ADVERTISEMENT

ಹೊತ್ತಿ ಉರಿದ ತೈಲ ದಾಸ್ತಾನು ಗೋದಾಮು

​ಪ್ರಜಾವಾಣಿ ವಾರ್ತೆ
Published 13 ಮೇ 2025, 16:11 IST
Last Updated 13 ಮೇ 2025, 16:11 IST
ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೋದಾಮು
ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೋದಾಮು   

ನೆಲಮಂಗಲ: ಬೆಂಗಳೂರು ಉತ್ತರ ತಾಲ್ಲೂಕಿನ ಅಡಕಮಾರನಹಳ್ಳಿಯಲ್ಲಿ ಶೆಲ್ ಆಯಿಲ್ ಕಂಪನಿಯ ಉತ್ಪನ್ನಗಳನ್ನು ದಾಸ್ತಾನು ಮಾಡಿದ್ದ ಗೋದಾಮಿನಲ್ಲಿ ಮಂಗಳವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ನಷ್ಟವಾಗಿದೆ.

ಬೆಂಗಳೂರಿನ ಕೃಷ್ಣಪ್ಪ ಅವರಿಗೆ ಸೇರಿದ ಗೋದಾಮನ್ನು ಬಾಡಿಗೆಗೆ ಪಡೆದಿದ್ದ ಶೆಲ್‌ ಕಂಪನಿ, ತೈಲ ಹಾಗೂ ಇತರೆ ಇಂಧನ ಉತ್ಪನ್ನಗಳನ್ನು ಬ್ಯಾರೆಲ್‌ಗಳಲ್ಲಿ ಶೇಖರಿಸಿ ಇಟ್ಟಿತ್ತು.

ಮಂಗಳವಾರ ನಸುಕಿನ ವೇಳೆ ಬೆಂಕಿ ಅವಘಡ ಸಂಭವಿಸಿದೆ. ಗೋದಾಮಿನ ತುಂಬ ತೈಲ ಶೇಖರಣೆ ಮಾಡಿಕೊಂಡಿದ್ದರಿಂದ ಬೆಂಕಿ ಬೇಗನೆ ವ್ಯಾಪಿಸಿ ಧಗಧಗನೆ ಹೊತ್ತಿ ಉರಿಯಿತು. ಬೆಂಕಿ ಕಾಣಿಸಿಕೊಂಡಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು.

ADVERTISEMENT

ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಮಂಗಳವಾರ ಮಧ್ಯಾಹ್ನದವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ನೆಲಮಂಗಲ, ಪೀಣ್ಯ, ಯಶವಂತಪುರ ಭಾಗದ ಸುಮಾರು 15 ಅಗ್ನಿಶಾಮಕ ವಾಹನಗಳು, 80ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

‘ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿಯ ತೀವ್ರತೆಗೆ ತೈಲದ ಬ್ಯಾರೆಲ್‌ಗಳು ಒಡೆದು ಗೋದಾಮಿನ ಹೊರಗೂ ತೈಲ ಹರಿದು ಬೆಂಕಿ ವ್ಯಾಪಿಸಿ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು’ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಪ್ರಾಥಮಿಕ ತನಿಖೆಯ ಪ್ರಕಾರ ಬೆಂಕಿ ಅವಘಡಕ್ಕೆ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ ಕಾರಣ ಎಂಬುದು ಗೊತ್ತಾಗಿದೆ. ತನಿಖೆ ಮುಂದುವರೆದಿದೆ’ ಎಂದು ಪೊಲೀಸರು ಹೇಳಿದರು.

ದಟೈಸಿದ ಹೊಗೆ: ಬೆಂಕಿಯ ಕೆನ್ನಾಲಿಯಿಂದ ಹೊಗೆ ಸುತ್ತಮುತ್ತ ಆವರಿಸಿತ್ತು. ಇದರಿಂದ ಸುತ್ತಮುತ್ತಲ ಗ್ರಾಮದ ಮನೆ ಹಾಗೂ ಕೈಗಾರಿಕೆಗಳಿಗೆ ಬೆಂಕಿ ತಗುಲುವ ಭಯ ಆವರಿಸಿತ್ತು. ಕಪ್ಪಾದ ಹೊಗೆಯು ಇಡೀ ಪ್ರದೇಶವನ್ನು ಆವರಿಸಿತ್ತು. ಬೆಂಕಿ ಅವಘಡ ಸಂಭವಿಸಿರುವುದು ಬಹುದೂರದವರೆಗೂ ಕಾಣಿಸುತ್ತಿತ್ತು. ಮಾದನಾಯಕನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಬೆಂಕಿಯ ಕೆನ್ನಾಲಿಗೆ 
ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೋದಾಮು
ಬೆಂಕಿಯ ಕೆನ್ನಾಲಿಗೆ 
ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೋದಾಮು
ಬೆಂಕಿ ಅವಘಡದಲ್ಲಿ ಹೊತ್ತಿ ಉರಿದ ಗೋದಾಮು

ಟೋಲ್‌ ಲಾಜಿಸ್ಟಿಕ್‌ ಸಂಸ್ಥೆಯ ನಿರ್ವಹಣೆ

ಗೋದಾಮನ್ನು ‘ಟೋಲ್ ಲಾಜಿಸ್ಟಿಕ್ಸ್’ ಎಂಬ ಸಂಸ್ಥೆ ನಿರ್ವಹಿಸುತ್ತಿದೆ. ‘ಗೋದಾಮನ್ನು ಬಾಡಿಗೆಗೆ ಪಡೆದು ನಮ್ಮ ಕಂಪನಿಯ ಉತ್ಪನ್ನಗಳನ್ನು ಸಂಗ್ರಹಣೆ ಮಾಡಲಾಗಿತ್ತು’ ಎಂದು ಶೆಲ್‌ ಕಂಪನಿ ತಿಳಿಸಿದೆ. ಬೆಂಕಿ ಅವಘಡದಲ್ಲಿ ಸಾವು–ನೋವು ಸಂಭವಿಸಿಲ್ಲ. ಬೆಂಕಿ ಅವಘಡ ಸಂಭವಿಸಿದ ಮಾಹಿತಿ ತಿಳಿದ ತಕ್ಷಣವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಉದ್ಯೋಗಿಗಳು ಪಾಲುದಾರರು ಮತ್ತು ಸುತ್ತಮುತ್ತಲಿನ ಜನರ ಸುರಕ್ಷತೆಯೇ ಕಂಪನಿಯ ಮೊದಲ ಆದ್ಯತೆಯಾಗಿದೆ. ಬೆಂಕಿ ಅವಘಡಕ್ಕೆ ಕಾರಣ ಏನು ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಹೆಚ್ಚಿನ ತೈಲ ದಾಸ್ತಾನು?

ಮುಂಬೈಯಿಂದ ಬರುತ್ತಿದ್ದ ತೈಲ ಹಾಗೂ ಇತರ ಇಂಧನ ಉತ್ಪನ್ನವನ್ನು ಇಲ್ಲಿ ಶೇಖರಿಸಿ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಪೂರೈಸಲಾಗುತ್ತಿತ್ತು. ಗೋದಾಮಿಗೆ ಪರವಾನಗಿ ಇತ್ತು. ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಸಂಘರ್ಷದ ವಾತಾವರಣ ಇದ್ದುದರಿಂದ ತೈಲದ ಕೊರತೆ ಆಗಬಹುದೆಂದು ಭಾವಿಸಿ ಹೆಚ್ಚಿನ ಪ್ರಮಾಣದಲ್ಲಿ ಶೇಖರಣೆ ಮಾಡಿಕೊಳ್ಳಲಾಗಿತ್ತು ಎಂದು ಹೇಳಲಾಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.