ADVERTISEMENT

ಹೆದ್ದಾರಿಯಲ್ಲಿ ಗಲಾಟೆ: ಅನಂತ್‌ ಕುಮಾರ್ ಹೆಗಡೆ ವಿರುದ್ಧ ಎಫ್‌ಐಆರ್‌

ಕಾರು ಚಾಲಕ, ಭದ್ರತಾ ಸಿಬ್ಬಂದಿಗೆ ಷರತ್ತು ಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 16:17 IST
Last Updated 24 ಜೂನ್ 2025, 16:17 IST
ಅನಂತ್ ಕುಮಾರ್ ಹೆಗಡೆ
ಅನಂತ್ ಕುಮಾರ್ ಹೆಗಡೆ   

ಬೆಂಗಳೂರು: ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ–4ರ ದಾಬಸ್‌ಪೇಟೆ ಸಮೀಪದ ಹಳೇ ನಿಜಗಲ್‌ ಬಳಿ ಸೋಮವಾರ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಅನಂತ್‌ ಕುಮಾರ್ ಹೆಗಡೆ (ಎ–1), ಅವರ ಭದ್ರತಾ ಸಿಬ್ಬಂದಿ ಶ್ರೀಧರ್‌ (ಎ–2) ಹಾಗೂ ಕಾರು ಚಾಲಕ ಮಹೇಶ್ (ಎ–3) ವಿರುದ್ಧ ದಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಹಾಲೇನಹಳ್ಳಿಯ ನಿವಾಸಿ, ಗಾಯಾಳು ಸೈಫ್‌ ಖಾನ್‌ ಅವರು ನೀಡಿದ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಶ್ರೀಧರ್ ಹಾಗೂ ಮಹೇಶ್ ಅವರನ್ನು ಬಂಧಿಸಿದ್ದರು. ಆರೋಪಿಗಳನ್ನು ಮಂಗಳವಾರ ಮಧ್ಯಾಹ್ನ ನೆಲಮಂಗಲದ ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ನ್ಯಾಯಾಲಯವು ಇಬ್ಬರಿಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಭದ್ರತಾ ಸಿಬ್ಬಂದಿ ಹಾಗೂ ಕಾರು ಚಾಲಕನ ಪರವಾಗಿ ವಕೀಲ ನಾಗೇಂದ್ರ ವಾದ ಮಂಡಿಸಿದರು.

ADVERTISEMENT

‘ನೋಟಿಸ್ ನೀಡದೇ ಇಬ್ಬರನ್ನೂ ಬಂಧಿಸಲಾಗಿದೆ. ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಬಂದ ತಕ್ಷಣ ಠಾಣೆಗೆ ಕರೆದೊಯ್ಯಲಾಗಿತ್ತು. ಎಫ್ಐಆರ್ ದಾಖಲಾಗುವ ಮುನ್ನವೇ ಬಂಧನ ತೋರಿಸಲಾಗಿದೆ’ ಎಂದು ನಾಗೇಂದ್ರ ಅವರು ನ್ಯಾಯಾಲಯದ ಗಮನಕ್ಕೆ ತಂದರು.

ಪ್ರತಿ ವಾದ ಮಂಡಿಸಿದ ಸರ್ಕಾರಿ ವಕೀಲ, ‘ಹಲ್ಲೆ ಮಾಡಿರುವುದಕ್ಕೆ ಸಾಕ್ಷ್ಯ ಸಿಕ್ಕಿದ್ದರಿಂದಲೇ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನ್ಯಾಯಾಧೀಶರ ಗಮನಕ್ಕೆ ತಂದರು. ವಾದ–ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಇಬ್ಬರಿಗೂ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದರು.

‘ತುಮಕೂರಿನಲ್ಲಿ ಮದುವೆ ಸಮಾರಂಭಕ್ಕೆ ಹೋಗಿ, ಇನ್ನೋವಾ ಕಾರಿನಲ್ಲಿ ವಾಪಸ್‌ ಬರುತ್ತಿದ್ದೆವು. ಕಾರಿನಲ್ಲಿ ಏಳು ಮಂದಿ ಇದ್ದೆವು. ಹಳೇ ನಿಜಗಲ್ ಬಳಿ ಬರುತ್ತಿದ್ದಾಗ, ಹಿಂದಿನಿಂದ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬಂದ ಕಾರಿನ ಚಾಲಕ, ನಮ್ಮ ಕಾರನ್ನು ನಿಲ್ಲಿಸುವಂತೆ ಹೇಳಿದರು. ಕಾರು ನಿಲುಗಡೆ ಮಾಡುತ್ತಿದ್ಧಂತೆಯೇ ಮುಖಕ್ಕೆ ಗುದ್ದಿದರು. ಮತ್ತೊಬ್ಬ ವ್ಯಕ್ತಿ ನಮ್ಮನ್ನು ಕಾರಿನಿಂದ ಹೊರಗೆ ಎಳೆದುಕೊಂಡು ಹಲ್ಲೆ ನಡೆಸಿದರು. ಇದರಿಂದ ಸಲ್ಮಾನ್‌ ಖಾನ್‌ ಅವರ ಮೂರು ಹಲ್ಲುಗಳು ಮುರಿದಿವೆ’ ಎಂದು ಸೈಫ್‌ ಖಾನ್ ನೀಡಿದ ದೂರು ಆಧರಿಸಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಅನಂತ್‌ ಕುಮಾರ್ ಹೆಗಡೆ ಅವರು ಕಾರಿನಲ್ಲಿ ಇದ್ದರು. ಅವರು ಕರೆದ ತಕ್ಷಣವೇ ಉಳಿದವರು ಬಂದು ನಮ್ಮ ಮೇಲೆ ಹಲ್ಲೆ ಮಾಡಿದರು. ನಮ್ಮ ತಾಯಿ ಮೇಲೆ ಅನಂತ್‌ ಕುಮಾರ್‌ ಹಲ್ಲೆ ನಡೆಸಿದರು. ಭದ್ರತಾ ಸಿಬ್ಬಂದಿ ಪಿಸ್ತೂಲ್‌ ತೋರಿಸಿ ಜೀವ ಬೆದರಿಕೆ ಹಾಕಿದರು’ ಎಂದು ದೂರು ನೀಡಿದ್ದಾರೆ.

ಪಿಸ್ತೂಲ್‌ ಹಿಡಿದುಕೊಂಡಿದ್ದ ಭದ್ರತಾ ಸಿಬ್ಬಂದಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.