ADVERTISEMENT

ಅಪಘಾತ ಮಾಡಿರುವುದಾಗಿ ನಂಬಿಸಿ ವೃದ್ಧನಿಂದ ಹಣ ಸುಲಿಗೆ: ವ್ಯಕ್ತಿಯ ವಿರುದ್ಧ FIR

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 15:56 IST
Last Updated 21 ಜೂನ್ 2025, 15:56 IST
ಜಮೀಲ್
ಜಮೀಲ್   

ಬೆಂಗಳೂರು: ಅಪಘಾತ ಮಾಡಿರುವುದಾಗಿ ನಂಬಿಸಿ ವಯೋವೃದ್ಧ ಚಾಲಕನಿಂದ ಹಣ ಸುಲಿಗೆ ಮಾಡುತ್ತಿದ್ದ ವ್ಯಕ್ತಿಯ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಶಾಂತಿನಗರದ ಭಂಗಿಯಪ್ಪ ಗಾರ್ಡನ್ ನಿವಾಸಿ 78 ವರ್ಷದ ಚಂದ್ರಶೇಖರ್ ಅವರ ದೂರಿನ ಮೇರೆಗೆ ಆರೋಪಿ ಜಮೀಲ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.

ಜೂನ್ 2ರಂದು ಎಂ.ಜಿ.ರಸ್ತೆಯಲ್ಲಿ ಕಾರಿನಲ್ಲಿ ಬರುವಾಗ ಹಿಂಬದಿಯಿಂದ ಬಂದ ವ್ಯಕ್ತಿಯು, ‘ನಿಮ್ಮ ಕಾರು ನನ್ನ ಸ್ಕೂಟರ್​ಗೆ ತಾಗಿದೆ. ಇದರಿಂದ ನನ್ನ ತಮ್ಮನಿಗೆ ಗಾಯವಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಕಂಪನಿಯೊಂದರಲ್ಲಿ ಮಾಸಿಕ ₹37 ಸಾವಿರ ವೇತನ ಪಡೆಯುತ್ತಿದ್ದು, ‌‌ಮೂರು ತಿಂಗಳು ಚಿಕಿತ್ಸೆ ಕೊಡಿಸಬೇಕಿದೆ. ₹1 ಲಕ್ಷ ಹಣ ನೀಡುವಂತೆ ಸುಳ್ಳು ಹೇಳಿ ಬೆದರಿಕೆ ಹಾಕಿದ್ದ’ ಎಂದು ದೂರುದಾರರು ತಿಳಿಸಿದ್ದಾರೆ.

ADVERTISEMENT

‘ಕಾರಿನ ಡ್ಯಾಶ್ ಬೋರ್ಡ್​ನಲ್ಲಿದ್ದ ₹2,500 ನಗದು ಕಸಿದುಕೊಂಡ. ಬಳಿಕ ಹೆಚ್ಚು ಹಣ ನೀಡುವಂತೆ ಪೀಡಿಸಿದ್ದರಿಂದ ಎಟಿಎಂನಿಂದ ತೆಗೆದಿದ್ದ ₹3 ಸಾವಿರ ಹಣವನ್ನು ಸುಲಿಗೆ ಮಾಡಿ ಪರಾರಿಯಾಗಿದ್ದ’ ಎಂದು ಚಂದ್ರಶೇಖರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಆರೋಪಿ ವಿರುದ್ಧ 16 ಪ್ರಕರಣ ದಾಖಲು: ಅಪಘಾತ ಮಾಡಿರುವುದಾಗಿ ನಂಬಿಸಿ 68 ವರ್ಷದ ವೃದ್ಧರೊಬ್ಬರನ್ನು ಬೆದರಿಸಿ ₹1 ಲಕ್ಷ ಹಣ ಸುಲಿಗೆ ಮಾಡಿದ್ದ ಪ್ರಕರಣ ಸಂಬಂಧ ಬನಶಂಕರಿ ಪೊಲೀಸರು ಜನವರಿಯಲ್ಲಿ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಜಾಮೀನು ಪಡೆದ ಬಳಿಕ ಜಮೀಲ್ ಮತ್ತೆ ಕೃತ್ಯ ಮುಂದುವರೆಸಿದ್ದಾನೆ.

ಮೈಸೂರಿನ ರಾಜೇಂದ್ರನಗರದ ನಿವಾಸಿ ಜಮೀಲ್, 2018ರಿಂದ ಅಪರಾಧ ಕೃತ್ಯದಲ್ಲಿ ಭಾಗಿಯಾಗಿದ್ದ. ಮೈಸೂರು, ಮಂಡ್ಯ, ಶ್ರೀರಂಗಪಟ್ಟಣ, ಮದ್ದೂರು ರಾಮನಗರ ಹಾಗೂ ಬೆಂಗಳೂರು ನಗರ ಸೇರಿದಂತೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬನಶಂಕರಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಜಾಮೀನು ಪಡೆದಿರುವ ಆರೋಪಿಯು ಈವರೆಗೂ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ. ಜಾಮೀನು ರದ್ದು ಕೋರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಬನಶಂಕರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.