
ಎಫ್‌ಐಆರ್
ಬೆಂಗಳೂರು: ಚಿತ್ರ ನಿರ್ದೇಶಕ ಪ್ರೇಮ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ನಿರ್ಮಾಪಕ ಕನಕಪುರ ಆರ್.ಶ್ರೀನಿವಾಸ್ ವಿರುದ್ಧ ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿರ್ಮಾಪಕ ಶ್ರೀನಿವಾಸ್, ಇತ್ತೀಚೆಗೆ ಸಿನಿಮಾ ಸಂಬಂಧಿತ ಕಾರ್ಯಕ್ರಮದಲ್ಲಿ ಪ್ರೇಮ್ ಅವರನ್ನು ಅವಹೇಳನ ಮಾಡಿದ್ದರು. ಪ್ರೇಮ್ ಸಾಕಷ್ಟು ನಿರ್ಮಾಪಕರನ್ನು ಹಾಳು ಮಾಡಿದ್ದಾರೆ ಎಂದು ಸಾರ್ವಜನಿಕವಾಗಿ ಆರೋಪ ಮಾಡಿದ್ದ ಶ್ರೀನಿವಾಸ್, ಹಲವು ಚಿತ್ರ ನಟರ ವರ್ತನೆ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಪ್ರೇಮ್, ಶ್ರೀನಿವಾಸ್ ವಿರುದ್ಧ ದೂರು ಕೊಟ್ಟಿದ್ದರು. ಶ್ರೀನಿವಾಸ್ ವಿರುದ್ಧ ಸಾರ್ವಜನಿಕ ಶಾಂತಿಭಂಗ, ಉದ್ದೇಶಪೂರ್ವಕ ಅವಮಾನ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಪ್ರೇಮ್ ದೂರಿನ ಸಾರಾಂಶ: ‘ಚಿತ್ರ ನಿರ್ದೇಶಕನಾದ ನಾನು ಸಣ್ಣಪುಟ್ಟ ಚಲನಚಿತ್ರಗಳಲ್ಲಿ ನಟಿಸಿಕೊಂಡು ಹಾಗೂ ಹಲವು ಸಿನಿಮಾಗಳ ನಿರ್ದೇಶನ ಮಾಡಿ ಹಂತಹಂತವಾಗಿ ಬೆಳೆದಿದ್ದೇನೆ. ನನ್ನ ನಿರ್ದೇಶನದ ಚಲನಚಿತ್ರಗಳು ದೇಶಾದ್ಯಂತ ಬಿಡುಗಡೆಯಾಗಿವೆ. ಈ ಮೂಲಕ ನನ್ನದೇ ಆದ ಜನಪ್ರಿಯತೆ ಹಾಗೂ ಗೌರವ ಸಂಪಾದಿಸಿಕೊಂಡು ಸಮಾಜದಲ್ಲಿ ಒಳ್ಳೆಯ ನಿರ್ದೇಶಕನಾಗಿ ಗೌರವಯುತ ಜೀವನ ನಡೆಸುತ್ತಿದ್ದೇನೆ. ಆದರೆ, ನಿರ್ಮಾಪಕ ಆರ್.ಶ್ರೀನಿವಾಸ್ ಅಲಿಯಾಸ್ ಕನಕಪುರ ಶ್ರೀನಿವಾಸ್ ಎಂಬುವರು ತಮ್ಮ ಸಿನಿಮಾ ಬಿಡುಗಡೆಯ ಪತ್ರಿಕಾಗೋಷ್ಠಿಯಲ್ಲಿ ನನ್ನನ್ನು ವೈಯಕ್ತಿಕವಾಗಿ ಗುರಿಯಾಗಿಸಿ ಸಾರ್ವಜನಿಕ ವೇದಿಕೆಯಲ್ಲಿ ಅವಾಚ್ಯವಾಗಿ ನಿಂದಿಸಿದ್ದಾರೆ’ ಎಂದು ಪ್ರೇಮ್ ಪೊಲೀಸರಿಗೆ ದೂರು ಕೊಟ್ಟಿದ್ದರು.
‘ಸಾರ್ವಜನಿಕವಾಗಿ ನನಗೆ ನಿಂದಿಸಿ ಗೌರವಯುತ ವೃತ್ತಿ ಜೀವನಕ್ಕೆ ಧಕ್ಕೆ ತಂದಿರುವ ಹಾಗೂ ಮಾನಹಾನಿ ಮಾಡಿರುವ ಶ್ರೀನಿವಾಸ್‍ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪ್ರೇಮ್ ದೂರಿನಲ್ಲಿ ಕೋರಿದ್ದರು.
‘ಪ್ರೇಮ್ ಊರಿನಲ್ಲಿ ಎಮ್ಮೆ, ಕುರಿ ಮೇಯಿಸುತ್ತಿದ್ದಿದ್ದು ಗೊತ್ತಿದೆ. ಪ್ರೇಮ್, ನಿರ್ಮಾಪಕರ ತಲೆ ಹೊಡೆದು ನೂರಾರು ಕೋಟಿ ಆಸ್ತಿ ಮಾಡಿ ಆರಾಮಾಗಿದ್ದಾರೆ. ಆತ ಸಿನಿಮಾ ಮಾಡಿದ ಯಾವೊಬ್ಬ ನಿರ್ಮಾಪಕನೂ ಉದ್ಧಾರ ಆಗಿಲ್ಲ’ ಎಂದು ಶ್ರೀನಿವಾಸ್ ನಿರ್ದೇಶಕ ಪ್ರೇಮ್ ವಿರುದ್ಧ ಗಂಭೀರ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.