ADVERTISEMENT

ಪೊಲೀಸ್ ಸಮವಸ್ತ್ರದಲ್ಲಿ ಹಣ ಸುಲಿಗೆ: ನಕಲಿ ಪಿಎಸ್ಐ ಸೇರಿ ನಾಲ್ವರ ಸೆರೆ

₹45 ಸಾವಿರ ನಗದು ವಶ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2025, 0:20 IST
Last Updated 15 ಡಿಸೆಂಬರ್ 2025, 0:20 IST
ಮಲ್ಲಿಕಾರ್ಜುನ್
ಮಲ್ಲಿಕಾರ್ಜುನ್   

ಬೆಂಗಳೂರು: ಪೊಲೀಸ್ ಸಮವಸ್ತ್ರ ಧರಿಸಿ ಮನೆಗೆ ಹೋಗಿ ಯುವಕನನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ನಕಲಿ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ (ಪಿಎಸ್‍ಐ) ಸೇರಿ ನಾಲ್ಕು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮತ್ತೀಕೆರೆಯ ಮಲ್ಲಿಕಾರ್ಜುನ್, ಸ್ನೇಹಿತರಾದ ಪ್ರಮೋದ್, ವಿನಯ್ ಮತ್ತು ಬಾಗಲಗುಂಟೆ ನಿವಾಸಿ ಋತ್ವಿಕ್ ಎಂಬುವರನ್ನು ಬಂಧಿಸಿ, ₹45 ಸಾವಿರ ನಗದು, ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಋತ್ವಿಕ್ ಹಾಗೂ ದೂರುದಾರ ನವೀನ್ ಸ್ನೇಹಿತರು. ವಿದ್ಯಾರಣ್ಯಪುರದ ಬಳಿಯ ನರಸೀಪುರ ಲೇಔಟ್ ನಿವಾಸಿ ನವೀನ್ ಬಳಿ ಹಣ ಹಾಗೂ ಚಿನ್ನಾಭರಣ ಇರುವುದನ್ನು ತಿಳಿದಿದ್ದ ಋತ್ವಿಕ್, ಇತರೆ ಆರೋಪಿಗಳ ಜತೆ ಸೇರಿ ಸುಲಿಗೆಯ ಸಂಚು ರೂಪಿಸಿದ್ದ. ಆರೋಪಿಗಳು ಡಿಸೆಂಬರ್ 7ರ ರಾತ್ರಿ ನರಸೀಪುರ ಲೇಔಟ್‍ನಲ್ಲಿನ ನವೀನ್‍ ಅವರ ಮನೆಗೆ ಹೋಗಿ, ತಾವು ಕ್ರೈಂ ಪೊಲೀಸರೆಂದು ಪರಿಚಯಿಸಿಕೊಂಡು, ‘ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದೀಯಾ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದೀಯಾ ಎಂಬ ಮಾಹಿತಿಯಿದೆ. ಮನೆಯನ್ನು ಶೋಧ ಮಾಡಬೇಕು’ ಎಂದು ನವೀನ್‍ಗೆ ಹೆದರಿಸಿ, ಮನೆ ಶೋಧ ನಡೆಸಿದ್ದರು.

ADVERTISEMENT

ಅಲ್ಲದೆ, ಲಾಠಿ ಮತ್ತು ಕಬ್ಬಿಣದ ಸಲಾಕೆಯಿಂದ ನವೀನ್‍ಗೆ ಥಳಿಸಿದ್ದರು. ನಂತರ, ಬಂಧಿಸದಿರಲು ಹಣ ಕೊಡಬೇಕೆಂದು ಹೆದರಿಸಿ ಅಲ್ಮೇರಾದಲ್ಲಿದ್ದ ₹53 ಸಾವಿರ ಮತ್ತು ಪರ್ಸ್‍ನಲ್ಲಿದ್ದ ₹2 ಸಾವಿರ ನಗದು ಕಿತ್ತುಕೊಂಡಿದ್ದರು. ನವೀನ್‍ ಅವರ ಬ್ಯಾಂಕ್ ಖಾತೆಯಲ್ಲಿದ್ದ ₹87 ಸಾವಿರ ಅನ್ನು ಯುಪಿಐ ಮೂಲಕ ತಮ್ಮ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.

ಆರೋಪಿಗಳು ಪ್ರಮೋದ್‍ನ ಬ್ಯಾಂಕ್ ಖಾತೆಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಫೋನ್‌ ಪೇ ಮೂಲಕ ನವೀನ್‍ರಿಂದ ಹಣ ಹಾಕಿಸಿಕೊಂಡಿದ್ದರು. ಈ ಮೊಬೈಲ್ ಸಂಖ್ಯೆಯ ಜಾಡು ಹಿಡಿದು ತನಿಖೆ ಮಾಡಿದಾಗ ಆರೋಪಿ ಸಿಕ್ಕಿಬಿದ್ದ. ನಂತರ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ, ಇತರೆ ಆರೋಪಿಗಳ ಸುಳಿವು ಸಿಕ್ಕಿತು ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರಮೋದ್
ವಿನಯ್
ಋತ್ವಿಕ್

ಪಿಎಸ್‌ಐ ಪರೀಕ್ಷೆಯಲ್ಲಿ ಫೇಲ್

ಬಳ್ಳಾರಿ ಜಿಲ್ಲೆಯ ಸಿರಗುಪ್ಪದ ಮಲ್ಲಿಕಾರ್ಜುನ್ ಬಿ.ಎ. ಪದವೀಧರ. ಪಿಎಸ್‍ಐ ಹುದ್ದೆಯ ಆಕಾಂಕ್ಷಿಯಾಗಿದ್ದ. ಎರಡು ಬಾರಿ ಪರೀಕ್ಷೆ ಬರೆದರೂ ಉತ್ತೀರ್ಣರಾಗಿರಲಿಲ್ಲ. ಆದರೂ ತಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಬೆಂಗಳೂರಿನಲ್ಲಿ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಆಗಿ ಕೆಲಸ ಮಾಡುತ್ತಿದ್ದೇನೆ ಎಂದು ಊರಿನವರಿಗೆ ಹೇಳಿದ್ದ. ಸಬ್‌ಇನ್‌ಸ್ಪೆಕ್ಟರ್‌ ಸಮವಸ್ತ್ರ ಧರಿಸಿ ಜನರನ್ನು ಬೆದರಿಸಿ ಸುಲಿಗೆ ಮಾಡಲು ನಿರ್ಧರಿಸಿದ್ದ ಮಲ್ಲಿಕಾರ್ಜುನ್ ಅದಕ್ಕೆ ತಕ್ಕಂತೆ ಶೂ ಬೆಲ್ಟ್ ಖರೀದಿಸಿದ್ದ. ಜತೆಗೆ ಕಾಮಾಕ್ಷಿಪಾಳ್ಯದ ಟೇಲರ್ ಬಳಿ ಸಮವಸ್ತ್ರ ಹೊಲೆಸಿದ್ದ. ಅಲ್ಲದೆ ಪಿಎಸ್‍ಐನಂತೆ ಸಮವಸ್ತ್ರ ಬೆಲ್ಟ್ ಶೂ ಧರಿಸಿ ಲಾಠಿ ಹಿಡಿದು ಫೋಟೊ ಶೂಟ್ ಮಾಡಿಸಿದ್ದ ಎಂದು ಪೊಲೀಸರು ತಿಳಿಸಿದರು. ಆರೋಪಿಗಳು ಹಣ ಸಂಪಾದನೆಗಾಗಿ ಸುಲಿಗೆಗೆ ಇಳಿದಿದ್ದರು. ತುಮಕೂರು ರಸ್ತೆಯ ಔಷಧ ಉತ್ಪಾದನಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ್ ಮತ್ತೀಕೆರೆಯಲ್ಲಿ ವಾಸವಾಗಿದ್ದ. ಪ್ರಮೋದ್ ಮತ್ತು ಋತ್ವಿಕ್ ಆಟೊ ಚಾಲಕರು. ವಿನಯ್ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.