ADVERTISEMENT

ಗ್ರಾಮಗಳಿಗೆ ಬಂಡವಾಳ ಹರಿವು ಆರ್ಥಿಕ ಹಿಂಜರಿತ ನಿವಾರಣೆ: ಶಾಸಕ ಎನ್‌.ಮಹೇಶ್‌ ಸಲಹೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2019, 20:15 IST
Last Updated 13 ಅಕ್ಟೋಬರ್ 2019, 20:15 IST
ವಿಚಾರ ಸಂಕಿರಣದಲ್ಲಿ ಪ್ರೊ.ರಾಮಾಂಜನೇಯಲು ಹಾಗೂ ಶಾಸಕ ಎನ್‌.ಮಹೇಶ್‌ ಪರಸ್ಪರ ಕೈಕುಲುಕಿದರು. ಬಿವಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ಮಹೇಶ್ ದಾಸ್ ಹಾಗೂ ಸಹ ಪ್ರಾಧ್ಯಾಪಕಿ ಶೈಲಜಾ ಇದ್ದರು –‍ಪ್ರಜಾವಾಣಿ ಚಿತ್ರ
ವಿಚಾರ ಸಂಕಿರಣದಲ್ಲಿ ಪ್ರೊ.ರಾಮಾಂಜನೇಯಲು ಹಾಗೂ ಶಾಸಕ ಎನ್‌.ಮಹೇಶ್‌ ಪರಸ್ಪರ ಕೈಕುಲುಕಿದರು. ಬಿವಿಎಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ಮಹೇಶ್ ದಾಸ್ ಹಾಗೂ ಸಹ ಪ್ರಾಧ್ಯಾಪಕಿ ಶೈಲಜಾ ಇದ್ದರು –‍ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮಾಡುವುದರಿಂದದೇಶದಲ್ಲಿ ಎದುರಾಗಿರುವ ಆರ್ಥಿಕ ಹಿಂಜರಿತವನ್ನು ತಡೆಯಬಹುದು’ ಎಂದು ಶಾಸಕ ಎನ್‌.ಮಹೇಶ್‌ ಅಭಿಪ್ರಾಯಪಟ್ಟರು.

ಬಹುಜನ ವಿದ್ಯಾರ್ಥಿ ಸಂಘವು (ಬಿವಿಎಸ್‌) ಭಾನುವಾರ ಆಯೋಜಿಸಿದ್ದ ‘ಭಾರತದ ಆರ್ಥಿಕ ಹಿಂಜರಿತ; ಕಾರಣ–ಪರಿಣಾಮ–ಪರಿಹಾರ’ ಕುರಿತು ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ಪ್ರತಿ ಗ್ರಾಮದಲ್ಲಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ ಹಾಗೂ ಹಿಂದುಳಿದ ಸಮುದಾಯಗಳ ತಲಾ ಹತ್ತು ಮಂದಿ ಯುವಜನರಿಗೆ ಸರ್ಕಾರ ಕನಿಷ್ಠ ₹5 ಲಕ್ಷ ಸಾಲ ಸೌಲಭ್ಯ ನೀಡಿ, ಅವರಿಗೆ ಸ್ವಯಂ ಉದ್ಯೋಗ ಕಲ್ಪಿಸಿದರೆ ಆರ್ಥಿಕವಾಗಿ ಮುನ್ನಡೆ ಸಾಧಿಸಬಹುದು’ ಎಂದರು.

ADVERTISEMENT

‘ದೇಶದಲ್ಲಿ ಕೃಷಿ ಕ್ಷೇತ್ರ ಹೆಚ್ಚು ಉದ್ಯೋಗ ಸೃಷ್ಟಿಸುತ್ತದೆ. ರಾಷ್ಟ್ರೀಯ ನಿವ್ವಳ ಆದಾಯಕ್ಕೆ ಶೇ 53ರಷ್ಟು ಕೊಡುಗೆ ನೀಡುತ್ತಿದೆ. ಆದರೆ, ಆಳುವ ಸರ್ಕಾರಗಳು ಅಂದಿನಿಂದಲೂ ಕೃಷಿಯನ್ನು ಕಡೆಗಣಿಸುತ್ತಲೇ ಬಂದಿರು
ವುದು ವಿಪರ್ಯಾಸ’ ಎಂದು ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ರಾಮಾಂಜನೇಯಲು,‘ಕಾರ್ಮಿಕರು ದೇಶದ ಅಭಿವೃದ್ಧಿಗೆ ಮೂಲ ಕಾರಣಕರ್ತರು.ಚೀನಾ ತನ್ನ ಕಾರ್ಮಿಕ ಶಕ್ತಿಯನ್ನು ಹಾಗೂ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಅಭಿವೃದ್ಧಿ ಸಾಧಿಸಿದೆ. ಭಾರತಕ್ಕೆ ಅದಕ್ಕಿಂತಲೂ ಹೆಚ್ಚಿನ ಸಾಮರ್ಥ್ಯವಿದೆ.ಆದರೆ,ಸರ್ಕಾರಗಳು ಕಾರ್ಮಿಕ ಶಕ್ತಿಯನ್ನು ದಮನ ಮಾಡುತ್ತಿವೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ದೇಶದ ಶೇ 98 ಮಂದಿಗೆ ವೃತ್ತಿಪರ ತರಬೇತಿ ಇಂದಿಗೂ ಸಿಗುತ್ತಿಲ್ಲ. ಇದರಿಂದಲೇ ಅಭಿವೃದ್ಧಿಯಲ್ಲಿ ಕುಂಠಿತವಾಗುತ್ತಿದೆ. ಸರ್ಕಾರಗಳು ವೃತ್ತಿಪರ ತರಬೇತಿ ನೀಡುವ ಕುರಿತು ಚಿಂತನೆ ನಡೆಸುವ ಅಗತ್ಯ ಇದೆ’ ಎಂದರು.

*
ದೇಶದಲ್ಲಿ ಕಾರ್ಮಿಕರ ಬಗ್ಗೆ ಹಾಗೂ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿದವರಿಗೆ ಎಡಪಂಥೀಯ ಎಂಬ ಹಣೆಪಟ್ಟಿ ಕಟ್ಟುತ್ತಾರೆ.
-ಎನ್‌.ಮಹೇಶ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.