
ದಾಬಸ್ ಪೇಟೆ: ‘ಕೃಷಿಯಲ್ಲಿ ಮಣ್ಣು ಮತ್ತು ನೀರು ಅತ್ಯಮೂಲ್ಯ. ಈ ಎರಡೂ ಕಲುಷಿತವಾಗದಂತೆ ನಮ್ಮ ರೈತರು ನೋಡಿಕೊಳ್ಳಬೇಕು. ಸರ್ಕಾರದಿಂದ ಕೃಷಿ ಭಾಗ್ಯ ಯೋಜನೆಯಡಿ ಸೌಲಭ್ಯ ಸಿಗಲಿದ್ದು, ರೈತರು ಅದನ್ನು ಬಳಸಿಕೊಳ್ಳಬೇಕು’ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಪಂಕಜಾ ಹೇಳಿದರು.
ದಾಬಸ್‌ಪೇಟೆಯಲ್ಲಿ ಆಯೋಜಿಸಿದ್ದ ‘ರೈತ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.
‘ಸರ್ಕಾರ ಅಭಿವೃದ್ಧಿ ಹೆಸರಲ್ಲಿ ರೈತರ ಫಲವತ್ತಾದ ಕೃಷಿ ಜಮೀನು ಕಬಳಿಸುತ್ತಿದೆ. ರೈತರ ಜಮೀನಿಗೆ ಉತ್ತಮ ಬೆಲೆಯೂ ಸಿಗುತ್ತಿಲ್ಲ. ಜಮೀನು ಕಳೆದುಕೊಳ್ಳುವ ರೈತರ ಹಿತ ಕಾಯುವ ಕೆಲಸವನ್ನು ಸರ್ಕಾರ ಮಾಡಬೇಕು’ ಎಂದು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಆರ್.ಚನ್ನೇಗೌಡ ಒತ್ತಾಯಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹನುಮಂತರಾಯ ಮಾತನಾಡಿ, ‘ರೈತರು ಸಮಗ್ರ ಕೃಷಿಯನ್ನು ಅಳವಡಿಸಿಕೊಂಡಾಗ ಆರ್ಥಿಕವಾಗಿ ಸದೃಢರಾಗಲು ಸಾಧ್ಯ’ ಎಂದರು.
ಕೃಷಿ, ಮೀನುಗಾರಿಕೆ, ತೋಟಗಾರಿಕೆ, ರೇಷ್ಮೆ ಇಲಾಖೆಗಳು ಮಳಿಗೆ ತೆರೆದು, ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಉತ್ತಮ ರೈತರನ್ನು ಸನ್ಮಾನಿಸಲಾಯಿತು.
ಜಿಕೆವಿಕೆಯ ಕೃಷಿ ವಿಜ್ಞಾನಿ ಸುರೇಶ್, ಪ್ರಭಾರ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ರಾಘವೇಂದ್ರ, ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಹೊನ್ನಸಿದ್ದಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.