ ಹೆಸರನ್ನು ಕಟ್ಟಡದ ಮುಂಭಾಗ ಕಡ್ಡಾಯವಾಗಿ ಪ್ರದರ್ಶಿಸಬೇಕು’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.
₹5 ಲಕ್ಷ ದಂಡ ಜೈಲು ಶಿಕ್ಷೆ
ಆರೋಗ್ಯ ಇಲಾಖೆ ಪ್ರಕಾರ ವೈದ್ಯಕೀಯ ಮಂಡಳಿಗಳಲ್ಲಿ (ಆಲೋಪಥಿ ಆಯುರ್ವೇದ ಹೋಮಿಯೋಪಥಿ) ನೋಂದಾಯಿತರಾದವರು ಮಾತ್ರ ವೈದ್ಯಕೀಯ ವೃತ್ತಿ ನಡೆಸಲು ಅವಕಾಶವಿದೆ. ನೋಂದಾಯಿಸದೆ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಿದಲ್ಲಿ ಗರಿಷ್ಠ ₹5 ಲಕ್ಷ ದಂಡ ಹಾಗೂ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಕೆಪಿಎಂಇ ಕಾಯ್ದೆಯಡಿ ನೋಂದಾಯಿಸದೆ ವೈದ್ಯಕೀಯ ಸಂಸ್ಥೆಯನ್ನು ನಡೆಸಿದರೆ ಗರಿಷ್ಠ ₹50 ಸಾವಿರ ದಂಡದ ಜತೆಗೆ ತಕ್ಷಣವೇ ಸಂಸ್ಥೆಯನ್ನು ಮುಚ್ಚಿಸಲಾಗುತ್ತದೆ.
ಉತ್ತರ ಕಲ್ಯಾಣ ಕರ್ನಾಟಕದಲ್ಲಿ ಅಧಿಕ
ನಕಲಿ ವೈದ್ಯರ ಪತ್ತೆಗೆ ಸಂಬಂಧಿಸಿದಂತೆ ನಡೆಸಿದ ಕಾರ್ಯಾಚರಣೆಯಲ್ಲಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿ ನಕಲಿ ವೈದ್ಯರು ಪತ್ತೆಯಾಗಿದ್ದಾರೆ. ಕಲಬುರಗಿಯಲ್ಲಿ ಒಂದೇ ವರ್ಷ ನೂರಕ್ಕೂ ಅಧಿಕ ನಕಲಿ ವೈದ್ಯರ ಮೇಲೆ ಕ್ರಮಕೈಗೊಳ್ಳಲಾಗಿದೆ. ಚಾಮರಾಜನಗರ ಬಳ್ಳಾರಿ ಹಾವೇರಿಯಲ್ಲಿಯೂ ಪತ್ತೆಯಾದ ನಕಲಿ ವೈದ್ಯರ ಸಂಖ್ಯೆ ಎರಡಂಕಿ ದಾಟಿದೆ.
ನಕಲಿ ವೈದ್ಯರ ಹಾವಳಿಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಮಟ್ಟದಲ್ಲಿಯೂ ಸಮಿತಿ ರಚಿಸಿ ನಕಲಿ ವೈದ್ಯರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆದಿನೇಶ್ ಗುಂಡೂರಾವ್, ಆರೋಗ್ಯ ಸಚಿವ
ನಕಲಿ ವೈದ್ಯರು ರೋಗಿಗಳ ಜೀವದ ಜತೆಗೆ ಆಟವಾಡುವ ಜತೆಗೆ ವೈದ್ಯರಿಗೂ ಕೆಟ್ಟ ಹೆಸರು ತರುತ್ತಾರೆ. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕುಡಾ.ಶ್ರೀನಿವಾಸ್ ಎಸ್. , ಭಾರತೀಯ ವೈದ್ಯಕೀಯ ಸಂಘದ ಕರ್ನಾಟಕ ಶಾಖೆಯ ನಿಕಟಪೂರ್ವ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.