ADVERTISEMENT

ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸಿದ ಕೇಂದ್ರ ಸರ್ಕಾರಿ ನೌಕರರ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 15:42 IST
Last Updated 18 ಜನವರಿ 2026, 15:42 IST
<div class="paragraphs"><p>ಎಫ್‌ಐಆರ್</p></div>

ಎಫ್‌ಐಆರ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಮಂಡಳಿ (ಐಸಿಎಫ್​ಆರ್​ಇ) ನಡೆಸುವ ವಿವಿಧ ಹುದ್ದೆಗಳ ಪರೀಕ್ಷೆಗಳಲ್ಲಿ ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಯಿಸಿ ಹಾಗೂ ನಕಲಿ ದಾಖಲಾತಿ ಸಲ್ಲಿಸಿ ಕೆಲಸ ಗಿಟ್ಟಿಸಿಕೊಂಡಿದ್ದ ಏಳು ಮಂದಿ ಕೇಂದ್ರ ಸರ್ಕಾರಿ ನೌಕರರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಐಸಿಎಫ್​ಆರ್​ಇ ನಿರ್ದೇಶಕ ಡಾ. ಶಕ್ತಿಸಿಂಗ್ ಚೌಹಾಣ್ ಅವರು ನೀಡಿದ ದೂರು ಆಧರಿಸಿ ಎಂಟಿಎಸ್ ನೌಕರರಾದ ದಿನೇಶ್, ಸುಧೀರ್, ಪ್ರಿನ್ಸ್, ಸೋನು, ಪ್ರವೀಣ್, ರಾಜ್ ಕುಮಾರ್ ಹಾಗೂ ಅರಣ್ಯ ರಕ್ಷಕ ಸುನೀಲ್ ಕುಮಾರ್ ವಿರುದ್ಧ ಎಫ್ಐಆರ್‌ ದಾಖಲಿಸಿಕೊಂಡು,ತನಿಖೆ ಕೈಗೊಳ್ಳಲಾಗಿದೆ.

‘ಐಸಿಎಫ್​ಆರ್​ಇ ವತಿಯಿಂದ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಮಲ್ಟಿ ಟಾಸ್ಕಿಂಗ್ ಸ್ಟಾಫ್ (ಎಂಟಿಎಸ್) ಹಾಗೂ ಅರಣ್ಯ ರಕ್ಷಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿತ್ತು. ಇದರಂತೆ 2019, 2022 ಹಾಗೂ 2023ರಲ್ಲಿ ಪರೀಕ್ಷೆ ಬರೆದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡಿದ್ದರು.

2025ರಲ್ಲಿ ನೇಮಕಗೊಂಡ ಸರ್ಕಾರಿ ಉದ್ಯೋಗಿಗಳ ದಾಖಲೆ ನೈಜತೆ ಪರಿಶೀಲಿಸಲು ಸೂಚಿಸಲಾಗಿತ್ತು. ಪರಿಶೀಲನೆ ವೇಳೆ ನಾಲ್ಕು ಮಂದಿ ನೌಕರರ ಬದಲಾಗಿ ಬೇರೆಯವರು ಪರೀಕ್ಷೆ ಬರೆದಿರುವುದು ಕಂಡುಬಂದಿತ್ತು. ನೇಮಕದ ವೇಳೆ ಸಂಗ್ರಹಿಸಲಾಗಿದ್ದ ದಾಖಲಾತಿಯಲ್ಲಿರುವ ಸಹಿಗೂ ಪರೀಕ್ಷೆ ವೇಳೆ ಮಾಡಿದ ಸಹಿಗೂ ವ್ಯತ್ಯಾಸ ಇರುವುದು ಕಂಡುಬಂದಿತ್ತು. ಎಫ್ಎಸ್ಎಲ್ ವರದಿಯಲ್ಲಿ ಇದು ದೃಢವಾಗಿತ್ತು. ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಪರಿಶೀಲಿಸಿದಾಗ ಬೇರೆ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವುದು ಕಂಡುಬಂದಿತ್ತು’ ಎಂದು ಚೌಹಾಣ್ ದೂರಿನಲ್ಲಿ ತಿಳಿಸಿದ್ದಾರೆ.

ಆರೋಪಿಗಳ ಪೈಕಿ ದಿನೇಶ್ 2019ರಲ್ಲಿ ಎಂಟಿಎಸ್ ಗಿ ನೇಮಕಗೊಂಡಿದ್ದರು. ಸುನಿಲ್ ಕುಮಾರ್ ಯಾದವ್‌ 2023ರಲ್ಲಿ ಉದ್ಯೋಗಕ್ಕೆ ಸೇರಿದ್ದರು. ಉಳಿದವರು 2022ರಲ್ಲಿ ನೇಮಕಾತಿ ಹೊಂದಿದ್ದರು. ತಲೆಮರೆಸಿಕೊಂಡಿರುವ ಆರೋಪಿಗಳ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.