ADVERTISEMENT

ಅಣ್ಣನ ಹೆಸರಿನಲ್ಲಿ ನಕಲಿ ದಾಖಲೆ: ತಮ್ಮನಿಗೆ 3 ವರ್ಷ ಜೈಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2023, 15:47 IST
Last Updated 2 ನವೆಂಬರ್ 2023, 15:47 IST
ಜೈಲು
ಜೈಲು   

ಬೆಂಗಳೂರು: ಅಣ್ಣನ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಆಸ್ತಿಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಂಡಿದ್ದ ಪ್ರಕರಣದಲ್ಲಿ ತಮ್ಮನಿಗೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಿ ನಗರದ 10ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ವಿವೇಕನಗರದ ನಿವಾಸಿ ಓಂಪ್ರಕಾಶ್ ನಕಲಿ ದಾಖಲೆ ಸೃಷ್ಟಿಸಿದ್ದ ಸಂಬಂಧ 2007ರಲ್ಲಿ ಹಲಸೂರು ಠಾಣೆಗೆ ದೂರು ನೀಡಿದ್ದರು. ಇದೇ ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರಾದ ಅಂಜಲಿ ಶರ್ಮ ವಿ.ಎಸ್. ಅವರು ನಡೆಸಿದ್ದರು. ಹಿರಿಯ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಬಿ.ವೈ. ಕೆಂಬಾವಿ ಹಾಗೂ ವಿ. ವಸಂತಾ ವಾದಿಸಿದ್ದರು.

ಏನಿದು ಪ್ರಕರಣ: ‘ದೂರುದಾರ ಓಂಪ್ರಕಾಶ್ ಹಾಗೂ ಆರೋಪಿ ಜೈಶೀಲ್, ಅಣ್ಣ– ತಮ್ಮ. ತಂದೆಯ ಹೆಸರಿನಲ್ಲಿ ಆಸ್ಟಿನ್‌ ಟೌನ್‌ನಲ್ಲಿ ಮನೆ ಇತ್ತು. ತಂದೆ ಮಾಡಿಟ್ಟಿದ್ದ ವಿಲ್ ಪ್ರಕಾರ ಮನೆಯಲ್ಲಿ ಇಬ್ಬರೂ ಸಮಪಾಲು ಪಡೆಯಬೇಕಿತ್ತು. ಮನೆಯನ್ನು ಪೂರ್ತಿಯಾಗಿ ತನ್ನದಾಗಿಸಿಕೊಳ್ಳಲು ತಮ್ಮ ಯೋಚಿಸಿದ್ದ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಸಂಬಂಧಿ ವೇಲು ಹಾಗೂ ಬಾಮೈದ ರಾಜೇಂದ್ರ ಜೊತೆ ಸೇರಿ ಜೈಶೀಲ್ ಸಂಚು ರೂಪಿಸಿದ್ದ. ಬಾಮೈದನನ್ನೇ ತನ್ನ ಅಣ್ಣನೆಂದು ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ. ನೋಂದಣಾಧಿಕಾರಿ ಕಚೇರಿಗೂ ಬಾಮೈದನನ್ನು ಕರೆದೊಯ್ದು ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ.’

‘ಮನೆಯ ಸೇಲ್‌ಡೀಡ್‌ನಲ್ಲಿದ್ದ ಅಣ್ಣನ ಹೆಸರಿನ ಮುಂದೆ ಬಾಮೈದನ ಫೋಟೊ ಇತ್ತು. ಕೆಲ ದಿನಗಳ ನಂತರ, ನಕಲಿ ದಾಖಲೆ ಸೃಷ್ಟಿಸಿದ್ದ ವಿಷಯ ದೂರುದಾರರಿಗೆ ಗೊತ್ತಾಗಿತ್ತು. ಅವಾಗಲೇ ಅವರು ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಹಲಸೂರು ಠಾಣೆಯ ಅಂದಿನ ಪಿಎಸ್‌ಐ ಮಹಮ್ಮದ್, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಆರೋಪಿ ವೇಲು ಈಗಾಗಲೇ ತೀರಿಕೊಂಡಿದ್ದಾರೆ. ಪ್ರಕರಣದಲ್ಲಿ ಜೈಶೀಲ್ ಹಾಗೂ ಬಾಮೈದ ರಾಜೇಂದ್ರನಿಗೆ ಇದೀಗ 3 ವರ್ಷಗಳ ಜೈಲು ಶಿಕ್ಷೆ ಆಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.