ADVERTISEMENT

ಬೆಂಕಿ ಅವಘಡ: ಮಾಲೀಕರ ವಿರುದ್ಧ ಮತ್ತೊಂದು ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 19:30 IST
Last Updated 12 ನವೆಂಬರ್ 2020, 19:30 IST
ಕಾರ್ಖಾನೆ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡ
ಕಾರ್ಖಾನೆ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡ   

ಬೆಂಗಳೂರು: ಮೈಸೂರು ರಸ್ತೆಯ ಬಾಪೂಜಿನಗರದಲ್ಲಿರುವ ‘ರೇಖಾ ಕೆಮಿಕಲ್ಸ್ ಆ್ಯಂಡ್ ಅಸೋಸಿಯೇಷನ್’ ಕಾರ್ಖಾನೆ ಗೋದಾಮಿನಲ್ಲಿ ಸಂಭವಿಸಿದ್ದ ಬೆಂಕಿ ಅವಘಡ ಸಂಬಂಧ ಮಾಲೀಕರ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ.

ಅವಘಡ ಸಂಬಂಧ ಸ್ಫೋಟಕಗಳ ಕಾಯ್ದೆ ಅಡಿ ಬ್ಯಾಟರಾಯನಪುರ ಠಾಣೆಯಲ್ಲಿ ಈಗಾಗಲೇ ಒಂದು ಪ್ರಕರಣ ದಾಖಲಾಗಿದೆ. ಮಾಲೀಕರಾದ ಕಮಲಾ, ಅವರ ಪತಿ ಸಜ್ಜನ್ ರಾವ್ ಹಾಗೂ ಪುತ್ರ ಅನಿಲ್‌ ಎಂಬುವರನ್ನು ಬುಧವಾರವೇ ಬಂಧಿಸಲಾಗಿದೆ.

ಇದೀಗ ಟೆಂಪೊ ಚಾಲಕ ಶಂಭುಲಿಂಗ ಎಂಬುವರು ದೂರು ನೀಡಿದ್ದು, ಅದರನ್ವಯ ಮಾಲೀಕರ ವಿರುದ್ಧ ಪೊಲೀಸರು ಎರಡನೇ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ADVERTISEMENT

‘ದೂರುದಾರರು ತಮ್ಮ ಟೆಂಪೊವನ್ನು ತೆಗೆದುಕೊಂಡು ಬಾಪೂಜಿನಗರಕ್ಕೆ ಬಂದಿದ್ದರು. ಕಾರ್ಖಾನೆ ಸಮೀಪದ ರಸ್ತೆ ಪಕ್ಕದಲ್ಲಿ ಟೆಂಪೊ ನಿಲ್ಲಿಸಿ ಟೀ ಕುಡಿಯಲು ಹೋಗಿದ್ದರು. ಅದೇ ವೇಳೆ ಬೆಂಕಿ ಅವಘಡ ಸಂಭವಿಸಿ, ಅವರ ಟೆಂಪೊ ಸಂಪೂರ್ಣವಾಗಿ ಸುಟ್ಟು ಹೋಗಿದೆ. ಈ ಸಂಗತಿ ದೂರಿನಲ್ಲಿದೆ’ ಎಂದು ಪೊಲೀಸರು ಹೇಳಿದರು.

‘ಘಟನೆಯಲ್ಲಿ ಗೋದಾಮು ಸಂಪೂರ್ಣ ಸುಟ್ಟಿದ್ದು, ಗೋಡೆಗಳು ನೆಲಕ್ಕುರುಳಿವೆ. ಅಕ್ಕ–ಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ವಾಹನಗಳು ಸುಟ್ಟಿವೆ. ಅವಘಡದಿಂದಾಗಿ ₹ 50 ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.