ಬೆಂಗಳೂರು: ಜನ್ಮ ದಿನಾಂಕ ಸಂಬಂಧ ನಕಲಿ ದಾಖಲೆಗಳನ್ನು ನೀಡಿ ಹುದ್ದೆ ಗಿಟ್ಟಿಸಿಕೊಂಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸ್ ಠಾಣೆ ಪಿಎಸ್‌ಐ ಕಾಶಿಲಿಂಗೇಗೌಡ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ನಗರ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಸ್.ಟಿ.ಚಂದ್ರಶೇಖರ್ ಅವರ ದೂರಿನ ಮೇರೆಗೆ ಕಾಶಿಲಿಂಗೇಗೌಡ ವಿರುದ್ಧ ಪ್ರಕರಣ ದಾಖಲಾಗಿದೆ.
‘ಗೃಹ ಇಲಾಖೆಯಿಂದ 2017-18 ರಲ್ಲಿ ಪಿ.ಎಸ್.ಐ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಗರಿಷ್ಠ ವಯೋಮಿತಿಯು 2018ರ ಮಾರ್ಚ್ 12ಕ್ಕೆ 30 ವರ್ಷ ಮೀರಿರಬಾರದು ಎಂಬುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು. ಕಾಶಿಲಿಂಗೇಗೌಡ ಅವರ ಜನ್ಮ ದಿನಾಂಕ 1987ರ ಏಪ್ರಿಲ್ 15 ಆಗಿತ್ತು. ವಯೋಮಿತಿಯ ಅನ್ವಯ ಪಿ.ಎಸ್.ಐ. ಹುದ್ದೆಗೆ ಅರ್ಜಿ ಸಲ್ಲಿಸಲು ಅರ್ಹರಲ್ಲದಿದ್ದರೂ ಸಣಬ ಗ್ರಾಮದ ಅಂಗನವಾಡಿ ಕೇಂದ್ರದ 1987-88 ಮತ್ತು 1988-89ನೇ ಸಾಲಿನ ಚುಚ್ಚುಮದ್ದಿನ ರಿಜಿಸ್ಟರ್‌ನಲ್ಲಿನ ಕೆಲ ಮಾಹಿತಿಯನ್ನು ಅದಲು ಬದಲು ಮಾಡಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಬಳಿಕ ಕುಣಿಗಲ್ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ತನ್ನ ಜನ್ಮದಿನಾಂಕ 1988ರ ಏಪ್ರಿಲ್ 15 ಎಂಬುದಾಗಿ ಖಾಸಗಿ ದಾವೆ ಹೂಡಿದ್ದರು. ತನ್ನ ವಯೋಮಿತಿಗೆ ಸಂಬಂಧಿಸಿದಂತೆ ನಕಲಿ ದಾಖಲಾತಿಗಳನ್ನು ಕೋರ್ಟ್‌ಗೆ ಸಲ್ಲಿಸಿದ್ದರು. ಈ ಮೂಲಕ 1988ರ ಏಪ್ರಿಲ್15 ಎಂದು ತಿದ್ದುಪಡಿ ಮಾಡುವಂತೆ ಡಿಕ್ರಿ ಆದೇಶವನ್ನು ಪಡೆದುಕೊಂಡು, ಜನ್ಮ ದಿನಾಂಕದ ನಕಲಿ ದಾಖಲೆಗಳ ಮೂಲಕ ಪಿ.ಎಸ್.ಐ. ಹುದ್ದೆಗೆ ನೇಮಕವಾಗಿದ್ದಾರೆ’ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಪ್ರಕರಣ ಬಯಲಿಗೆ ಬಂದಿದ್ದು: ‘ಕಾಶಿಲಿಂಗೇಗೌಡ ಅವರು 2013 ರಿಂದ 2018ರ ವರೆಗೆ ಪಿ.ಎಸ್.ಐ. ಹುದ್ದೆಗೆ ಅರ್ಜಿ ಹಾಕಿದ್ದು, 2013 ರಿಂದ 2017ರ ವರೆಗೆ ನೀಡಿರುವ ಜನ್ಮ ದಿನಾಂಕ ಮತ್ತು 2018ರಲ್ಲಿ ನೀಡಿದ ಜನ್ಮ ದಿನಾಂಕ ವ್ಯತ್ಯಾಸವಿದೆ ಎಂದು ಆರೋಪಿಸಲಾಗಿತ್ತು. ಅಮೃತೂರು ಹೋಬಳಿಯ ಸಣಬ ಗ್ರಾಮದ ತೀವ್ರಗತಿಯ ಚುಚ್ಚುಮದ್ದು ಕಾರ್ಯಕ್ರಮದ ರಿಜಿಸ್ಟರ್‌ನಲ್ಲಿನ ಮಾಹಿತಿಯನ್ನು ಪರಿಶೀಲಿಸಿದ್ದ ವೇಳೆ ಅವರ ಜನ್ಮ ದಿನಾಂಕ 1987ರ ಏಪ್ರಿಲ್ 5 ಎಂಬುದು ದೃಢಪಟ್ಟಿತ್ತು. ಹೀಗಾಗಿ ಕಾಶಿಲಿಂಗೇಗೌಡ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ’ ದೂರುದಾರರು ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.