ADVERTISEMENT

ಭೂಸುಧಾರಣೆ ಕಾಯ್ದೆ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡದಿರಿ

ರಾಜ್ಯಪಾಲರಿಗೆ ರೈತ ಸಂಘಟನೆಗಳ ಮುಖಂಡರಿಂದ ಪತ್ರ

​ಪ್ರಜಾವಾಣಿ ವಾರ್ತೆ
Published 27 ಜೂನ್ 2020, 19:42 IST
Last Updated 27 ಜೂನ್ 2020, 19:42 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು:ಭೂಸುಧಾರಣಾ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ತಿದ್ದುಪಡಿ ಮಾಡದಂತೆ ಆಗ್ರಹಿಸಿ, ರೈತ ಸಂಘಟನೆಗಳ ಮುಖಂಡರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಶನಿವಾರ ಪತ್ರ ಬರೆದಿದ್ದಾರೆ.

ಭೂಸುಧಾರಣಾ ಕಾಯ್ದೆ ತಿದ್ದುಪಡಿ ಮಸೂದೆ ಜೊತೆಗೆ, ಎಪಿಎಂಸಿ, ವಿದ್ಯುತ್, ಅಗತ್ಯ ಸರಕುಗಳ ತಿದ್ದುಪಡಿ ಮಸೂದೆಗಳಿಗೆ ಅನುಮೋದನೆ ನೀಡಲು ರಾಜ್ಯ ಸರ್ಕಾರ ಸಿದ್ಧವಾಗಿದೆ. ಈ ಎಲ್ಲ ಮಸೂದೆಗಳು ರೈತ ವಿರೋಧಿಯಾಗಿವೆ ಎಂದು ಮುಖಂಡರು ದೂರಿದ್ದಾರೆ.

ಸಣ್ಣ ಕೃಷಿಕರು, ಮಹಿಳಾ ರೈತರು ಹಾಗೂ ಭೂರಹಿತ ಕಾರ್ಮಿಕರು ಮತ್ತು ಇತರ ವರ್ಗಕ್ಕೆ ಈ ತಿದ್ದುಪಡಿಯಿಂದ ಅನ್ಯಾಯವಾಗಲಿದೆ. ದೇಶದ ಜನಸಂಖ್ಯೆಯಲ್ಲಿ ಶೇ 70ರಷ್ಟು ಜನ ಕೃಷಿಕರಾಗಿದ್ದಾರೆ. ಇವರಲ್ಲಿ ಶೇ 51ರಷ್ಟು ಜನ ನೇರ ವ್ಯವಸಾಯದಲ್ಲಿ ತೊಡಗಿದ್ದಾರೆ. ಭೂ ಸುಧಾರಣೆ ಎನ್ನುವುದು ಸೂಕ್ಷ್ಮ ವಿಷಯ. ಇಲ್ಲಿನ ಯಾವುದೇ ಬದಲಾವಣೆಯು ಬಡಗಿಗಳು, ಕುಂಬಾರರು, ನೇಕಾರರು ಹಾಗೂ ಕೃಷಿ ಕಾರ್ಮಿಕರ ಜೀವನದ ಮೇಲೂ ಪರಿಣಾಮ ಬೀರುತ್ತವೆ.

ADVERTISEMENT

ಯಾರು ಬೇಕಾದರೂ ಕೃಷಿ ಭೂಮಿ ಖರೀದಿಸಲು ತಿದ್ದುಪಡಿಯು ಅವಕಾಶ ನೀಡುವುದರಿಂದ ಉಳ್ಳವರು ಮಾತ್ರ ಜಮೀನಿನ ಒಡೆಯರಾಗುತ್ತಾರೆ. ಐದು ಮತ್ತು ಅದಕ್ಕಿಂತ ಕಡಿಮೆ ಸದಸ್ಯರು ಇರುವ ಕುಟುಂಬವೊಂದು 108 ಎಕರೆಯವರೆಗೆ, ಐವರಿಗಿಂತ ಹೆಚ್ಚು ಸದಸ್ಯರು ಕುಟುಂಬವೊಂದು 216 ಎಕರೆ ಕೃಷಿ ಭೂಮಿ ಖರೀದಿಸಲು ಅವಕಾಶ ನೀಡಲಾಗುತ್ತದೆ. ಇದರಿಂದ ಸಣ್ಣ ಹಿಡುವಳಿದಾರರು, ಹಣ ಇಲ್ಲದವರು ಭೂಮಿಯನ್ನು ಕಳೆದುಕೊಳ್ಳುವ ಅಪಾಯ ಇದೆ ಎಂದು ರೈತ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದು, ರೈತರ ಜೀವನದ ಪ್ರಶ್ನೆಯಾಗಿರುವ ಈ ಸುಗ್ರೀವಾಜ್ಞೆಗೆ ಅನುಮೋದನೆ ನೀಡಲು ರಾಜ್ಯಪಾಲರು ಅಂಕಿತ ಹಾಕಬಾರದು ಎಂದು ಒತ್ತಾಯಿಸಿದ್ದಾರೆ.

ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಚುಕ್ಕಿ ನಂಜುಂಡಸ್ವಾಮಿ, ಜಿ.ಸಿ. ಬೈರಾರೆಡ್ಡಿ, ಕುರುಬೂರು ಶಾಂತಕುಮಾರ್, ರಂಗಕರ್ಮಿ ಪ್ರಸನ್ನ, ಮಹಿಮಾ ಪಟೇಲ್‌ ಮತ್ತಿತರರು ಪತ್ರಕ್ಕೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.